- ಸಾವಿರಾರು ನಿವೇಶನ ಹಂಚಿಕೆ ಕುರಿತು ಮತ್ತೆ ವಿಚಾರಣೆ ಆರಂಭ - ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಿ-ರಿಪೋರ್ಟ್ ವಜಾಗೊಳಿಸಿದ್ದ ನ್ಯಾಯಾಲಯ ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಡ್ಯ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವನ್ನು ಸಿಬಿಐ ಬಿಟ್ಟೂ ಬಿಡದಂತೆ ಕಾಡುತ್ತಿದೆ. ೧೦೭ ನಿವೇಶನಗಳ ಅಕ್ರಮ ಹಂಚಿಕೆ ಹೊರತುಪಡಿಸಿ ಹೆಚ್ಚುವರಿ ಬಡ್ಡಿ, ಒಂದೇ ಕಂತು ಸ್ಕೀಂ, ನಿಮ್ಮ ಆಯ್ಕೆ ಸ್ಕೀಂನಡಿ ಹಂಚಿಕೆ ಮಾಡಿದ್ದ ನಿವೇಶನಗಳ ಕುರಿತಂತೆ ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆ ಆರಂಭಿಸಿದ್ದಾರೆ. ಶುಕ್ರವಾರ ನಗರದ ಪ್ರವಾಸಿಮಂದಿರಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳು ಮುಡಾ ನೌಕರರು, ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಕಡತಗಳ ಮರುಪರಿಶೀಲನೆ ನಡೆಸಿದರು. ಈ ಪ್ರಕರಣಗಳಲ್ಲಿ ಯಾರು ಯಾರಿಗೆ ನೋಟಿಸ್ ಜಾರಿ ಮಾಡಬೇಕೆಂಬ ಕುರಿತು ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿವೇಶನ ಹಂಚಿಕೆ ಸಮಯದಲ್ಲಿ ಮುಡಾದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ನಿವೃತ್ತರಾಗಿರುವವರನ್ನೂ ಸ್ಥಳಕ್ಕೆ ಕರೆಸಿಕೊಂಡು ನಿವೇಶನಗಳ ಪ್ರಕ್ರಿಯೆ ಹೇಗೆ ನಡೆಯಿತು. ಯಾವ ಹಂತದಲ್ಲಿ ನ್ಯೂನತೆಗಳಾಗಿವೆ. ಈ ದೋಷಗಳಿಗೆ ಕಾರಣರು ಯಾರು ಎಂಬುದು ಸೇರಿದಂತೆ ಅನೇಕ ಮಾಹಿತಿ ಸಂಗ್ರಹಿಸಿದ್ದಾರೆ. ಒಂದೇ ಕಂತು ಸ್ಕಿಂ ನಡಿ ೪೨೬, ನಿಮ್ಮ ಆಯ್ಕೆ ಸ್ಕಿಂ ನಡಿ ೩೪೪ ಹಾಗೂ ಅವಧಿ ವಿಸ್ತರಿಸಿ ಹೆಚ್ಚುವರಿ ಬಡ್ಡಿ ಪಾವತಿಸಿಕೊಂಡಿರುವ ಸುಮಾರು ೯೪೪ ನಿವೇಶನ ಪ್ರಕರಣ ಸೇರಿದಂತೆ ೧೮೦೦ ನಿವೇಶನಗಳ ಅಕ್ರಮ ಮಾರಾಟದಲ್ಲಿ ಪ್ರಾಧಿಕಾರದ ಆಗಿನ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಭಾಗಿಯಾಗಿರುವುದು ಕಂಡು ಬಂದಿರುವುದರಿಂದ ಇವೆಲ್ಲವೂ ಸಿಬಿಐ ಅಧಿಕಾರಿಗಳ ತನಿಖಾ ಗಾಳದೊಳಗೆ ಸಿಲುಕಿವೆ. ೨೭ ಅಕ್ಟೋಬರ್ ೨೦೨೨ರಂದು ನಿಮ್ಮ ಆಯ್ಕೆ. ಒಂದೇ ಕಂತು. ಹೆಚ್ಚುವರಿ ಬಡ್ಡಿ ಪ್ರಕರಣಗಳ ಸ್ಕೀಂನಡಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ಪ್ರಕರಣಗಳ ಕುರಿತಂತೆ ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್‌ನ್ನು ವಜಾಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ ಮರು ತನಿಖೆಗೆ ಆದೇಶ ಹೊರಡಿಸಿದೆ. ಇದರಿಂದಾಗಿ ತನಿಖೆಯಿಂದ ಮುಕ್ತಿಯೇ ದೊರಕದಂತಾಗಿದೆ. ಇದೀಗ ಮತ್ತೆ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು ಆರಂಭದಿಂದ ವಿಚಾರಣೆಯನ್ನು ಶುರು ಮಾಡಿದ್ದಾರೆ. ಅಕ್ರಮಗಳಲ್ಲಿ ಯಾರು ಯಾರು ಭಾಗಿಯಾಗಿದ್ದಾರೆಂಬುದನ್ನು ಗುರುತಿಸಿ ನೋಟೀಸ್ ನೀಡಲು ಅಣಿಯಾಗುತ್ತಿದ್ದಾರೆ. ಬಾಕ್ಸ್... ಲಾಟರಿ ಸ್ಕೀಂ ವಿವೇಕಾನಂದ ನಗರ ಬಡಾವಣೆಯಲ್ಲಿ ೨೦೦೨ರಲ್ಲಿ ಲಾಟರಿ ಮೂಲಕ ಮೊದಲ ಹಂತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಹಂಚಿಕೆಯಾದವರಿಗೆ ೧೫ ದಿನಗಳೊಳಗೆ ಶೇ.೨೫ರಷ್ಟು ಮೊತ್ತವನ್ನು, ೬೦ ದಿನಗಳೊಳಗೆ ಉಳಿಕೆ ಮೊತ್ತವನ್ನು ಪಾವತಿ ಮಾಡುವಂತೆ ಸೂಚಿಸಿತ್ತು. ಸರ್ಕಾರದ ಆದೇಶದಂತೆ ೨೦೦೧ರಿಂದ ೨೦೦೫ರ ಅವಧಿಯಲ್ಲಿ ನೇರ ಕ್ರಯಪತ್ರ ಮಾಡುವ ಅವಕಾಶ ನೀಡಲಾಗಿತ್ತು. ಆದರೆ, ೬೦ ದಿನಗಳ ಕಾಲಾವಕಾಶ ನೀಡದೆ ಯಾವುದೇ ಬಡ್ಡಿಯನ್ನು ವಿಧಿಸದೆ ೩೦ ದಿನಗಳ ಅವಧಿಗೆ ಕಾಲಾವಕಾಶ ಸೀಮಿತಗೊಳಿಸಿ ಶೇ.೧೮ ಬಡ್ಡಿ ಪಾವತಿಸಿಕೊಂಡು ೪೩೪ ನಿವೇಶನಗಳನ್ನು ಲಾಟರಿ ಸ್ಕೀಂನಲ್ಲಿ ಹಂಚಿಕೆ ಮಾಡಲಾಗಿತ್ತು. ಹೆಚ್ಚುವರಿ ಬಡ್ಡಿ ಪ್ರಕರಣ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಸಂಚಿಕೆ ನಿಯಮ ೧೯(೧) ರಂತೆ ಮೊದಲ ೩೦ ದಿನದ ನಂತರ ಶೇ.೧೮ರ ಬಡ್ಡಿಯೊಂದಿಗೆ ೬೦ ದಿನಗಳೊಳಗೆ ಮೊತ್ತ ಪಾವತಿಸದಿದ್ದಲ್ಲಿ ಮುಂದೆ ಕಾಲವಕಾಶ ಮುಂದುವರಿಸಲು ಅವಕಾಶವಿರುವುದಿಲ್ಲ ಹಾಗೂ ನಿವೇಶನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿರುತ್ತದೆ. ಆದರೆ, ನಿವೇಶನ ಮುಟ್ಟುಗೋಲು ಹಾಕಿಕೊಳ್ಳದೆ, ಬಡ್ಡಿಯನ್ನು ಸರಿಯಾಗಿ ಪಾವತಿಸಿಕೊಳ್ಳದೆ, ಪ್ರಾಧಿಕಾರದ ಅಧಿಕಾರಿಗಳು ಅವರಿಗೆ ಇಷ್ಟ ಬಂದಂತೆ ನಿಯಮ ಬಾಹಿರವಾಗಿ ೯೦ ದಿನಗಳ ನಂತರ, ವಿವಿಧ ಪ್ರಕರಣಗಳಲ್ಲಿ ವಿವಿಧ ರೀತಿಯಲ್ಲಿ ಅಂದರೆ ಸುಮಾರು ೭ ವರ್ಷಗಳ ಅವಧಿವರೆಗೂ ಸಮಯಾವಕಾಶ ನೀಡಿ ಬಡ್ಡಿ ಪಾವತಿಸಿಕೊಂಡು ಕ್ರಯ ಪತ್ರ ನೀಡಿರುವುದು ಕಂಡು ಬಂದಿದೆ, ಒಂದೇ ಕಂತು ಸ್ಕೀಂ ವಿವೇಕಾನಂದ ನಗರ ಬಡಾವಣೆಯಲ್ಲಿ ೨೦೦೨ರಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾದ ನಿವೇಶನಗಳ ಪೈಕಿ ಹಲವರು ಹಂಚಿಕೆ ಪಡೆದ ನಿವೇಶನಗಳಿಗೆ ಪೂರ್ಣ ಮೌಲ್ಯವನ್ನು ಪಾವತಿಸದೇ ಅಥವಾ ಕಟ್ಟಿದ್ದ ಠೇವಣಿ ಮೊತ್ತವನ್ನು ವಾಪಸ್ ಪಡೆದಿದ್ದರಿಂದ ನಿವೇಶನಗಳು ಖಾಲಿ ಉಳಿದಿರುತ್ತವೆ. ಬಾಕಿ ಉಳಿದಿದ್ದ ಬಿಡಿ ನಿವೇಶನಗಳನ್ನು ಹರಾಜು ಮಾಡದೆ ಕಾನೂನು ಬಾಹಿರವಾಗಿ ಈ ಹಿಂದೆ ಹಂಚಿಕೆಯಾಗದೆ. ಉಳಿದಿದ್ದ ಆರ್ಜಿದಾರರಿಗೆ ನೇರವಾಗಿ ಪತ್ರ ಬರೆದು ಒಂದೇ ಕಂತಿನಲ್ಲಿ ಹಣ ಪಾವತಿಸಲು ಸೂಚಿಸಲಾಗಿದೆ. ಆದರಂತೆ ಹಲವರು ಒಂದೇ ಕಂತಿನಲ್ಲಿ ಹಣವನ್ನು ಪಾವತಿಸಿ ಕ್ರಯ ಪತ್ರವನ್ನು ಮಾಡಿಸಿಕೊಂಡಿರುತ್ತಾರೆ. ನಿಮ್ಮ ಆಯ್ಕೆ ಸ್ಕೀಂ ಈ ಮೇಲಿನ ಮೂರು ಸ್ಕೀಂಗಳಿಂದಲೂ ಉಳಿದ ಖಾಲಿ ನಿವೇಶನಗಳು ಬಿಡಿ ನಿವೇಶನಗಳಾಗಿದ್ದು ಕಡ್ಡಾಯವಾಗಿ ಹರಾಜು ಮಾಡಬೇಕಿತ್ತು. ಆದರೆ, ಹರಾಜು ಮಾಡದೆ ಕಾನೂನುಬಾಹೀರವಾಗಿ ಹಂಚಿಕೆ ಮಾಡಲು ಸಾರ್ವಜನಿಕ ಪ್ರಕಟಣೆ ನೀಡಿ ಆಸಕ್ತಿಯುಳ್ಳ ಅರ್ಜಿದಾರರು ಪ್ರಕಟಣೆಯಲ್ಲಿ ತಿಳಿಸಿದಂತೆ ಅವರಿಗೆ ಬೇಕಾಗಿರುವ ನಿವೇಶನಗಳನ್ನು ಅವರೇ ಆರಿಸಿಕೊಂಡು ಚದರಡಿಗೆ ೧೦೦ ರು. ಪಾವತಿಸಿಕೊಂಡು ಆಯ್ಕೆ ಮಾಡಿಕೊಂಡ ನಿವೇಶನಗಳನ್ನು ಅರ್ಜಿದಾರರಿಗೆ ಸ್ವಾಧೀನ ಪ೯ತ್ರ ಮತ್ತು ಕ್ರಯಪತ್ರ ನೀಡಲಾಗಿದೆ.