- ಪಾಂಡವಪುರಕ್ಕೆ ತೆರಳಲು ಸರ್ವಿಸ್ ರಸ್ತೆಗೆ ನೀಡಿದ್ದ ಎಕ್ಸಿಟ್ - ಟೋಲ್ ಸಿಬ್ಬಂದಿ -ವಾಹನ ಸವಾರರ ನಡುವೆ ವಾಗ್ವಾದ - ಬಂದ್ ಮಾಡಲು ಬಂದವರಿಗೆ ತರಾಟೆ ಕನ್ನಡಪ್ರಭ ವಾರ್ತೆ ಮಂಡ್ಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ ಬಂದ್ ಮಾಡಲು ಬಂದ ಟೋಲ್ ಸಿಬ್ಬಂದಿಗೆ ವಾಹನ ಸವಾರರು ತರಾಟೆ ತೆಗೆದುಕೊಂಡ ಘಟನೆ ತಾಲೂಕಿನ ತೂಬಿನಕೆರೆ ಬಳಿ ಶುಕ್ರವಾರ ನಡೆಯಿತು. ಗಣಂಗೂರು ಟೋಲ್ ಪ್ಲಾಜಾಗೆ ೩ ಕಿ.ಮೀ. ದೂರದಲ್ಲಿರುವ ತೂಬಿನಕೆರೆ ಬಳಿ ಎಕ್ಸಿಟ್ ಪಾಯಿಂಟ್ ಇದೆ. ಬೆಂಗಳೂರು ಕಡೆಯಿಂದ ಮೈಸೂರಿಗೆ ತೆರಳುವ ಕೆಲವು ವಾಹನಗಳು ತೂಬಿನಕೆರೆ ಬಳಿಯೇ ಸರ್ವೀಸ್ ರಸ್ತೆಗಿಳಿದು ಅದರ ಮೂಲಕ ಮೈಸೂರು ಕಡೆಗೆ ಹಾದುಹೋಗುತ್ತಿದ್ದವು. ಎಕ್ಸ್‌ಪ್ರೆಸ್-ವೇನಲ್ಲಿ ಸಂಚರಿಸುವ ಕೆಲವು ವಾಹನಗಳು ಟೋಲ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲಲ್ಲಿ ಇರುವ ಎಕ್ಸಿಟ್ ಪಾಯಿಂಟ್‌ಗಳಲ್ಲಿ ಸರ್ವೀಸ್ ರಸ್ತೆ ಕಡೆ ಮುಖ ಮಾಡುತ್ತಿವೆ. ಟೋಲ್ ಪಾಯಿಂಟ್ ಮುಗಿದ ನಂತರ ಮುಂದಿರುವ ಮತ್ತೊಂದು ಎಂಟ್ರಿ ಪಾಯಿಂಟ್ ಮೂಲಕ ಮತ್ತೆ ಎಕ್ಸ್‌ಪ್ರೆಸ್-ವೇಗೆ ಇಳಿಯುವ ಚಾಣಾಕ್ಷತನವನ್ನು ವಾಹನ ಸವಾರರು ಪ್ರದರ್ಶಿಸುತ್ತಿದ್ದಾರೆ. ಇದು ಟೋಲ್ ಸಿಬ್ಬಂದಿಗೆ ದೊಡ್ಡ ತಲೆನೋವು ತಂದಿದ್ದರೆ, ಟೋಲ್ ಸಂಗ್ರಹಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ಗಮನಿಸಿದ ಟೋಲ್ ಸಿಬ್ಬಂದಿ ತೂಬಿನಕೆರೆ ಬಳಿ ನಿರ್ಮಿಸಿರುವ ಎಕ್ಸಿಟ್ ಪಾಯಿಂಟ್ ಬಂದ್ ಮಾಡಲು ಮುಂದಾಗಿದ್ದರು. ಟೋಲ್ ಸಿಬ್ಬಂದಿ ಬಳಿ ಬಂದ ವಾಹನ ಸವಾರರು ಎಕ್ಸಿಟ್ ಪಾಯಿಂಟ್ ಬಂದ್ ಮಾಡದಂತೆ ಪಟ್ಟು ಹಿಡಿದರು. ನೀವು ಸರ್ವಿಸ್ ರಸ್ತೆಯಲ್ಲಿ ನೂರಾರು ರಸ್ತೆ ದಿಬ್ಬ ನಿರ್ಮಿಸಿದ್ದೀರಿ. ಮೊದಲು ಸರ್ವಿಸ್ ರಸ್ತೆಯನ್ನು ಸರಿಪಡಿಸಿ. ಆ ನಂತರ ಎಕ್ಸಿಟ್ ಬಂದ್ ಮಾಡಿ. ಇಲ್ಲವೇ ಮೊದಲಿದ್ದ ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯನ್ನೇ ಕೊಡುವಂತೆ ಒತ್ತಾಯಿಸಿದರು. ನೀವು ಎಕ್ಸಿಟ್ ಬಂದ್ ಮಾಡಿದರೆ ನಮಗೆ ಪಾಂಡವಪುರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೂ ತೂಬಿನಕೆರೆ ಎಕ್ಸಿಟ್ ಪಾಯಿಂಟ್ ಬಂದ್ ಮಾಡದಂತೆ ತಾಕೀತು ಮಾಡಿದರು. ಈ ವಿಷಯವಾಗಿ ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರು ಪರಸ್ಪರ ವಾಗ್ವಾದ ನಡೆಸಿದರು. ವಿರೋಧದ ನಡುವೆಯೂ ಎಕ್ಸಿಟ್ ಪಾಯಿಂಟ್‌ನ್ನು ಟೋಲ್ ಸಿಬ್ಬಂದಿ ಬಂದ್ ಮಾಡಿದರು.