- ಮಹಾಬಲೇಶ್ವರ ಹೊನ್ನೆಮಡಿಕೆ.
ಆಷಾಢ ಶುಕ್ಲಪಕ್ಷ, ಶ್ರಾವಣ, ಭಾದ್ರಪದ ಹಾಗೂ ಆಶ್ವೀಜ ಮಾಸ ಪೂರ್ತಿ ಮತ್ತು ಕಾರ್ತಿಕ ಶುಕ್ಲಪಕ್ಷ ಸೇರಿ ನಾಲ್ಕು ತಿಂಗಳು ಈ ವ್ರತಾಚರಣೆ ಇರುತ್ತದೆ.
ವರಾಹ ಪುರಾಣದಲ್ಲಿ ಬರುವ ಉಲ್ಲೇಖದಂತೆ ಈ ನಾಲ್ಕು ತಿಂಗಳು ಮಹಾವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ನೀವು ಪೂಜಾದಿ ವ್ರತಾಚರಣೆಯಲ್ಲಿ ತೊಡಗಿಕೊಂಡರೆ ಲಕ್ಷ್ಮೀ ಹಾಗೂ ನಾರಾಯಣನ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಐಶ್ವರ್ಯ, ಸಂತೋಷ ಹಾಗೂ ಸಮೃದ್ಧಿಯನ್ನು ಪಡೆಯಬಹುದು ಎನ್ನುತ್ತವೆ ಶಾಸ್ತ್ರಗಳು.ಆಷಾಢದಲ್ಲೇ ಈ ವ್ರತಾಚರಣೆ ಏಕೆ?:
ಹಿಂದೂ ಪುರಾಣಗಳ ಪ್ರಕಾರ, ಭೂಮಿಯ ಒಂದು ವರ್ಷ ಎನ್ನುವುದು ದೇವತೆಗಳಿಗೆ ಒಂದು ದಿನದ ಅವಧಿ. ಅಂದರೆ, ದೇವತೆಗಳಿಗೆ ಪುಷ್ಯಮಾಸದಿಂದ ಆಷಾಢ ಮಾಸದವರೆಗೆ ಹಗಲು (ಉತ್ತರಾಯಣ) ಮತ್ತು ಆಷಾಢಮಾಸದಿಂದ ಪುಷ್ಯಮಾಸದವರೆಗೆ ರಾತ್ರಿ (ದಕ್ಷಿಣಾಯನ). ಅಂದರೆ, ಚಾತುರ್ಮಾಸ್ಯದ ಈ ಅವಧಿ ದೇವರಿಗೆ ರಾತ್ರಿ ಕಾಲ. ಜೊತೆಗೆ ಇದು ದಕ್ಷಿಣಾಯನ ಕಾಲ. ಈ ಅವಧಿಯಲ್ಲಿ ಸೂರ್ಯ ಉತ್ತರ ಧ್ರುವದಿಂದ ದಕ್ಷಿಣ ಧ್ರುವದತ್ತ ಪ್ರಯಾಣ ಬೆಳೆಸುತ್ತಾನೆ. ನಾವು ವಾಸವಿರುವ ಈ ಭರತ ಭೂಮಿ ಸಮಭಾಜಕ ವೃತ್ತದಿಂದ ಉತ್ತರದಲ್ಲಿದ್ದು, ಭೂಮಿಯ ಉತ್ತರ ಹಾಗೂ ಪೂರ್ವ ಗೋಳದಲ್ಲಿ ಬರುತ್ತದೆ. ಹೀಗಾಗಿ, ಜೀವಚೈತನ್ಯದ ಮೂಲವಾಗಿರುವ ಸೂರ್ಯ ನಮ್ಮತ್ತ ಮುಖ ತಿರುಗಿಸಿ, ದಕ್ಷಿಣದತ್ತ ಪ್ರಯಾಣ ಬೆಳೆಸುವ ಹಾಗೂ ನಮ್ಮೆಲ್ಲರ ಪಾಲಕನಾದ ದೇವರು ನಿದ್ರೆಗೆ ಜಾರುವ ಈ ಅವಧಿ ಅಶುಭವಾಗಿದ್ದು, ಈ ಅವಧಿಯಲ್ಲಿ ಮದುವೆ, ದೇವರ ಪ್ರತಿಷ್ಠೆಯಂತಹ ಶುಭ ಕಾರ್ಯಗಳನ್ನು ಮಾಡಬಾರದು. ಬದಲಾಗಿ ಪುಣ್ಯವೃದ್ಧಿಗೆ ಪೂರಕವಾದ ಪೂಜೆ, ಧ್ಯಾನ, ಯೋಗ, ಯಾಗಾದಿಗಳಂತಹ ದೇವತಾರಾಧನೆಯಲ್ಲಿ ತೊಡಗಿ ಪುಣ್ಯ ಸಂಪಾದಿಸಿಕೊಳ್ಳಬೇಕು ಎಂಬುದು ಭಕ್ತರ ನಂಬಿಕೆ. ಹೀಗಾಗಿ, ಉತ್ಥಾನ ಏಕಾದಶಿಯ ಮರುದಿನ ಬರುವ ಕುಡಿ ದ್ವಾದಶಿ ಅಥವಾ ತುಳಸಿ ಮದುವೆಯ ನಂತರವೇ ಮಂಗಳ ಕಾರ್ಯಗಳನ್ನು ಮಾಡುವ ಪದ್ಧತಿ ಬೆಳೆದು ಬಂದಿದೆ.
ಸರ್ವಶಕ್ತನಾದ, ಎಲ್ಲವನ್ನೂ ನಿಗ್ರಹಿಸುವ ಸಾಮರ್ಥ್ಯ ಹೊಂದಿರುವ ವಿಷ್ಣುವಿಗೆ ಅಂದರೆ ದೇವರಿಗೆ ನಿದ್ರೆ ಅಥವಾ ಯೋಗ ನಿದ್ರೆ ಬೇಕೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಏಳುವುದು ಸಹಜ. ಬೇಕು, ಏಕೆಂದರೆ, ಕಾಲನ ನಿಯಮಕ್ಕೆ ಯಾರೂ ಅತೀತರಲ್ಲ, ಇದಕ್ಕೆ ದೈವಿ ಶಕ್ತಿಯೂ ಹೊರತಲ್ಲ. ಹೀಗಾಗಿ, ಕರ್ತವ್ಯ ನಿಷ್ಠೆಯಲ್ಲಿ ವ್ಯಯವಾಗುವ ಶಕ್ತಿಯನ್ನು ಮತ್ತೆ ಗಳಿಸಿಕೊಳ್ಳಲು, ಚಿತ್ತ ಸಂಯಮ ಸಾಧಿಸಲು ದೇವನಿಗೂ ಯೋಗ, ತಪಸ್ಸು ಬೇಕು. ಆತನ ಶಕ್ತಿ ವರ್ಧನೆಗೆ ಇದು ಪೂರಕ.
ಋಷಿಮುನಿಗಳು, ಸನ್ಯಾಸಿಗಳು, ಮಠಾಧೀಶರು, ಗುರುಗಳು ಈ ಕಾಲದಲ್ಲಿ ಚಾತುರ್ಮಾಸ್ಯಕ್ಕೆ ಕೂರುವುದು ಸಾಮಾನ್ಯ. ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುವವರಿಗೆ ಆಧ್ಯಾತ್ಮಿಕ ಸಾಧನೆಗಿದು ಸಕಾಲ. ಶ್ರೀಮನ್ ನಾರಾಯಣನ ಸ್ವರೂಪವೆಂದು ಪರಿಗಣಿಸಲ್ಪಟ್ಟಿರುವ ಸನ್ಯಾಸಿಗಳು ಈ ವ್ರತವನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುತ್ತಾರೆ.
ಅವರು ಒಂದೇ ಸ್ಥಳದಲ್ಲಿ ನೆಲೆಸಿ ವ್ರತಾಚರಣೆಯಲ್ಲಿ ತೊಡಗುತ್ತಾರೆ. ಜಪ, ತಪ, ಯೋಗ, ಪುರಾಣ-ಪ್ರವಚನ, ಧರ್ಮ ಬೋಧನೆ, ವಿಶೇಷ ಪೂಜೆಗಳಲ್ಲಿ ತೊಡಗುತ್ತಾರೆ. ತ್ರಿಕಾಲಗಳಲ್ಲಿ ತಣ್ಣೀರು ಸ್ನಾನ ಮಾಡುವುದು, ಮಣ್ಣಿನ ಪಾತ್ರೆಗಳಲ್ಲಿ ಮಾಡಿದ ಅಡುಗೆ ಸೇವನೆ, ನೆಲದ ಮೇಲೆ ಊಟ, ಶಯನ, ನಿತ್ಯ ಪಂಚಗವ್ಯ ಪ್ರಾಶನ, ಅಗ್ನಿಷ್ಟೋಮ ಯಾಗ, ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆಯಲ್ಲಿ ತೊಡಗುವುದು, ಕಟ್ಟುನಿಟ್ಟಿನ ಉಪವಾಸ, ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿಯಂತಹ ಕಾಮವರ್ಧಕ ಆಹಾರಗಳನ್ನು ತ್ಯಜಿಸುವುದು ವ್ರತದ ನಿಯಮಗಳಲ್ಲಿ ಸೇರಿವೆ.
ಇನ್ನು, ನಾಲ್ಕು ತಿಂಗಳ ವ್ರತ ಮಾಡಲಾಗದವರು ಒಂದು ಯಾಮ ಅಥವಾ 2 ಯಾಮದ (ಒಂದು ಯಾಮ ಎಂದರೆ ಇಡೀ ರಾತ್ರಿಯ 4ನೇ ಒಂದು ಭಾಗ) ವ್ರತ ಕೈಗೊಳ್ಳುತ್ತಾರೆ. ಅಂದರೆ, 2 ತಿಂಗಳು, 1 ತಿಂಗಳು, 15 ದಿನಗಳ ವ್ರತಾಚರಣೆ ಕೈಗೊಳ್ಳುತ್ತಾರೆ. ಕೆಲವರು ಶಯನಿ ಏಕಾದಶಿಯಿಂದ ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಿದರೆ, ಕೆಲವರು ಆಷಾಢ ಹುಣ್ಣಿಮೆ, ವ್ಯಾಸ ಪೂರ್ಣಿಮೆಯಂದು ವ್ಯಾಸ ಪೂಜೆ ನೆರವೇರಿಸಿ ಚಾತುರ್ಮಾಸ್ಯಕ್ಕೆ ಕೂರುತ್ತಾರೆ. ಚಾತುರ್ಮಾಸ್ಯದಲ್ಲಿ ತೊಡಗಿದ ಸನ್ಯಾಸಿಗಳು ಸಾಧಾರಣವಾಗಿ ನಾಲ್ಕು ತಿಂಗಳಲ್ಲಿ ನಾಲ್ಕು ವ್ರತಗಳನ್ನು ಆಚರಿಸುವುದು ವಾಡಿಕೆ.
-ಎರಡನೇ ತಿಂಗಳು (ದಧಿ ವ್ರತ): ಮೊಸರು ಮತ್ತು ಮಜ್ಜಿಗೆಯನ್ನು ವರ್ಜಿಸುವುದು. (ಶ್ರಾವಣ ಶುದ್ಧ ಏಕಾದಶಿಯಿಂದ-ಭಾದ್ರಪದ ಶುದ್ಧ ಏಕಾದಶಿ).
-ಮೂರನೇ ತಿಂಗಳು (ಕ್ಷೀರ ವ್ರತ): ಹಾಲನ್ನು ವರ್ಜಿಸುವುದು. (ಭಾದ್ರಪದ ಶುದ್ಧ ಏಕಾದಶಿಯಿಂದ-ಆಶ್ವಯುಜ ಶುದ್ಧ ಏಕಾದಶಿ).-ನಾಲ್ಕನೇ ತಿಂಗಳು (ದ್ವಿದಳ ವ್ರತ): ಉದ್ದಿನಬೇಳೆ ಹಾಗೂ ದ್ವಿದಳ ಧಾನ್ಯಗಳನ್ನು ವರ್ಜಿಸುವುದು. (ಆಶ್ವಯುಜ ಶುದ್ಧ ಏಕಾದಶಿಯಿಂದ -ಕಾರ್ತಿಕ ಶುದ್ಧ ಏಕಾದಶಿ ಅಥವಾ ಉತ್ಥಾನ ಏಕಾದಶಿ).
ಇದರ ಹೊರತಾಗಿ, ವ್ರತದ ವೇಳೆ ಅವರವರ ಅನುಕೂಲಕ್ಕೆ ತಕ್ಕಂತೆ ನಿತ್ಯ ಮತ್ತು ಕಾಮ್ಯ ಎಂಬ ಎರಡು ಪದ್ಧತಿಗಳ ಪೈಕಿ ಒಂದನ್ನು ಅನುಸರಿಸುವ ಪದ್ಧತಿಯೂ ಇದೆ. ತರಕಾರಿ, ಮೊಸರು, ಹಾಲು, ದ್ವಿದಳಧಾನ್ಯ ಇವುಗಳಲ್ಲಿ ಕ್ರಮವಾಗಿ ಒಂದೊಂದನ್ನು ಒಂದೊಂದು ತಿಂಗಳಿನಲ್ಲಿ ಬಳಸದಿರುವುದು ನಿತ್ಯವ್ರತ. ಫಲ, ತರಕಾರಿಗಳನ್ನು ಬಳಸಿ, ಬೆಲ್ಲ, ಎಣ್ಣೆ ಮೊದಲಾದ ಜಢ ಪದಾರ್ಥಗಳನ್ನು ಬಳಸದಿರುವುದು ಅಥವಾ ಒಂದು ಹೊತ್ತು ಅಥವಾ ದಿನ ಬಿಟ್ಟು ದಿನ ಊಟ ಮಾಡುವುದು ಕಾಮ್ಯವ್ರತ.ಜೈನ-ಬೌದ್ಧರಲ್ಲೂ ಇದೆ ಆಚರಣೆ:
ಚಾತುರ್ವರ್ಣಕ್ಕೆ ಸೇರಿದ ಎಲ್ಲರೂ ಅವರವರ ಪದ್ಧತಿಗೆ ಅನುಗುಣವಾಗಿ ಚಾತುರ್ಮಾಸ್ಯ ವ್ರತಾಚರಣೆ ಮಾಡಬಹುದು. ಜೈನ ಮತ್ತು ಬೌದ್ಧರಲ್ಲೂ ಇದು ಆಚರಣೆಯಲ್ಲಿದೆ. ಶೈವ-ವೈಷ್ಣವರಾದಿಯಾಗಿ ಎಲ್ಲರಿಗೂ ವ್ರತದ ವಿಧಿ ನಿಯಮಗಳು ಸಮಾನ. ಸಾಮಾನ್ಯ ಭಕ್ತರೂ ಕೂಡ ಈ ಅವಧಿಯಲ್ಲಿ ತುಳಸಿ ಪ್ರದಕ್ಷಿಣೆ, ಪೂಜೆ, ಧ್ಯಾನಗಳಲ್ಲಿ ತೊಡಗಬಹುದು. ಬ್ರಹ್ಮಚಾರಿಗಳು, ಗೃಹಸ್ಥರು, ವ್ರಾನಪ್ರಸ್ಥರು, ಸನ್ಯಾಸಿಗಳು ಸೇರಿ ಎಲ್ಲರಿಗೂ ಈ ಅವಧಿ ಪುಣ್ಯ ಸಂಚಯಕ್ಕೆ, ಆಧ್ಯಾತ್ಮಿಕ ಸಾಧನೆಗೆ ಒಂದು ಉತ್ತಮ ಅವಕಾಶ. ಚಾತುರ್ಮಾಸ್ಯದಲ್ಲಿ ಮಾಡಿದ ನದಿ ಸ್ನಾನ, ದಾನ, ಜಪ, ಹೋಮ, ಅಧ್ಯಯನ, ದೇವತಾರ್ಚನೆ ಇವೆಲ್ಲವೂ ಅಕ್ಷಯವಾಗುತ್ತವೆ ಎಂಬ ನಂಬಿಕೆ ಭಕ್ತರದು. ಆದರೆ, ಸರಿಯಾದ ಪೂಜಾ ಪದ್ಧತಿ, ಆಹಾರ ಪದ್ಧತಿ, ವ್ರತ ನಿಯಮ, ಶುದ್ಧ ನಡತೆ ಅಳವಡಿಸಿಕೊಳ್ಳದಿದ್ದರೆ ಅದು ವ್ರತಾಚರಣೆ ಎನಿಸುವುದಿಲ್ಲ. ಸರಿಯಾದ ಪ್ರತಿಫಲ ಕೂಡ ಸಿಗುವುದಿಲ್ಲ. ಹೀಗಾಗಿಯೇ ಯತಿಗಳಿಗೆ, ಸನ್ಯಾಸಿಗಳಿಗೆ ಈ ವ್ರತಾಚರಣೆ ಎಂಬ ವಾಡಿಕೆ ಜಾರಿಯಲ್ಲಿದೆ.