ಕನ್ನಡಪ್ರಭ ವಾರ್ತೆ ಹೊಸಪೇಟೆ
ಹೊಸಪೇಟೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಖರ್ಗೆ, ‘17ನೇ ತಾರೀಕಿಗೆ ಕಾಶ್ಮೀರಕ್ಕೆ ಹೋಗುವುದನ್ನು ಕ್ಯಾನ್ಸಲ್ ಮಾಡಿದ ಮೋದಿ, ಪ್ರವಾಸಿಗರನ್ನು ಯಾಕೆ ತಡೆಯಲಿಲ್ಲ. ಕಾಶ್ಮೀರದಲ್ಲಿ ಗಲಾಟೆಯಾಗುವ ಸಾಧ್ಯತೆ ಇದೆ ಎಂಬುದು ಮೋದಿಗೆ ಗೊತ್ತಿತ್ತು. ಆದರೂ ಅದನ್ನು ತಡೆಯಲಿಲ್ಲ. ಹೆಚ್ಚುವರಿ ಭದ್ರತೆ ಹಾಕಲಿಲ್ಲ. ಹೆಚ್ಚೂ ಕಡಿಮೆ ಪಾಕ್ ವಿರುದ್ಧ ಚೋಟ್ ಮೂಟ್ ಯುದ್ಧ ನಡೆದಿವೆ’ ಎಂದರು.
ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದನೆ ಕೃತ್ಯ ಖಂಡನೀಯ. ಪಾಕಿಗಳು ಹೇಡಿಗಳು. ಕೈಲಾಗದವರು. ಧರ್ಮದ ಹೆಸರಿನಲ್ಲಿ ಅಮಾಯಕ ಮುಗ್ಧರನ್ನು ಕೊಂದು ಹಾಕಿದ್ದಾರೆ. ಪಾಕಿಗಳಿಗೆ ಸ್ವಂತ ಶಕ್ತಿಯಿಲ್ಲ. ಚೀನಾದ ಬೆಂಬಲದಿಂದ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗುತ್ತಿದ್ದಾರೆ ಎಂದು ಅವರು ಪಹಲ್ಗಾಂ ಘಟನೆಯನ್ನು ಖಂಡಿಸಿದರು.ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ನಡೆಯುತ್ತಿದೆ ಎಂದು ಮೋದಿ ಅವರಿಗೆ ತಿಳಿದಿತ್ತು. ಬೇಹುಗಾರಿಕೆಯಿಂದ ಅವರಿಗೆ ಮಾಹಿತಿ ತಿಳಿದಿದ್ದರಿಂದಾಗಿಯೇ ಅವರು ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದರು. ಆದರೆ, ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯ ನಡೆಯುತ್ತಿದೆ ಎಂದು ಗೊತ್ತಿದ್ದೂ ಪಹಲ್ಗಾಂನಲ್ಲಿ ಯಾಕೆ ಪ್ರವಾಸಿಗರಿಗೆ ಭದ್ರತೆ ನೀಡಲಿಲ್ಲ. ಪ್ರವಾಸಕ್ಕೆ ಬರಬೇಡಿ ಎಂದು ಯಾಕೆ ಜನರಿಗೆ ಮುನ್ನೆಚ್ಚರಿಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮೋದಿಯೇ ಹೊಣೆ ಎಂದರು.
ಕಾಂಗ್ರೆಸ್ಸಿಗೆ ತ್ಯಾಗ-ಬಲಿದಾನದ ಪರಂಪರೆಯಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ನೀಡಿದ್ದಾರೆ. ನಮಗೆ ದೇಶಭಕ್ತಿಯ ಬಗ್ಗೆ ಹೇಳಿಕೊಡಬೇಕಾಗಿಲ್ಲ. ದೇಶ ಮೊದಲು, ಜಾತಿ, ಧರ್ಮ ಆಮೇಲೆ ಎಂದು ಮೊದಲಿನಿಂದಲೂ ಪ್ರತಿಪಾದಿಸಿಕೊಂಡೇ ಬಂದವರು ನಾವು ಎಂದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅನೇಕ ಭರವಸೆ ನೀಡಿದ್ದರು. ಆದರೆ, ಯಾವುದನ್ನೂ ಈಡೇರಿಸಲಿಲ್ಲ. ಬ್ಯಾಂಕ್ ಖಾತೆಗೆ ₹15 ಲಕ್ಷ ಜಮೆ ಆಗಲಿಲ್ಲ. ನೋಟ್ ಬ್ಯಾನ್‌ನಿಂದ ಕಪ್ಪುಹಣ ಹೊರ ಬರಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಅಧಿಕಾರಕ್ಕಾಗಿ ಮೋದಿಯವರು ಇಲ್ಲಸಲ್ಲದ ಭರವಸೆಗಳನ್ನು ನೀಡಿದರು. ನುಡಿದಂತೆ ನಡೆಯುವ ಜಾಯಮಾನ ಬಿಜೆಪಿಯವರದ್ದಲ್ಲ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಅನೇಕ ಸವಾಲುಗಳ ನಡುವೆ ಚುನಾವಣೆಗೂ ಮುನ್ನ ಮಾತು ಕೊಟ್ಟಂತೆಯೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸೈ ಎನಿಸಿಕೊಂಡಿದೆ ಎಂದು ಹೇಳಿದರು.ಮೋದಿಯೇ ಹೊಣೆ: