ವೃಷಭಾವತಿ ನದಿಯಲ್ಲಿ ಕಲ್ಮಶ ನೀರಿನ ಪ್ರವಾಹ ಹೆಚ್ಚಳ

KannadaprabhaNewsNetwork |  
Published : May 20, 2025, 11:47 PM IST
20ಕೆಆರ್ ಎಂಎನ್ 1.ಜೆಪಿಜಿಬಿಡದಿಯ ಚಿಕ್ಕಕುಂಟನಹಳ್ಳಿ ಬಳಿ ವೃಷಭಾವತಿ ನದಿಯಲ್ಲಿ ತೇಲಿಬಂದ ಕಸದ ರಾಶಿ ಸೇತುವೆ ಮೇಲೆ ಸಂಗ್ರಹವಾಗಿರುವ ದೃಶ್ಯ. | Kannada Prabha

ಸಾರಾಂಶ

ನಿತ್ಯ ಕೊಳಕು ನೀರಿನಿಂದ ತುಂಬಿದ ಬೈರಮಂಗಲ ಕೆರೆಯಿಂದ ಸುತ್ತಮುತ್ತಲ ಗ್ರಾಮಗಳು ದುರ್ವಾಸನೆ ಜತೆಗೆ ಬೃಹತ್ ಮಟ್ಟದಲ್ಲಿ ಸೊಳ್ಳೆಗಳ ಕಾಟ ಎದುರಿಸುಂತಹ ದುಸ್ಥಿತಿ ಇತ್ತು. ಬೈರಮಂಗಲ ಕೆರೆ ಶುದ್ಧೀಕರಣಕ್ಕೆ ಕೆರೆಯ ಆಸುಪಾಸಿನ ಗ್ರಾಮಗಳ ಜನತೆ ಹಾಗೂ ನಾನಾ ಸಂಘಟನೆಗಳು ಒತ್ತಾಯಿಸಿ ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರಗಳಿಗೆ ಮನವಿಯನ್ನು ಸಲ್ಲಿಸಿದ್ದರು, ಆದರೆ ಇದೀಗ ಬಿದ್ದ ಭಾರೀ ಮಳೆಗೆ ಪ್ರಕೃತಿಯೇ ಕೆರೆಯನ್ನು ಶುದ್ಧೀಕರಿಸಿದಂತಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವೃಷಭಾವತಿ ನದಿಯಲ್ಲಿ ಕಲ್ಮಶ ನೀರಿನ ಪ್ರವಾಹ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ವೃಷಭಾವತಿ ನದಿ ಮೂಲಕ ಪ್ರವಾಹದ ರೀತಿಯಲ್ಲಿ ಹರಿದು ಬಂದ ಕೊಳಕು ನೀರು ಹಾಗೂ ತ್ಯಾಜ್ಯಗಳ ರಾಶಿ ಚಿಕ್ಕಕುಂಟನಹಳ್ಳಿ ಬಳಿಯಿರುವ ಸೇತುವೆ ಮೇಲೆ ಬೃಹತ್ ಪ್ರಮಾಣದಲ್ಲಿ ಶೇಖರಣೆಯಾಗಿದೆ.

ಇದರಿಂದಾಗಿ ಬಿಡದಿಯ ಚಿಕ್ಕಕುಂಟನಹಳ್ಳಿ ಬಳಿ ಸೇತುವೆ ಮೇಲೆ ಪ್ರವಾಹ ಉಂಟಾಗಿ ಕೆಲಕಾಲ ಬಿಡದಿ- ಕರೇನಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ವಾಹನಗಳು ಪರ್‍ಯಾಯ ಮಾರ್ಗದಲ್ಲಿ ಸಂಚರಿಸಿದವು.

ವೃಷಭಾವತಿ ನದಿಯಲ್ಲಿ ಬೆಂಗಳೂರಿನ ಕೊಳಕು ನೀರು ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದು, ಚಿಕ್ಕಕುಂಟನಹಳ್ಳಿ ಬಳಿಯಿರುವ ಸಂಪರ್ಕ ಸೇತುವೆ ಅಪಾಯದ ಸ್ಥಿತಿ ತಲುಪಿದೆ. ವೃಷಭಾವತಿ ನದಿ ಪ್ರವಾಹದಿಂದ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ನದಿಯಲ್ಲಿ ಹರಿದುಬರುವ ನಿರುಪಯುಕ್ತ ಕಸವು ಲೋಡ್‌ಗಟ್ಟಲೆ ರಾಶಿ ರಾಶಿಯಾಗಿ ಸಂಗ್ರಹವಾಗಿದ್ದು ನದಿಗೆ ಅಡ್ಡಲಾಗಿದೆ. ಹೀಗಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕೆಲ ಮನೆಗಳ ಬಳಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ವೃಷಭಾವತಿ ನದಿಯಲ್ಲಿ ಹೆಚ್ಚಿನ ನೀರು ಹರಿದುಬಂದು ಬೆಳಗಿನ ಜಾವ ರಸ್ತೆ ಸಂಚಾರ ಉಂಟಾದ ಪರಿಣಾಮ ವಾಹನ ಸವಾರರು ಅಂಚೀಪುರ, ಮಂಡಲದೊಡ್ಡಿ, ಬನ್ನಿಗಿರಿ ಮಾರ್ಗವಾಗಿ ಭೈರಮಂಗಲದ ಮೂಲಕ ಬಿಡದಿ ಕಡೆಗೆ ಪ್ರಯಾಣ ಬೆಳೆಸಿದರು. ವೃಷಭಾವತಿ ಕಣಿವೆಯಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಪರಸನಪಾಳ್ಯ- ದೊಡ್ಡಕುಂಟನಹಳ್ಳಿ ರಸ್ತೆ ಸಂಪರ್ಕವೂ ಕಡಿತವಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಸೇತುವೆ ಮೇಲೆ ಹೆಚ್ಚಿನ ಪ್ರಮಾಣದ ನೀರು ತುಂಬಿ ಹರಿಯುತ್ತಿದ್ದರಿಂದ ಹಾಗೂ ಭಾರೀ ಪ್ರಮಾಣದ ತ್ಯಾಜ್ಯ ಶೇಖರಣೆಯಾಗಿದ್ದ ಕಾರಣ ಕೆಲಸದ ನಿಮಿತ್ತ ತೆರಳಬೇಕಾದ ಕಾರ್ಮಿಕರು, ಉದ್ಯೋಗಿಗಳು ತೊಂದರೆ ಅನುಭವಿಸುವಂತಾಗಿತ್ತು. ಪ್ರವಾಹ ಕಡಿಮೆಯಾದಾಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಬೆಂಗಳೂರಿನಿಂದ ಹರಿದು ಬರುವ ಬೃಹತ್ ಪ್ರಮಾಣದ ಕೊಳಕು ನೀರಿನಿಂದ ಭೈರಮಂಗಲ ಕೆರೆಯು ಇದೀಗ ತುಂಬಿ ತುಳುಕುತ್ತಿದೆ. ಇದೀಗ ಬೆಂಗಳೂರು ಮತ್ತು ಆಸುಪಾಸಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಏಕಾಏಕಿ ಒಳ ಹರಿವು ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಬಂದಷ್ಟೇ ನೀರು ಹೊರ ಹೋಗುತ್ತಿರುವುದರಿಂದ ನಿಂತ ನೀರಿಗೆ ಚಾಲನೆ ದೊರೆತಿದ್ದು, ಬಹುದಿನಗಳಿಂದ ಸಂಗ್ರಹವಾಗಿದ್ದ ಕಲ್ಮಶ ಖಾಲಿಯಾಗುತ್ತಿದ್ದು, ಕೆರೆಯಲ್ಲಿ ಹೊಸ ನೀರು ಮೈದುಂಬಿಕೊಳ್ಳುತ್ತಿದೆ.

ನಿತ್ಯ ಕೊಳಕು ನೀರಿನಿಂದ ತುಂಬಿದ ಬೈರಮಂಗಲ ಕೆರೆಯಿಂದ ಸುತ್ತಮುತ್ತಲ ಗ್ರಾಮಗಳು ದುರ್ವಾಸನೆ ಜತೆಗೆ ಬೃಹತ್ ಮಟ್ಟದಲ್ಲಿ ಸೊಳ್ಳೆಗಳ ಕಾಟ ಎದುರಿಸುಂತಹ ದುಸ್ಥಿತಿ ಇತ್ತು. ಬೈರಮಂಗಲ ಕೆರೆ ಶುದ್ಧೀಕರಣಕ್ಕೆ ಕೆರೆಯ ಆಸುಪಾಸಿನ ಗ್ರಾಮಗಳ ಜನತೆ ಹಾಗೂ ನಾನಾ ಸಂಘಟನೆಗಳು ಒತ್ತಾಯಿಸಿ ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರಗಳಿಗೆ ಮನವಿಯನ್ನು ಸಲ್ಲಿಸಿದ್ದರು, ಆದರೆ ಇದೀಗ ಬಿದ್ದ ಭಾರೀ ಮಳೆಗೆ ಪ್ರಕೃತಿಯೇ ಕೆರೆಯನ್ನು ಶುದ್ಧೀಕರಿಸಿದಂತಾಗಿದೆ.

‘ವೃಷಭಾವತಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಅಪಾಯದ ಸ್ಥಿತಿಯಲ್ಲಿದೆ. 1996ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಚಿಕ್ಕಕುಂಟನಹಳ್ಳಿ ಬಳಿ ಸೇತುವೆ ನಿರ್ಮಾಣವಾಗಿತ್ತು. ಬೆಂಗಳೂರು ಭಾಗದಲ್ಲಿ ಭಾರೀ ಮಳೆಯಾದಾಗಲೆಲ್ಲ ಸೇತುವೆ ಚಿಕ್ಕದಾಗಿರುವ ಕಾರಣ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಲ್ಲದೆ ಹಳೆಯದಾದ ಸೇತುವೆ ಶಿಥಿಲವಾಗಿದ್ದು ಹಲವು ಬಾರಿ ಶಾಸಕರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ವೃಷಭಾವತಿ ನದಿಗೆ ಅಡ್ಡಲಾಗಿ ಹೊಸಸೇತುವೆ ನಿರ್ಮಿಸಿ ಮುಂದಾಗುವ ದೊಡ್ಡ ಅನಾಹುತವನ್ನು ತಡೆಯಬೇಕು.’

-ನಾಗರಾಜು, ಹೊಸೂರು ಗ್ರಾಮಸ್ಥ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!