ಯಳಂದೂರು ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಠಡಿಗಳಲ್ಲಿ ಚಾವಣಿ ಕುಸಿದಿರುವ ಕಾರಣ ತರಗತಿಗಳನ್ನು ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದಲ್ಲಿರುವ ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳಲ್ಲಿ ಗುರುವಾರ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಚಾವಣಿಯ ಗಾರೆ ಚಕ್ಕೆಗಳು ಕುಸಿದಿದ್ದರಿಂದ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜಿನ ಆವರಣದಲ್ಲಿ ತರಗತಿಯಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪಟ್ಟಣದ ದಾನಿಗಳಾದ ನಿವೃತ್ತ ಶಿಕ್ಷಕ ಮಹದೇವಾಚಾರ್ ೨ ಎಕರೆ ಜಮೀನು ನೀಡಿದ್ದಾರೆ. ಇದನ್ನು ಕೊಟ್ಟು ಹಲವು ದಶಕವೇ ಕಳೆದರೂ ಇಲ್ಲಿ ಕಟ್ಟಡ ನಿರ್ಮಾಣಗೊಂಡಿಲ್ಲ. ಈಗಿರುವ ಕಟ್ಟಡ ಸರ್ಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡವಾಗಿದ್ದು ಇದು ಶಿಥಿಲವಾಗಿತ್ತು. ಈ ಕಟ್ಟಡದಲ್ಲೇ ಹಲವು ವರ್ಷಗಳಿಂದ ಕಾಲೇಜಿನ ತರಗತಿಗಳು ನಡೆಯುತ್ತಿದ್ದವು. ಶುಕ್ರವಾರ ಚಾವಣಿಯ ಗಾರೆ ಚಕ್ಕೆಗಳು ಉದುರಿದ್ದು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಮೇಲೆ ಬಿದ್ದಿವೆ.
ಕೂಡಲೇ ವಿದ್ಯಾರ್ಥಿಗಳೆಲ್ಲಾ ತರಗತಿಯಿಂದ ಓಡಿ ಬಂದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಈ ಕಾಲೇಜಿಗೆ ಕಟ್ಟಡವೇ ಇಲ್ಲದಿರುವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ದಾನಿಗಳು ಜಾಗ ನೀಡಿದ್ದರೂ ಇಲ್ಲಿ ಕಟ್ಟಡ ಕಟ್ಟಲು ಸಾಧ್ಯವಿಲ್ಲ, ಇಲ್ಲಿಗೆ ರಸ್ತೆ ಇಲ್ಲ ಎಂಬ ನೆಪವೊಡ್ಡಿ ಇಲ್ಲಿಗೆ ಬಂದಿದ್ದ ಅನುದಾನವೂ ಹಲವು ಬಾರಿ ವಾಪಸ್ಸಾಗಿದೆ. ಮೂರು ಶಾಸಕರನ್ನು ಕಂಡರೂ ಈ ಕಟ್ಟಡ ಕಾಮಗಾರಿ ಆರಂಭಗೊಂಡಿಲ್ಲ. ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು, ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ಆಸಕ್ತಿ ವಹಿಸದಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು. ಬಿಎ, ಬಿಕಾಂ ಸೇರಿ 152 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಗ್ರಾಮೀಣ ಮಕ್ಕಳಿಗೆ ತೊಂದರೆಯಾಗಿದೆ. ಕಟ್ಟಡ ಕಟ್ಟಲು ಮನಸ್ಸು ಮಾಡಿದರೆ ಅದು ಎಂದೋ ಆರಂಭವಾಗುತ್ತಿತ್ತು. ನಮ್ಮ ಕೂಗಿಗೆ ಯಾರು ಸ್ಪಂದಿಸುತ್ತಿಲ್ಲ, ಈಗ ಶಿಥಿಲ ಕಟ್ಟಡದಲ್ಲಿ ಕೂರುವುವು ಅಸಾಧ್ಯವಾಗಿದೆ. ಕೂಡಲೇ ತಾತ್ಕಾಲಿಕ ಕಟ್ಟಡಕ್ಕೆ ನಮ್ಮನ್ನು ಸ್ಥಳಾಂತರಿಸಬೇಕು. ದಾನಿಗಳು ನೀಡಿರುವ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ವಿದ್ಯಾರ್ಥಿಗಳಾದ ನಾಗೇಂದ್ರ, ಮಲ್ಲಿಕಾರ್ಜುನ ಜೆ.ಡಯಾನಿ, ಸೈಯದ್ ಶಾಕೀಬ್, ಮೇಘನಾ, ಜ್ಯೋತಿ, ಸಹನಾ, ಪ್ರಜ್ವಲ್ ನಂಜುಂಡಸ್ವಾಮಿ ಹಲವರು ಆಗ್ರಹಿಸಿದರು.
ಜಂಟಿ ನಿರ್ದೇಶಕರು ಭೇಟಿ:
3 ದಿನಗಳು ಕಾಲೇಜ್ ರಜೆ
ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ವಿಜಯಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಗಾರೆ ಚಕ್ಕೆ ಕಿತ್ತು ಬಂದಿದ್ದ ಸ್ಥಳ ಪರಿಶೀಲನೆ ನಡೆಸಿದರು. ಪರ್ಯಾಯವಾಗಿ ಬೇರೆ ಕಡೆ ಕೊಠಡಿ ಸ್ಥಳಾಂತರಿಸುವ ಹಿನ್ನೆಲೆ ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಇರುವ ಆದರ್ಶ ವಿದ್ಯಾಲಯದ ಶಾಲಾ ತರಗತಿಗಳನ್ನು ವೀಕ್ಷಿಸಿ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಅಲ್ಲಿಯ ತನಕ 3 ದಿನಗಳ ಕಾಲ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ ಸೇರಿದಂತೆ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.