ಸರ್ಕಾರದ ಮಂತ್ರಿಮಂಡಲ ಸಿದ್ದು ಬಣ ಡಿಕೆಶಿ ಬಣವಾಗಿ ಇಬ್ಭಾಗ

KannadaprabhaNewsNetwork |  
Published : Feb 15, 2025, 12:31 AM IST
14ಎಚ್ಎಸ್ಎನ್17  :ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರದ ಮಂತ್ರಿಮಂಡಲದಲ್ಲಿರುವ ಸಚಿವರು ಎರಡು ಭಾಗವಾಗಿದ್ದಾರೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ, ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ ಸಿದ್ದರಾಮಯ್ಯ ಅವರ ಬಣ ಇನ್ನೊಂದು ದಾರಿ ಹಿಡಿಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದರು. ಸಿಎಂ ಬದಲಾವಣೆಯ ಕುರಿತು ಹೇಳಿಕೆ ನೀಡಿ, ನವೆಂಬರ್ ೧೫-೧೬ರೊಳಗೆ ಸಿಎಂ ಬದಲಾವಣೆಯಾಗಲಿದೆ. ಇಲ್ಲವಾದರೆ, ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನ ಮೂಡಲಿದೆ. ಈ ಕುರಿತು ನನಗೆ ಖಚಿತ ಮಾಹಿತಿ ಇದೆ ಎಂದು ಬಹಿರಂಗಪಡಿಸಿದರು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸರ್ಕಾರದ ಮಂತ್ರಿಮಂಡಲದಲ್ಲಿರುವ ಸಚಿವರು ಎರಡು ಭಾಗವಾಗಿದ್ದಾರೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ, ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ ಸಿದ್ದರಾಮಯ್ಯ ಅವರ ಬಣ ಇನ್ನೊಂದು ದಾರಿ ಹಿಡಿಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಕಿಡಿಕಾರಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಅಭಿವೃದ್ಧಿಯ ಅಭಾವವನ್ನು ಲೇವಡಿ ಮಾಡಿದರು. ಮೈಕ್ರೋ ಫೈನಾನ್ಸ್ ಸಮಸ್ಯೆ, ರೈತರ ಆತ್ಮಹತ್ಯೆ, ಪೊಲೀಸರ ಮೇಲೆ ಹಲ್ಲೆ ಇವೆಲ್ಲವೂ ಸರ್ಕಾರದ ಹಿಡಿತ ತಪ್ಪಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.

ಸಿಎಂ ಬದಲಾವಣೆ ನಿಶ್ಚಿತ:

ಸಿಎಂ ಬದಲಾವಣೆಯ ಕುರಿತು ಹೇಳಿಕೆ ನೀಡಿ, ನವೆಂಬರ್ ೧೫-೧೬ರೊಳಗೆ ಸಿಎಂ ಬದಲಾವಣೆಯಾಗಲಿದೆ. ಇಲ್ಲವಾದರೆ, ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನ ಮೂಡಲಿದೆ. ಈ ಕುರಿತು ನನಗೆ ಖಚಿತ ಮಾಹಿತಿ ಇದೆ ಎಂದು ಬಹಿರಂಗಪಡಿಸಿದರು. ಸಿಎಂ ಬದಲಾವಣೆ ಬಳಿಕ ಕಾಂಗ್ರೆಸಿನಲ್ಲಿ ಉದ್ಭವಿಸಬಹುದಾದ ಅಸ್ಥಿರತೆಯ ಕುರಿತು ಎಚ್ಚರಿಕೆ ನೀಡಿದ ಅವರು, ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸಿಡಿಯಲಿದೆ. ಅಗ್ನಿಶಾಮಕ ವಾಹನಗಳನ್ನು ಈಗಲೇ ಬುಕ್ಕಿಂಗ್ ಮಾಡಿಕೊಳ್ಳಿ! ಎಂದು ವ್ಯಂಗ್ಯವಾಡಿದರು.

ಸರ್ಕಾರ ಪಾಪರ್ ಆಗಿದೆ:

ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಮಾತಾಡಿದ ಅವರು, ಈ ಸರ್ಕಾರ ಪಾಪರ್ ಆಗಿದೆ. ಸಂಬಳ ಕೊಡಲು ಸಹ ಹಣವಿಲ್ಲ. ಹೂಡಿಕೆದಾರರು ರಾಜ್ಯದಿಂದ ಹೊರಟು ಹೋಗುತ್ತಿದ್ದಾರೆ. ಬೆಂಗಳೂರಿನ ರಸ್ತೆಗುಂಡಿಗಳು, ಮಳೆಗೆ ಮನೆಗಳಿಗೆ ನೀರು ನುಗ್ಗುವ ಸ್ಥಿತಿ ಇದೆ. ಇದೆಲ್ಲವೂ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತವೆ ಎಂದರು.

ಅರ್ಜುನ ಪ್ರತಿಮೆಗೂ ಹಣವಿಲ್ಲ:

ಹಾಸನ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹಾಗೂ ಅರ್ಜುನನ ಪ್ರತಿಮೆ ಅನಾವರಣದ ವಿಚಾರದಲ್ಲೂ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ನಾವು ನಮ್ಮ ಸರ್ಕಾರದ ಸಮಯದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಾಗಿ ಹಣ ನೀಡಿದ್ದೆವು. ಆದರೆ ಈ ಸರ್ಕಾರ ಆ ಯೋಜನೆಗೆ ಉಳಿದ ಹಣ ಬಿಡುಗಡೆ ಮಾಡಿಲ್ಲ. ಸತ್ತವರಿಗೆ ಪರಿಹಾರ ಕೊಡಲು ಸಹ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು. ಕೇರಳದಲ್ಲಿ ಕಾಡಾನೆ ದಾಳಿಯಿಂದ ಯಾರಾದರು ಸತ್ತರೆ ತಕ್ಷಣ ಹಣ ನೀಡುತ್ತಾರೆ. ಆದರೆ ಇಲ್ಲಿ ಅರ್ಜುನನ ಪ್ರತಿಮೆಗೆ ಹಣ ನೀಡಲು ಸಾಧ್ಯವಾಗಿಲ್ಲ. ಪ್ಲಾಸ್ಟಿಕ್ , ಫೈಬರ್‌ನಿಂದ ಪ್ರತಿಮೆ ನಿರ್ಮಾಣ ಮಾಡಬಾರದು. ಅರ್ಜುನನ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು. ಭಿಕ್ಷೆ ಬೇಡಿಯಾದರೂ ಅರ್ಜುನನ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನಾನು ಶಾಸಕ ಮಂಜುಗೆ ಹೇಳಿದ್ದೇನೆ ಎಂದರು.

ಮೈಸೂರು ಗಲಭೆ ಪ್ರಕರಣ: ಮುಸ್ಲಿಮರ ಋಣ ತೀರಿಸುತ್ತಿದ್ದಾರೆ

ಕಾಂಗ್ರೆಸ್‌ನವರು ಮುಸ್ಲಿಂರು ಹಾಕಿರುವ ಭಿಕ್ಷೆಯಲ್ಲಿರುವವರು, ಭಿಕ್ಷೆ ಕೊಟ್ಟವರಿಗೆ ಋಣ ತೀರಿಸಲು ಮುಸ್ಲಿಂರ ಪರವಾಗಿ ನಿಂತಿದ್ದಾರೆ. ಅವನ್ಯಾವನೋ ಕಳ್ಳ ಯಾವ ರೀತಿ ಭಾಷಣ ಮಾಡಿದ್ದಾನೆ ಎಂದರೆ ಬೆಂಕಿ ಹಚ್ಚಲು ಏನೇನು ಹೇಳಬೇಕು ಅಷ್ಟು ಹೇಳಿದ್ದಾರೆ. ಅವನನ್ನು ಇದುವರೆಗೂ ಬಂಧಿಸಿಲ್ಲ. ಮಂತ್ರಿಗಳು ಪೊಲೀಸರಿಗೆ ಥೂ ಅನ್ನುವ ಪದ ಬಳಸುತ್ತಾರೆ. ಕಾಂಗ್ರೆಸ್‌ನವರ ಅಪ್ಪನ ಮನೆಯಿಂದ ಪೊಲೀಸರಿಗೆ ಸಂಬಳ ಕೊಡುತ್ತಿಲ್ಲ. ಅವರಿಗೆ ಸ್ಟಾರ್, ಬ್ಯಾಡ್ಜು ಕಾಂಗ್ರೆಸ್‌ನವರು ಅವರ ಅಪ್ಪನ ಮನೆಯಿಂದ ತಂದುಕೊಟ್ಟಿಲ್ಲ. ಜನಗಳ ತೆರಿಗೆ ಹಣದಲ್ಲಿ ಕೊಟ್ಟಿರುವುದು. ಪೊಲೀಸರನ್ನು ಹೀನಾಯವಾಗಿ, ಕೆಟ್ಟ ಪದ ಬಳಕೆ ಮಾಡಿ ಅವರ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ. ಪೊಲೀಸರಿಗೆ ಈ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ. ಇಡೀ ಘಟನೆ ಮುಚ್ಚಿಹಾಕಲು ಕಾಂಗ್ರೆಸ್‌ನವರು ಹುನ್ನಾರ ಮಾಡುತ್ತಿದ್ದಾರೆ. ಈ ಕೇಸ್‌ನಲ್ಲಿ ಅಂತಿಮವಾಗಿ ಪೊಲೀಸರೇ ಅಪರಾಧಿಗಳಾಗುತ್ತಾರೆ. ಪೊಲೀಸರನ್ನೇ ಸಸ್ಪೆಂಡ್ ಮಾಡಬಹುದು, ಅಷ್ಟರಮಟ್ಟಿಗೆ ಮುಸ್ಲಿಂರನ್ನು ಓಲೈಸುತ್ತಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಮಾನ, ಮರ್ಯಾದೆ ಇದೆಯೇ ಇವರಿಗೆ? ಅಧಿಕಾರಿಗಳಿಗೆ ನೈತಿಕೆ ಬೆಂಬಲ ಕೊಡುವುದರ ಬದಲು ತೆಗಳುತ್ತಿದ್ದಾರೆ. ಹಾದಿಬೀದಿಯಲ್ಲಿ ಹೋಗುವ ಜನ ಇನ್ಮುಂದೆ ಪೊಲೀಸರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಒಬ್ಬ ಮಂತ್ರಿನೇ ಏಕವಚನದಲ್ಲಿ ಮಾತನಾಡುತ್ತಾರೆ. ಇದು ಇಡೀ ರಾಜ್ಯದ ಪೊಲೀಸರು, ಹಿರಿಯ ಅಧಿಕಾರಿಗಳಿಗೆ ಮಾಡಿದ ಅವಮಾನ. ಕೂಡಲೇ ಈ ಸರ್ಕಾರ ಪೊಲೀಸರ ಕ್ಷಮೆ ಕೇಳಬೇಕು. ಇಲ್ಲವಾದರೆ ಜನ ನಿಮ್ಮನ್ನು ಎಲ್ಲಿಗೆ ಕಳುಹಿಸಬೇಕೋ, ಗಂಟು, ಮೂಟೆ ಕಟ್ಟಿ ಕಳುಹಿಸುತ್ತಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ ಇಡೀ ಪೊಲೀಸ್ ಸ್ಟೇಷನ್ ಹೊತ್ತಿ ಉರಿಯುತ್ತಿತ್ತು. ಪೊಲೀಸರು ಎಚ್ಚರಿಕೆಯಿಂದ ಕ್ರಮ ತೆಗೆದುಕೊಂಡು ಯಾವುದೇ ಅನಾಹುತ ಆಗದಂತೆ ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲ್ಲಿಶಾಸಕರಾದ ಸಿಮೆಂಟ್ ಮಂಜು, ಹುಲ್ಲಹಳ್ಳಿ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧೇಶ್ ನಾಗೇಂದ್ರ ಇದ್ದರು.* ಬಾಕ್ಸ್‌: ಸಮ್ಮತದ ರಾಜ್ಯಾಧ್ಯಕ್ಷರ ಆಯ್ಕೆ: ಅಶೋಕ್‌ಬಿಜೆಪಿಯ ರಾಜ್ಯಾಧ್ಯಕ್ಷರ ನೇಮಕ ಕುರಿತು ಮಾತನಾಡಿದ ಅವರು, ಇಡೀ ದೇಶದಾದ್ಯಂತ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ೯೯% ಸರ್ವಸಮ್ಮತ ಆಯ್ಕೆ ಆಗಲಿದೆ ಎಂದರು. ಹೈಕಮಾಂಡ್ ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದು ಆರ್‌ ಅಶೋಕ್‌ ತಿಳಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ