ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದ ಸಿದ್ದೇಶ್ವರ ವೇದಿಯಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರ ಮಾರ್ಗದರ್ಶನ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಅವರ ನೇತೃತ್ವದಲ್ಲಿ ಫೆ.15ರಂದು ನಡೆಯಲಿರುವ ಸಮ್ಮೇಳನಕ್ಕೆ ವೇದಿಕೆ ಸಿದ್ದವಾಗಿದೆ. ಪಟ್ಟಣದ ರಸ್ತೆಗಳಲ್ಲಿ ಕನ್ನಡ ಧ್ವಜಗಳು, ಕಟೌಟ್‌ಗಳು, ಧ್ವಜಗಳು ರಾರಾಜಿಸುತ್ತಿವೆ. ಕನ್ನಡ ಹಬ್ಬಕ್ಕೆ ಮುದ್ದೇಬಿಹಾಳ ಪಟ್ಟಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಬೆಳಿಗ್ಗೆ 7.30ಕ್ಕೆ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಲಿದ್ದಾರೆ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅವರು ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಪರಿಷತ್ತಿನ ಧ್ವಜಾರೋಹಣ ನೆರವಿರಲಿಸಿದ್ದಾರೆ, ಪೂರ್ಣಕುಂಭದೊಂದಿಗೆ ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ, ಧ್ವಜಾರೋಹಣ, ಉದ್ಘಾಟನೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಮಾನಾಂತರ ಗೋಷ್ಠಿ, ಅಭಿನಂದನೆ ಸಮಾರಂಭ ಸೇರಿದಂತೆ ಯುವ ಸಾಹಿತಿಗಳಿಗೆ ಕವಿಗೋಷ್ಠಿ, ಕಾವ್ಯ ಪ್ರಸ್ತುತಿ ನಡೆಯಲಿದೆ. ಸಂಜೆ 6.30ಕ್ಕೆ ಜನಪದ ಸಾಹಿತ್ಯ, ಖ್ಯಾತ ಜನಪದ ಗಾಯಕ ಶಬ್ಬೀರ ಡಾಂಗೆ ಅವರಿಂದ ಜಾನಪದ ಗೀತೆಗಳು, ಸುಧಾ ಬರಗೂರ ಅವರಿಂದ ಹಾಸ್ಯ, ಚೌಡಕಿ ಪದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕುಂಟೋಜಿ ಭಾವೈಕ್ಯತಾ ಹಿರೇಮಠದ ಚನ್ನವೀರ ಶ್ರೀ, ಖಾರಿ ಮೊಹಮ್ಮದ ಇಸಾಕ ಮಾಗಿ ಸಾನಿಧ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭುವನೇಶ್ವರಿ ಭಾವಚಿತ್ರಕಲ್ಕೆ ಪುಷ್ಪಾರ್ಚನೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭಾಗವಹಿಸಲಿದ್ದಾರೆ.