ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ₹150 ಕೋಟಿ ಅನುದಾನ ಭರವಸೆ

KannadaprabhaNewsNetwork | Published : Nov 21, 2024 1:00 AM

ಸಾರಾಂಶ

ಸಚಿವ ಎಸ್ಸೆಸ್ಸೆಂ ಜೊತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಕೆಗೆ ದಿನೇಶ ಗುಂಡೂರಾವ್ ಸೂಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ಆಸ್ಪತ್ರೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸದೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಆಸ್ಪತ್ರೆ ಅಧೀಕ್ಷಕರು, ಮುಖ್ಯ ಅಭಿಯಂತರರು ಚರ್ಚಿಸಿ, ಸೂಕ್ತ ಯೋಜನೆಯ ಸಮೇತ ಪ್ರಸ್ತಾವನೆ ಸಲ್ಲಿಸಿದರೆ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ₹150 ಕೋಟಿ ನೀಡುವುದಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಭರವಸೆ ನೀಡಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಎಂಜಿನಿಯರಿಂಗ್ ಘಟಕ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಿಂದ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ವಿಭಾಗಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಸ್ಪತ್ರೆ ವೈದ್ಯರು, ಸಿಬ್ಬಂದಿಗೆ ವಸತಿ ಗೃಹಗಳು, ತಾಯಿ-ಮಕ್ಕಳ ಆರೋಗ್ಯ ಕೇಂದ್ರ, ಆಧುನಿಕ ಶವಾಗಾರ, ವೈದ್ಯಕೀಯ ಸಲಕರಣ ಹೀಗೆ ಜಿಲ್ಲಾಸ್ಪತ್ರೆಯನ್ನು ಅತ್ಯಾಧುನಿಕವಾಗಿ ನಿರ್ಮಿಸಲು ₹150 ಕೋಟಿ ರು. ಒದಗಿಸಲು ಬದ್ಧವಾಗಿದ್ದೇವೆ ಎಂದರು.

ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜೊತೆಗೆ ಆರೋಗ್ಯ ಯೋಜನೆಗೂ ಆದ್ಯತೆ ನೀಡಿದ್ದೇವೆ. ಜನರಿಗೆ ಶಿಕ್ಷಣ, ಆರೋಗ್ಯ ಅತ್ಯಗತ್ಯ. ಮಾನಸಿಕ, ದೈಹಿಕ ಆರೋಗ್ಯದಿಂದ ಆರ್ಥಿಕವಾಗಿಯೂ ಸದೃಢರಾಗಬಹುದು ಎಂದು ತಿಳಿಸಿದರು.

ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಪಡೆಯುವುದು ಕಷ್ಟ. ಹಾಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ಆಸ್ಪತ್ರೆಗಳನ್ನು ಕಟ್ಟಿದರ ಸಾಲದು. ಅದಕ್ಕೆ ಅಗತ್ಯ ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು, ಸಿಬ್ಬಂದಿ, ಅತ್ಯಾಧುನಿಕ ವೈದ್ಯಕೀಯ ಸಲಕರಣೆ ನೀಡುವುದರ ಮೂಲಕ ಸರ್ಕಾರಿ ಆಸ್ಪತ್ರೆಗ‍ಳ ವ್ಯವಸ್ಥೆಯನ್ನು ಸುಧಾರಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

ವೈದ್ಯ ವೃತ್ತಿ ಟೆಲಿ ಮೆಡಿಸನ್ ಹುದ್ದೆಯಲ್ಲ: ಡಾ.ಪ್ರಭಾ

ವೈದ್ಯರು ರೋಗಿಗಳೊಂದಿಗೆ ದೂರವಾಣಿ ಕರೆಯಲ್ಲೇ ಔಷಧಿ ಹೇಳಬೇಡಿ. ನೇರವಾಗಿ ಬಂದು ರೋಗಿಗಳಿಗೆ ಔಷಧೋಪಚಾರ ನೀಡಿ, ಕರೆಯಲ್ಲೇ ಔಷಧಿ ಕೊಡಲು ನಿಮ್ಮ ವೈದ್ಯ ವೃತ್ತಿಯೇನು ಟೆಲಿ ಮೆಡಿಸನ್ ಹುದ್ದೆಯಲ್ಲ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಜಿಲ್ಲಾ ಆಸ್ಪತ್ರೆ ಕಟ್ಟಿದರೆ ಸಾಲದು, ಅಗತ್ಯ ವೈದ್ಯರು, ಸಿಬ್ಬಂದಿ, ವೈದ್ಯಕೀಯ ಸಲಕರಣೆ ನೀಡುವುದೂ ಮುಖ್ಯ. ಮಕ್ಕಳಿಗೆ ತಾಯಿ ಹಾಲು ಅಗತ್ಯವಾಗಿರುವುದರಿಂದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಸ್ಥಾಪಿಸಿದಂತೆ ಇಲ್ಲಿಯೂ ಅಂತಹ ಕೇಂದ್ರ ಸ್ಥಾಪಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. ಹಾಗಾದಾಗ ಮಾತ್ರ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯು ಆರೋಗ್ಯ ಸೇವೆಯಲ್ಲಿ ಮತ್ತಷ್ಟು ಘನತೆ ಮೆರೆಯಲು ಸಾಧ್ಯ ಎಂದು ಹೇಳಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ಜಿಲ್ಲಾ ಆಸ್ಪತ್ರೆಯಿಂದ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲಗಳಿವೆ. ಇಲ್ಲಿನ ವೈದ್ಯರು, ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಆಸ್ಪತ್ರೆಗೆ ಕೋಟ್ಯಾಂತರ ರು. ವ್ಯಯಿಸಿದರೂ ಅದು ವ್ಯರ್ಥವಾಗುತ್ತದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಕೆಲಸ ಇಲ್ಲಿ ಆಗಬೇಕು ಎಂದು ಸೂಚಿಸಿದರು.

ಈ ವೇಳೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್‌, ಉಪ ಮೇಯರ್ ಸೋಗಿ ಶಾಂತಕುಮಾರ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶುಶ್ರೂಷಕರು, ಇತರರು ಇದ್ದರು.

Share this article