ಗ್ಯಾರಂಟಿಗಳ ಅಪಪ್ರಚಾರ: ಕಾನೂನು ಹೋರಾಟ ಕೇವಲ ಹೇಳಿಕೆಯಾಗದಿರಲಿ-ಶೆಟ್ಟರ್‌

KannadaprabhaNewsNetwork |  
Published : Nov 21, 2024, 01:00 AM IST
132 | Kannada Prabha

ಸಾರಾಂಶ

ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನವರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಕೋವಿಡ್‌ ಹಗರಣದ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದೊಂದು ವ್ಯವಸ್ಥೆಯ ದುರುಪಯೋಗವಾಗಿದೆ.

ಹುಬ್ಬಳ್ಳಿ:

ಪಂಚ ಗ್ಯಾರಂಟಿಗಳ ಕುರಿತು ಬಿಜೆಪಿ ಅಪಪ್ರಚಾರ ಮಾಡುತ್ತಿದ್ದು, ಈ ಕುರಿತು ಕಾನೂನು ಹೋರಾಟ ಮಾಡುವುದಾಗಿ ಸಚಿವ ಎಚ್.ಕೆ. ಪಾಟೀಲ ಚಿಂತನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಅವರು, ಮೊದಲು ಹೇಳಿಕೆ ನೀಡುವುದನ್ನು ಕೈಬಿಟ್ಟು ಕಾನೂನು ಹೋರಾಟ ಆರಂಭಿಸಲಿ ಎಂದು ಸಂಸದ ಜಗದೀಶ ಶೆಟ್ಟರ್‌ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಕೆ. ಪಾಟೀಲ ಅವರು ಎಲ್ಲಿಯೋ ಕುಳಿತುಕೊಂಡು ಏನೋ ಹೇಳುವುದಲ್ಲ. ಇದಕ್ಕೆ ಸಾಕಷ್ಟು ಸಾಕ್ಷಿ, ಪುರಾವೆ ಬೇಕು. ಅವುಗಳನ್ನು ಮೊದಲು ಸಂಗ್ರಹಿಸಿಕೊಂಡು ಮಾತನಾಡಲಿ. ಕಾನೂನು ಹೋರಾಟ ಮಾಡುವುದಾದರೆ ಈಗಲೇ ಆರಂಭಿಸಲಿ. ಕೇವಲ ಹೇಳಿಕೆ ಕೊಡುವುದೇಕೆ?. ಇದು ಕೇವಲ ವಿಷಯ ಪಲ್ಲಟ ಮಾಡುವುದಾಗಿದೆ ಎಂದರು.

ಕಾಂಗ್ರೆಸ್ಸಿನಿಂದಲೇ ಸೋರಿಕೆ:

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದ ಕೋವಿಡ್ ಹಗರಣ ಕುರಿತು ಕುನ್ಹಾ ಅವರು ನೀಡಿದ ವರದಿ ಮುಖ್ಯಮಂತ್ರಿ ಕಚೇರಿಯಿಂದಲೇ ಸೋರಿಕೆಯಾಗಿವೆ ಎಂಬ ಹೇಳಿಕೆಗೆ ಉತ್ತರಿಸಿದ ಶೆಟ್ಟರ್‌, ಯಾವುದಾದರೂ ಒಂದು ಹಗರಣ ಕುರಿತು ತನಿಖಾ ವರದಿ, ಅದರಲ್ಲೂ ನ್ಯಾಯಾಲಯಕ್ಕೆ ಸಂಬಂಧಿಸಿದ ತನಿಖಾ ವರದಿಯು ಬಹಳಷ್ಟು ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಏನಾದರೂ ಅಧ್ಯಯನ ಮಾಡುವುದಾದರೆ ಮಾಡಿ ಸಚಿವ ಸಂಪುಟದ ಮುಂದೆ ಇಡುತ್ತಾರೆ. ಆದರೆ, ಕೋವಿಡ್ ಹಗರಣದ ಮಧ್ಯಂತರ ವರದಿ ತರಾತುರಿಯಲ್ಲಿ ಮಂಡನೆ ಮಾಡಲಾಗಿದೆ. ವರದಿ ಮಂಡನೆ ಮಾಡಿದ ತಕ್ಷಣವೇ ಮಾಹಿತಿಯು ಸೋರಿಕೆಯಾಗುತ್ತದೆ ಎಂದರೆ ಅದು ಮುಖ್ಯಮಂತ್ರಿಗಳ ಕಚೇರಿಯಿಂದಾಗಿರಬಹುದು, ಇಲ್ಲವೇ ಕುನ್ಹಾ ಅವರ ಕಚೇರಿಯಿಂದಾಗಿರಬಹುದು ಎಂದರು.

ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನವರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದೊಂದು ವ್ಯವಸ್ಥೆಯ ದುರುಪಯೋಗ. ಇದರಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಬಹುಮತ:

ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬುಧವಾರ ನಡೆದ ವಿಧಾನಸಭೆಯ ಮತದಾನ ಕುರಿತು ಮಾತನಾಡಿ, ಮಹಾರಾಷ್ಟ್ರದಲ್ಲಿ ನಮಗೆ ಒಳ್ಳೆಯ ಅಭಿಪ್ರಾಯವಿದೆ. ನಾನು ಎರಡು ದಿನ ಮಹಾರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಜತ್ತ, ಸೋಲ್ಲಾಪುರ, ಅಕ್ಕಲಕೋಟೆಯ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದ ವೇಳೆ ಒಳ್ಳೆಯ ವಾತಾವರಣ ಕಂಡು ಬಂದಿದೆ. ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಜಾರ್ಖಂಡ್ ರಾಜ್ಯದಲ್ಲಿ ನಾನು ಚುನಾವಣಾ ಪ್ರಚಾರ ಮಾಡಿಲ್ಲ. ಹಾಗಾಗಿ ಅಲ್ಲಿನ ಸ್ಥಿತಿಗತಿ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಜಾರ್ಖಂಡ್‌ನಲ್ಲೂ ಸಹ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ