ಕೋಟೆ, ಚಂದ್ರವಳ್ಳಿ ಅಭಿವೃದ್ಧಿಗೆ ₹28.40 ಕೋಟಿ ಪ್ರಸ್ತಾವನೆ

KannadaprabhaNewsNetwork |  
Published : Jul 05, 2024, 12:54 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ (ಇದನ್ನೇ ಪರಿಗಣಿಸಿ)    | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ । ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ: ಟಿ.ವೆಂಕಟೇಶ್

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೆಎಂಇಆರ್‌ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ)ಯ ಸಿಇಪಿಎಂಐಝಡ್ (ಗಣಿಬಾಧಿತ ವಲಯದ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ) ಯೋಜನೆಯಡಿ ಐತಿಹಾಸಿಕ ಚಿತ್ರದುರ್ಗ ಕೋಟೆ ಹಾಗೂ ಚಂದ್ರವಳ್ಳಿ ಪ್ರದೇಶದಲ್ಲಿ ಒಟ್ಟು ರು.28.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯವಾಗಿ ₹11.50 ಕೋಟಿ ವೆಚ್ಚದಲ್ಲಿ ಐತಿಹಾಸಿಕ ಕೋಟೆಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಧ್ವನಿ ಬೆಳಕು ವ್ಯವಸ್ಥೆ ಮಾಡಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ ಭಾರತೀಯ ಪುರಾತತ್ವ ಇಲಾಖೆ ಅನುಮತಿಯನ್ನು ಶೀಘ್ರ ಪಡೆದುಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೋಟೆಗೆ ಪ್ರತಿ ತಿಂಗಳು 35 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಕೋಟೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರ ಅಡಿ ₹75 ಲಕ್ಷದಲ್ಲಿ ಮಕ್ಕಳ ಉದ್ಯಾನವನ, ₹1ಕೋಟಿ ವೆಚ್ಚದಲ್ಲಿ ಅಕ್ಕ ತಂಗಿಯರ ಹೊಂಡದ ಬಳಿ ನೀರಿನ ಕಾರಂಜಿ ನಿರ್ಮಿಸಲಾಗುವುದು. ಜೊತೆಗೆ ಒನಕೆ ಓಬವ್ವ ಕಿಂಡಿಯ ಬಳಿಯ ಹನುಮಾನ ದ್ವಾರದಿಂದ ಚಂದ್ರವಳ್ಳಿ ತೋಟಕ್ಕೆ ತೆರಳಲು 3 ಮೀಟರ್ ಅಗಲದ ಹಾಗೂ 1.5 ಕಿಮೀ ಉದ್ದದ ನೂತನ ಕಾಲುದಾರಿ ಮಾಡಲಾಗುವುದು ಎಂದರು.

ಚಂದ್ರವಳ್ಳಿ ಕೆರೆಯ ಸುತ್ತಲು ₹3.75 ಕೋಟಿ ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್, ಬೀದಿ ದೀಪ ಅಳವಡಿಸಲಾಗುವುದು. ₹15 ಲಕ್ಷದಲ್ಲಿ ಶುದ್ಧ ಕುಡಿವ ನೀರಿನ ಘಟಕ, ₹75 ಲಕ್ಷ ವೆಚ್ಚದಲ್ಲಿ ವಾಹನ ನಿಲುಗಡೆ, ₹1 ಕೋಟಿ ವೆಚ್ಚದಲ್ಲಿ ಚಂದ್ರವಳ್ಳಿ ಗುಹೆಗೆ ವಿದ್ಯುತ್ ದೀಪಗಳ ಅಳವಡಿಕೆ, ₹6 ಕೋಟಿ ವೆಚ್ಚದಲ್ಲಿ ಮಕ್ಕಳ ಆಟಿಕೆ ಟ್ರೈನ್, ರು.1.25 ಕೋಟೆ ವೆಚ್ಚದಲ್ಲಿ ಚಂದ್ರವಳ್ಳಿ ಸಂಪರ್ಕಿಸುವ ರಸ್ತೆ ಬೀದಿ ದೀಪ ಅಳವಡಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶೀಘ್ರವೇ ಪುರಾತತ್ವ ಇಲಾಖೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕೆಎಂಇಆರ್‌ಸಿ ಅನುದಾನದ ಅಡಿಯಲ್ಲಿಯೇ ಹೊಸದುರ್ಗ ತಾಲೂಕಿನ ಹಾಲು ರಾಮೇಶ್ವರದಲ್ಲಿ ಧರ್ಮಛತ್ರ, ಪಾರ್ಕಿಂಗ್, ಸಾರ್ವಜನಿಕ ಶೌಚಾಲಯ, ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು. ಹೊಳಲ್ಕೆರೆ ತಾಲೂಕಿನ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ, ಬೆಟ್ಟದಲ್ಲಿ ಕಲ್ಯಾಣಿಯ ಪುನರುಜ್ಜೀವನ, ಧರ್ಮಛತ್ರ, ಪಾರ್ಕಿಂಗ್, ಸಾರ್ವಜನಿಕ ಶೌಚಾಲಯ, ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು.

ವಿವಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ಸಾಹಸಮಯ ಜಲಕ್ರೀಡೆ ಆರಂಭಿಸಲು ಸಹ ಯೋಜನೆ ರೂಪಿಸಲಾಗಿದೆ. ಒಂದು ಜಿಲ್ಲೆ ಒಂದು ತಾಣ ಯೋಜನೆಯಡಿ ವಾಣಿ ವಿಲಾಸ ಸಾಗರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ, ಇದರೊಂದಿಗೆ ಚಂದ್ರವಳ್ಳಿ ಕೆರೆಯಲ್ಲಿ ಜಲಕ್ರೀಡೆ ಹಾಗೂ ದೋಣಿ ವಿಹಾರಕ್ಕೂ ಯೋಜನೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯ್ದೆ 2015 ಅಡಿ ಜಿಲ್ಲೆಯ ಪ್ರಮುಖ ಹೋಟೆಲ್‍ಗಳನ್ನು ಕಡ್ಡಾಯವಾಗಿ ನೊಂದಣಿ ಮಾಡಬೇಕು. ಇದರಿಂದ ಜಿಲ್ಲೆಗೆ ಭೇಟಿ ನೀಡಿದ ಹೊರ ದೇಶ ಹಾಗೂ ಹೊರ ರಾಜ್ಯದ ಪ್ರವಾಸಿಗರ ಮಾಹಿತಿ ಲಭ್ಯವಾಗುತ್ತಿದೆ. ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿಯೂ ಮೂಲಭೂತ ಸೌಕರ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಯಾತ್ರಿ ನಿವಾಸಗಳು ಸಾರ್ವಜನಿಕರ ಬಳಕೆಗೆ ಒದಗುವಂತಾಗಬೇಕು. ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ, ನಿರ್ವಹಣೆ ಜವಬ್ದಾರಿ ವಹಿಸುವಂತೆ ಹೇಳಿದರು. ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಕಿರುಹೊತ್ತಿಗೆ ಮುದ್ರಿಸಬೇಕು, ಇದರಲ್ಲಿ ಕೇಂದ್ರ, ರಾಜ್ಯ ಹಾಗೂ ಪ್ರವಾಸೊದ್ಯಮ ಇಲಾಖೆಯಿಂದ ನಿರ್ವಹಿಸುತ್ತಿರುವ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಇರಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಎಸ್.ಜೆ ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ತಹಸೀಲ್ದಾರಗಳಾದ ಡಾ.ನಾಗವೇಣಿ, ಪಾತೀಮ ಬಿಬಿ, ತಿರುಪತಿ ಪಾಟೀಲ್, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಸಿಯು ಧೂಳಿಗೆ ಕಮರಿದ ರೈತರ ಬದುಕು
ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಅಗತ್ಯ