ಕಳಪೆ ಬಿಸಿಯೂಟ ನೀಡಿದರೆ ಶಿಸ್ತು ಕ್ರಮ

KannadaprabhaNewsNetwork | Published : Jul 31, 2024 1:07 AM

ಸಾರಾಂಶ

ಶಾಲೆಗಳಲ್ಲಿ ಮಕ್ಕಳಿಗೆ ಓದಲು ಬರೆಯಲು ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಜೊತೆಗೆ ಮಧ್ಯಾಹ್ನದ ಬಿಸಿಯೂಟ ಗುಣಮಟ್ಟದಿಂದ ಇರಬೇಕು, ಶಾಲೆಯಲ್ಲಿಯೇ ಶಿಕ್ಷಕರು ಕೂಡ ಬಿಸಿಯೂಟ ಕಡ್ಡಾಯವಾಗಿ ಮಾಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ, ನಾವೇ ವಾರಕ್ಕೊಮ್ಮೆ ಶಾಲೆಗಳಿಗೆ ಭೇಟಿ ನೀಡಲಿದ್ದೇವೆ, ಏನಾದರೂ ತಪ್ಪು ನಡೆದರೆ ಸ್ಥಳದಲ್ಲಿಯೇ ಶಿಸ್ತು ಕ್ರಮಕ್ಕೆ ಆದೇಶಿಸಲಾಗುತ್ತದೆ. ತಪ್ಪು ನಡೆಯದ ರೀತಿಯಲ್ಲಿ ಕೆಲಸ ಮಾಡಿ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.ನಗರದ ತಾಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಓದಲು ಬರೆಯಲು ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಜೊತೆಗೆ ಮಧ್ಯಾಹ್ನದ ಬಿಸಿಯೂಟ ಗುಣಮಟ್ಟದಿಂದ ಇರಬೇಕು, ಶಾಲೆಯಲ್ಲಿಯೇ ಶಿಕ್ಷಕರು ಕೂಡ ಬಿಸಿಯೂಟ ಕಡ್ಡಾಯವಾಗಿ ಮಾಡಬೇಕು. ತಾವು ಭೇಟಿ ನೀಡಿದಾಗ ಸಿಕ್ಕಿಬಿದ್ದರೆ ಕ್ರಮ ಗ್ಯಾರಂಟಿ ಎಂದರು.ಪ್ರತಿ ಶಾಲೆಗೂ ಸ್ವಂತ ಕಟ್ಟಡ

ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಯೊಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಮತ್ತು ಜಾಗ ಇರುವ ರೀತಿಯಲ್ಲಿ ಮಾಡುತ್ತಿದ್ದೇವೆ, ಅಂಗನವಾಡಿ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಹತ್ವವನ್ನು ಕೊಡಬೇಕಾಗಿದೆ ಅವರಿಗೆ ಮುಂದಿನ ಭವಿಷ್ಯ ಕಾಣುವಂತೆ ಮಾಡುವ ಜಾಗವಾಗಿದೆ. ಕೆಲವು ಕಡೆ ದೇವಸ್ಥಾನಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಅಂತಹ ಸಂದರ್ಭಗಳು ಬಂದರೆ ಭಾಗಿಯಾದ ಅಷ್ಟು ಜನರ ಮೇಲೆ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸುಮಾರು ಏಳು ಎಂಟು ತಿಂಗಳ ಹಿಂದೆ ಜೆಜೆಎಂ ಯೋಜನೆಯಲ್ಲಿ ಕುಡಿಯುವ ನೀರಿಗೆ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಇದರಿಂದಾಗಿ ಮಕ್ಕಳು, ಹಿರಿಯರು, ಜಾನುವಾರುಗಳು ಬಿದ್ದು ಗಾಯಗಳಾಗಿವೆ ಜನರಿಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಕೊಡುವ ಕೆಲಸವನ್ನು ಮಾಡಬೇಕು ಎಂದರು.

ಪರೀಕ್ಷಾ ವರದಿ ಬರಬೇಕು

ಇದಕ್ಕೆ ಉತ್ತರಿಸಿದ ಅಧಿಕಾರಿ ಜೆಜೆಎಂ ಯೋಜನೆಯಲ್ಲಿ ೩೦೯ ಹಳ್ಳಿಯಲ್ಲಿ ಕಾಮಗಾರಿ ನಡೆಯುತ್ತಿದೆ ಪರೀಕ್ಷಾ ವರದಿ ಬರುವವೆರೆಗೆ ಕಾಮಗಾರಿ ಪೂರ್ಣಗೊಳಿಸಲು ಆಗುತ್ತಿಲ್ಲ ಆರೇಳು ತಿಂಗಳು ಹಿಡಿಯುತ್ತದೆ. ವಿಳಂಬ ಮಾಡುತ್ತಿದ್ದಾರೆ ಆದಷ್ಟು ಬೇಗ ಮುಗಿಸಲು ಕ್ರಮ ವಹಿಸುತ್ತೇವೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಗೆ ಹಣ ಕೊರತೆ ಎಲ್ಲ ಹಣವನ್ನು ಗ್ಯಾರಂಟಿಗಳಿಗೆ ಬಳಕೆಯಾಗಿದೆ ಎಂದು ವಿರೋಧಿಗಳು ಹೊರಗಡೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಉತ್ತರವನ್ನು ನೀವುಗಳೇ ಕೊಡಬೇಕಾಗಿದೆ ಕೋಲಾರ ಕ್ಷೇತ್ರಕ್ಕೆ ೪೦೦ ಕೋಟಿ ಅನುದಾನ ಬಂದಿದೆ. ಕೇಳಿದಷ್ಟು ಹಣ ಕೊಡಲು ಸರ್ಕಾರ ಬದ್ಧವಾಗಿದೆ. ಅಭಿವೃದ್ಧಿ ಮಾಡಲು ನೀವುಗಳು ಸಿದ್ದರಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಅಭಿವೃದ್ಧಿಗೆ ಸರ್ಕಾರ ಬದ್ಧಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರವು ಅಭಿವೃದ್ಧಿಗೆ ಬದ್ದವಾಗಿ ಕೆಲಸ ಮಾಡತ್ತಿದೆ ಕೆಲವು ಕಡೆಗಳಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಕಾಮಗಾರಿ ನಡೆಸದೇ ಇರುವುದು ಸರಿಯಲ್ಲ. ಕೂಡಲೇ ಕಾಮಗಾರಿ ಪ್ರಾರಂಭ ಮಾಡಬೇಕು ಕಾಮಗಾರಿ ನಡೆಯುವ ಕಡೆ ಬೇಗ ಮುಗಿಸುವ ಕೆಲಸ ಮಾಡಬೇಕು. ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಗ್ರಾಮದಲ್ಲಿ ಶುದ್ದ ನೀರಿನ ಘಟಕಗಳು ಹಾಗೂ ಹೈ ಮಾಸ್ಟ್‌ ಲೈಟ್ ಗಳು ಇಲ್ಲವೋ ಅಂತಹ ಗ್ರಾಮಗಳನ್ನು ಪಟ್ಟಿ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಶಾಲೆಗಳಿಗೆ ನೀರು ಪೂರೈಸಿ

ಉಪ ವಿಭಾಗಾಧಿಕಾರಿ ಡಾ ಮೈತ್ರಿ ಮಾತನಾಡಿ, ಶಾಲೆಗಳಲ್ಲಿ ಶೌಚಾಲಯ ನೀರು ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬೇಕು ವಕ್ಕಲೇರಿ ಹೋಬಳಿಯ ತ್ಯಾವನಹಳ್ಳಿ ಪ್ರೌಢಶಾಲೆಯ ಕಾಂಪೌಂಡ್ ಕಾಮಗಾರಿಯ ಸಂಬಂಧ ದಾಖಲೆ ಕೊಡಿ ಸರ್ವೇ ಮಾಡೋಣ ಈ ಶಾಲೆಗೆ ನಾನು ಭೇಟಿ ಕೊಡುತ್ತೇನೆ ಹಿಂದುಳಿದ ಹಾಸ್ಟೆಲ್ ಗಳಲ್ಲಿ ಬುಕ್ ಕಾರ್ನರ್ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪೂರಕವಾಗಿರಬೇಕು. ರೇಷ್ಮೆಯಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನದಲ್ಲಿ ಬರುವಂತೆ ಮಾಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ತಾಪಂ ಇಒ ಮುನಿಯಪ್ಪ ಇದ್ದರು.

Share this article