ಕನ್ನಡಪ್ರಭ ವಾರ್ತೆ ಬೇಲೂರು
ಕಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಹಕೀಂ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ೮ ಅಂಗನವಾಡಿ ಕೇಂದ್ರಗಳಿಗೆ ಪಂಚಾಯಿತಿ ಅನುದಾನದಲ್ಲಿ ಉಚಿತವಾಗಿ ಕಬ್ಬಿಣದ ಬೀರುಗಳನ್ನು ವಿತರಿಸುತಿದ್ದೇವೆ. ನಾವು ಮತ್ತು ಸಿಬ್ಬಂದಿ ಕೆಲ ಅಂಗನವಾಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಮುಖವಾದ ವಸ್ತುಗಳನ್ನಿಡಲು ಸರಿಯಾದ ಸ್ಥಳವಿರಲಿಲ್ಲ. ಎಲ್ಲೆಂದರಲ್ಲಿ ಹಾಕಿದ್ದು ನೋಡಲು ಸಹ ಚೆನ್ನಾಗಿ ಕಾಣುತ್ತಿರಲಿಲ್ಲ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಅವರ ಸಹಕಾರದೊಂದಿಗೆ ನಮ್ಮ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ೮ ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಗಾಡ್ರೇಜ್ ಬೀರುಗಳನ್ನು ವಿತರಿಸುತಿದ್ದೇವೆ ಎಂದರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮತ್ತು ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಸರಿಯಾಗಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಕೊಡುವ ಮೂಲಕ ಅವರ ಮುಂದಿನ ಬೆಳವಣಿಗೆಗೆ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಅವಶ್ಯವಿರುವ ವಸ್ತುಗಳನ್ನೂ ಸಹ ಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.ಕಳ್ಳೇರಿ ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಕುಮಾರ್, ಕಾರ್ಯದರ್ಶಿ ಜಯಶೀಲ, ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.