ತಲ್ಲತ್ ಗ್ಯಾಂಗ್‌ ಸಹಚರರಿಗೆ ಗುಂಡೇಟು

KannadaprabhaNewsNetwork | Published : Apr 4, 2025 12:46 AM

ಸಾರಾಂಶ

ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿ ಬಿಗಿ ಬಂದೋಬಸ್ತ್‌ನಲ್ಲಿ ಎರಡು ವಾಹನಗಳಲ್ಲಿ ಕರೆದುಕೊಂಡು ಬರುತ್ತಿದ್ದರು.

ಹಳಿಯಾಳ: ಅಂಕೋಲಾದ ಬಳಿಯ ರಾ.ಹೆ. ಬಳಿ ವಾಹನದಲ್ಲಿ ಪತ್ತೆಯಾದ ಕೋಟ್ಯಂತರ ಹಣದ ಪ್ರಕರಣಕ್ಕೆ ಸಂಬಂಧಿಸಿದ ತಲ್ಲತ್ ಗ್ಯಾಂಗಿನ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆಂದು ಗುರುವಾರ ಅಂಕೋಲಾಕ್ಕೆ ಕರೆದುಕೊಂಡು ಹೋಗುವಾಗ ಹಳಿಯಾಳ ತಾಲೂಕಿನ ತಟ್ಟೆಗೆರಾ ಬಳಿ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದು, ಇಬ್ಬರು ಆರೋಪಿಗಳಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಆರೋಪಿಗಳಾದ ತಲ್ಲತ್, ನೌಪಾಲ್‌, ಹಲ್ಲೆಗೊಳಗಾದ ಅಂಕೋಲಾ ಠಾಣೆಯ ಪಿಎಸ್‌ಐ ಉದ್ದಪ್ಪ ದಾನಪ್ಪನವರ, ಮುಂಡಗೋಡ ಠಾಣೆಯ ಪಿಎಸ್‌ಐ ಪರಶುರಾಮ ಮೀರಜಗಿ, ಸಿಬ್ಬಂದಿ ಬಸವರಾಜ, ಕೋಟೇಶ ಅವರನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿ ಬಿಗಿ ಬಂದೋಬಸ್ತ್‌ನಲ್ಲಿ ಎರಡು ವಾಹನಗಳಲ್ಲಿ ಕರೆದುಕೊಂಡು ಬರುತ್ತಿದ್ದರು. ಹಳಿಯಾಳ ಮಾರ್ಗವಾಗಿ ಅಂಕೋಲಾಕ್ಕೆ ಬರುವಾಗ ಹಳಿಯಾಳ ತಾಲೂಕಿನ ತಟ್ಟಿಗೇರಾ ಬಳಿಯ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ಆರೋಪಿಗಳಿಬ್ಬರು ಇಳಿದಿದ್ದಾರೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಗುಂಡು ಹಾರಿಸಿ ಬಂಧಿಸಿದ್ದಾರೆ.

ಸಂಜೆ ಹಳಿಯಾಳಕ್ಕೆ ಆಗಮಿಸಿದ ಜಿಲ್ಲಾ ಎಸ್ಪಿ ನಾರಾಯಣ ಎಂ. ತಾಲೂಕು ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಗಳಿಬ್ಬರನ್ನು ಭೇಟಿಯಾಗಿ, ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಜ. 28ರಂದು ಅಂಕೋಲಾದ ರಾ.ಹೆ. 63ರ ಪಕ್ಕ ಕಾರೊಂದು ನಿಂತಿತ್ತು. ಆ ವಾಹನವನ್ನು ಅಂಕೋಲಾ ಠಾಣೆಗೆ ತಂದು ಪರಿಶೀಲಿಸಲಾಗಿ, ಆ ವಾಹನದಲ್ಲಿ ₹1.15 ಕೋಟಿ ನೋಟುಗಳು ಪತ್ತೆಯಾದವು. ಪ್ರಕರಣದ ತನಿಖೆ ನಡೆಸಿದಾಗ ಮಂಗಳೂರಿನ ಬಂಗಾರದ ವ್ಯಾಪಾರಿ ರಾಜೇಂದ್ರ ಎಂಬುವರಿಗೆ ಸಂಬಂಧಿಸಿದ ಹಣವನ್ನು ಕಾರಿನ ಮೂಲಕ ತರುವಾಗ ರಾಮನಗುಳಿ ಬಳಿ ಅಡ್ಡಗಟ್ಟಿದ 13 ಜನರ ತಂಡವು ಹಣವನ್ನು ದರೋಡೆ ಮಾಡಿರುವುದು ಗೊತ್ತಾಯಿತು. ಈ ಪ್ರಕರಣದ ತನಿಖೆಗೆ ಡಿವೈಎಸ್ಪಿ ಎಸ್.ವಿ. ಗಿರೀಶ ನೇತೃತ್ವದಲ್ಲಿ ತಂಡ ರಚಿಸಲಾಯಿತು. ತನಿಖೆಯಲ್ಲಿ ಶಾಮೀಲಾಗಿದ್ದವರು ಮಂಗಳೂರಿನ ಮೂಲದವರೆಂದು ಪತ್ತೆಯಾಗಿದೆ. ಈಗಾಗಲೇ ಪ್ರಕರಣದಲ್ಲಿ ಶಾಮೀಲಾದ ಕೇರಳ ಮೂಲದ ಇಷಾಮ್ ಗ್ಯಾಂಗಿನ ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಮುಖ್ಯ ಪಾತ್ರಧಾರಿಗಳು ಮಂಗಳೂರಿನ ತಲ್ಲತ್ ಗ್ಯಾಂಗ್. ಈ ಗ್ಯಾಂಗ್‌ನವರು ಕಳೆದ 10 ವರ್ಷಗಳಿಂದ ಬಂಗಾರದ ವ್ಯಾಪಾರಿಗಳನ್ನೇ ದರೋಡೆ ಮಾಡುವ ಕುಕೃತ್ಯದಲ್ಲಿ ತೊಡಗಿದ್ದು, ಅವರ ಮೇಲೆ ಹಲವಾರು ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದರು.

ಹಳಿಯಾಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ ಪಡಿಸಿದ, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ, ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ, ಪೊಲೀಸ್‌ ಅಧಿಕಾರಿಗಳ ಕೊಲೆಗೆ ಪ್ರಯತ್ನ ಮಾಡಿದ ಬಗ್ಗೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಕರಣದಲ್ಲಿ ಶಾಮೀಲಾದ ಎಂಟು ಆರೋಪಿಗಳು ಬಂಧಿಸಲಾಗಿದೆ. ದರೋಡೆಗೆ ಬಳಸಿದ ವಾಹನಗಳನ್ನು ವಶಪಡಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದೆಂದು ಎಸ್ಪಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಅಧಿಕಾರಿಗಳು ಇದ್ದರು.

Share this article