‘ಡಾ.ಎಂ.ಸಿ.ಸುಧಾಕರ್ ಅವರೇ ಐದು ವರ್ಷ ಮಂತ್ರಿ’

KannadaprabhaNewsNetwork | Published : Mar 4, 2025 12:33 AM

ಸಾರಾಂಶ

ಸಮುದಾಯದಲ್ಲಿ ಸಚಿವ ಸ್ಥಾನ ನೀಡುವುದಾದರೆ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯರನ್ನು ಎಂಎಲ್‌ಸಿ ಮಾಡಿ ಅವರಿಗೆ ನೀಡಲಿ,ಇಲ್ಲವಾದಲ್ಲಿ ಸಮುದಾಯದ ಹಿರಿಯರಾದ ಎಂಎಲ್‌ಸಿ ಎಂ.ಆರ್.ಸೀತಾರಾಮ್‌ ಅವರಿಗೆ ನೀಡಲಿ. ತಮಗೆ ಬೇಡ, ತಾವು ಆಕಾಕ್ಷಿಯೂ ಅಲ್ಲ ಎನ್ನುತ್ತಾರೆ ಶಾಸಕ ಪ್ರದೀಪ್‌ ಈಶ್ವರ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಈ ಸರ್ಕಾರದ ಐದು ವರ್ಷಗಳ ಅವಧಿಗೆ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರಲಿದ್ದಾರೆ. ತಮಗೆ ಸಚಿವನಾಗುವ ಆಸೆ ಇಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ತಾಲೂಕಿನ ಜಡಲ ತಿಮ್ಮನಹಳ್ಳಿಯಲ್ಲಿ ಜಡಲತಿಮ್ಮನಹಳ್ಳಿ - ನಂದಿ ಮತ್ತು ಜಡಲತಿಮ್ಮನಹಳ್ಳಿ -ರಾಷ್ಟ್ರೀಯ ಹೆದ್ದಾರಿ 44ರ ವರೆಗೆ ಸಂಪರ್ಕ ರಸ್ತೆಗೆ ಎರಡು ಕೋಟಿ ರೂಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಕ್ಷಾ ರಾಮಯ್ಯ ಮಂತ್ರಿಯಾಗಲಿ

ಸಮುದಾಯದಲ್ಲಿ ಸಚಿವ ಸ್ಥಾನ ನೀಡುವುದಾದರೆ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯರನ್ನು ಎಂಎಲ್‌ಸಿ ಮಾಡಿ ಅವರಿಗೆ ನೀಡಲಿ,ಇಲ್ಲವಾದಲ್ಲಿ ಸಮುದಾಯದ ಹಿರಿಯರಾದ ಎಂಎಲ್‌ಸಿ ಎಂ.ಆರ್.ಸೀತಾರಾಮ್ ರಿಗೆ ನೀಡಲಿ. ನನಗೆ ಬೇಡ, ನಾನು ಆಕಾಕ್ಷಿಯೂ ಅಲ್ಲ ಎಂದರು.

ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ಅನೇಕ ಗ್ರಾಮಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಶಂಕುಸ್ಥಾಪನೆಗಳ ನಡೆದಿದ್ದು, ಈ ನಿಟ್ಟಿನಲ್ಲಿ ಜಡಲ ತಿಮ್ಮನಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ವರೆಗೆ ಸಂಪರ್ಕ ರಸ್ತೆ ಹಾಗೂ ಜಡಲತಿಮ್ಮನಹಳ್ಳಿಯಿಂದ ನಂದಿ ಗ್ರಾಮಕ್ಕೆ ಸಂಪರ್ಕ ರಸ್ತೆಗೆ ಎರಡು ಕೋಟಿ ರೂ ಮೀಸಲಿರಿಸಲಾಗಿದೆ ಎಂದರು.

3 ತಿಂಗಳೊಳಗೆ ರಸ್ತೆ ಅಭಿವೃದ್ಧಿ

ಕಳೆದ ಹತ್ತು ವರ್ಷಗಳಿಂದಲೂ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದು, ಸಾಕ್ಷಾತ್ ವೀಕ್ಷಿಸಿದ ನಂತರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಎಲ್ಲೆಡೆ ಗ್ರಾಮೀಣ ಪ್ರದೇಶಗಳ ಭಾಗಗಳಲ್ಲಿ ಶಂಕು ಸ್ಥಾಪನೆಗಳು ನಡೆಯುತ್ತಿದ್ದು, ಇನ್ನು ಎರಡು ಮೂರು ತಿಂಗಳ ಒಳಗಾಗಿ ಗ್ರಾಮೀಣ ಪ್ರದೇಶದ ಎಲ್ಲಾ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದರು.

ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

ಮುಖ್ಯವಾಗಿ ರಸ್ತೆ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆಯಬೇಕಿದೆ. ಏಕೆಂದರೆ ಸರಿಯಾದ ರಸ್ತೆ ಇಲ್ಲ ಎಂದರೆ ಅನಾರೋಗ್ಯ ಆದಾಗ ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ಓಡಾಡಬೇಕಲ್ಲ.ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆ ತೆಗೆದುಕೊಂಡು ಹೋಗಲೋ, ಬೇಸಾಯವನ್ನೋ ಮೇವನ್ನೋ ನಿಶ್ಚಿಂತೆಯಿಂದ ಮನೆಗೆ ತರಲು ಮುಖ್ಯರಸ್ತೆಗೆ ಹೋಗಲು ಹಳ್ಳಿಯಿಂದ ಅಲ್ಲಿಗೆ ರಸ್ತೆ ಬೇಕಲ್ಲವೇ. ಅದಕ್ಕಾಗಿಯೇ ಕೋಟಿಗಳ ವೆಚ್ಚದಲ್ಲಿ ರಸ್ತೆ ಸೇತುವೆಗಳನ್ನು ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿರುವುದಾಗಿ ತಿಳಿಸಿದರು.

ಗ್ರಾಮೀಣ ಜನತೆ ಶಾಸಕರು ನಮ್ಮೂರಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್, ಚರಂಡಿ ಹಾಕಿಸಿಕೊಟ್ಟಿದ್ದಾರೆ.ಸರ್ಕಾರಿ ಶಾಲೆ ಕಟ್ಟಿಸಿದ್ದಾರೆ.ಪಿಂಚಣಿ ಕೊಡಿಸಿದ್ದಾರೆ.ವೃದ್ಧಾಪ್ಯ ವೇತನ ಕೊಡಿಸಿದ್ದಾರೆ.ನಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ ಎಂದು ಜನ ಮಾತಾಡಿಕೊಳ್ಳುವಂತೆ ಕೆಲಸ ಮಾಡಿ ತೋರಿಸುತ್ತೇನೆ. ಮತ ಹಾಕುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.

ಕನ್ನಡ ಭವನ ಹೆಸರೇ ಕಾಯಂ

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕನ್ನಡ ಭವನ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ದೂರಾಲೋಚನೆಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಆ ಭವನಕ್ಕೆ ಕನ್ನಡ ಭವನ ಎಂದು ನಾಮಕರಣ ಮಾಡಿರುವುದು ಸಮಂಜಸವಾಗಿದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಧಾ ವೆಂಕಟೇಶ್, ಮಂಡಿಕಲ್-ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್,ನಗರಸಭಾ ಸದಸ್ಯರಾದ ಕಣಿತಹಳ್ಳಿ ವೆಂಕಟೇಶ್,ಅಂಬರೀಶ್ ಮತ್ತಿತರರು ಇದ್ದರು.

Share this article