ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೆರೆ ತುಂಬಿಸುವ ಬೃಹತ್ ಯೋಜನೆ ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಶನಿವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಮಾಡಬೇಕಾಗಿದೆ. ಗೃಹಲಕ್ಷ್ಮೀ ಯೋಜನೆ ಸಮರ್ಪಕ ಜಾರಿ ನಂತರ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿದೆ. ಈಗಾಗಲೆ ಸಾಕಷ್ಟು ಯೋಜನೆ ಮಂಜೂರಾಗಿದ್ದು ಅವುಗಳ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಬೇಕಿದೆ ಎಂದರು.
ನಿಮ್ಮೆಲ್ಲರ ವಿಶ್ವಾಸ ನಮ್ಮ ಮೇಲಿದೆ. ನಾನು ರಾಜ್ಯದ ಎಲ್ಲೇ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಯೋಚನೆಯಲ್ಲೇ ಇರುತ್ತೇನೆ. ನಿರಂತರ ದೂರವಾಣಿ ಸಂಪರ್ಕ ಮಾಡುತ್ತ ಕ್ಷೇತ್ರದ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುತ್ತೇನೆ ಎಂದ ಅವರು, ಮೃಣಾಲ ಹೆಬ್ಬಾಳಕರ ಅವರನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ನೀವೆಲ್ಲ ಆಗ್ರಹಿಸಿದ್ದೀರಿ. ಅವನ ಹಣೆ ಬರಹ ಏನಿದೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧರಿಸುತ್ತದೆ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ನಿಮ್ಮ ಸಹಕಾರ ಇರಲಿ ಎಂದು ವಿನಂತಿಸಿದರು.ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ ಮಾತನಾಡಿ, ಬಿಜಿಪಿಯ ಭ್ರಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದೆ. ಲಕ್ಷ್ಮೀ ಹೆಬ್ಬಾಳಕರ ಅವರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರು. ಯೋಜನೆ ತಂದಿದ್ದಾರೆ. ಈಗ ಬಂದಿರುವ ಕೆರೆ ತುಂಬುವ ಯೋಜನೆ ವಿಶೇಷವಾಗಿದ್ದು, ಗ್ರಾಮೀಣ ಭಾಗದ ಇತಿಹಾಸದಲ್ಲೇ ಇಂತಹ ಯೋಜನೆ ಬಂದಿರಲಿಲ್ಲ. ನಿಮ್ಮ ಸಹಕಾರ ನಿರಂತರ ಇರಲಿ ಎಂದು ಕೋರಿದರು.
ಮುಖಂಡ ಮಲ್ಲೇಶ ಚೌಗಲೆ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ನಿರಂತರ ಅಭಿವೃದ್ಧಿಯಾಗುತ್ತಿದೆ. ಸಚಿವರಾದ ನಂತರ ಅಭಿವೃದ್ಧಿಗೆ ಇನ್ನಷ್ಟು ವೇಗ ಬಂದಿದೆ ಎಂದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದರು.
--
ಮೃಣಾಲ ಹೆಬ್ಬಾಳಕರ ಅವರನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ನೀವೆಲ್ಲ ಆಗ್ರಹಿಸಿದ್ದೀರಿ. ಅವನ ಹಣೆ ಬರಹ ಏನಿದೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಪಕ್ಷದ ಹೈಕಮಾಂಡ್ ಈ ಕುರಿತು ನಿರ್ಧರಿಸುತ್ತದೆ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ನಿಮ್ಮ ಸಹಕಾರ ಇರಲಿ.