ಜಾತ್ರೋತ್ಸವಕ್ಕೆ ಜಾಲತಾಣದ ಅತಿಯಾದ ಬಳಕೆಯಿಂದ ಕಳಂಕ

KannadaprabhaNewsNetwork |  
Published : Oct 20, 2025, 01:02 AM IST
19ಎಚ್ಎಸ್ಎನ್13 : ಮೂರು ಕಿ.ಮೀ ವರೆಗೆ ಸಾಗಿದ್ದ 300 ರು. ಟಿಕೆಟ್‌ ಕ್ಯೂ. | Kannada Prabha

ಸಾರಾಂಶ

ಈ ಬಾರಿ ಹಾಸನಾಂಬೆ ದರ್ಶನೋತ್ಸವ ಸುಗಮವಾಗಿ ನಡೆಯುತ್ತಿದೆ. ಧರ್ಮದರ್ಶನದ ಕ್ಯೂನಲ್ಲಿ ಬಂದವರಿಗೂ ಕೂಡ ಒಂದೆರೆಡು ಗಂಟೆಗಳಲ್ಲಿ ದರ್ಶನ ಆಗುತ್ತಿದೆ " ಎಂದು ಸಂದೇಶ ನೀಡುತ್ತಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ಕೂಡ ಪ್ರತಿನಿತ್ಯ ಇದೇ ವೆಬ್‌ಸೈಟಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಹಾಸನಾಂಬ ದರ್ಶನೋತ್ಸವ ಸುಲಲಿತವಾಗಿ ನಡೆಯುತ್ತಿದೆ. ಎಲ್ಲಾ ಕ್ಯೂಗಳಲ್ಲಿ ಕೂಡ ಸುಗಮ ದರ್ಶನ ಆಗುತ್ತಿದೆ ಎಂದು ನೀಡಿದ ಸಂದೇಶಗಳು ಹೊರ ಜಿಲ್ಲೆಯ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರೇರೇಪಿಸಿತು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾಡಳಿತದ ಹಸ್ತಕ್ಷೇಪವೇ ಇಲ್ಲದ ಸಮಯದಲ್ಲಿ ನಿರ್ವಿಘ್ನವಾಗಿ ನಡೆಯುತ್ತಿದ್ದ ಹಾಸನಾಂಬೆ ಜಾತ್ರೋತ್ಸವ ಇನ್ನೇನು ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದುಕೊಳ್ಳುತ್ತಿರುವಾಗಲೇ ಜಿಲ್ಲಾಡಳಿತದ ಅತಿಯಾದ ಸಾಮಾಜಿಕ ಜಾಲತಾಣದ ಬಳಕೆಯಿಂದಾಗಿ ಇಡೀ ಜಾತ್ರೋತ್ಸವಕ್ಕೆ ಮತ್ತೆ ಕಳಂಕ ಅಂಟಿಕೊಂಡಿದೆ.

ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಆಗುವ ಪ್ರಚಾರಗಳು ಸಾಲದು ಎನ್ನುವಂತೆ ಈ ಬಾರಿ ಜಿಲ್ಲಾಡಳಿತ ಮಾಧ್ಯಮಗಳನ್ನು ದೂರ ಇಟ್ಟು 15 ಲಕ್ಷ ರು.ಗಳ ಟೆಂಡರ್‌ ನೀಡಿ ವೆಬ್‌ಸೈಟ್‌ ಸೃಷ್ಟಿ ಮಾಡಿಸಿ ಆ ಮೂಲಕ ಹಾಸನಾಂಬೆ ಉತ್ಸವದ ಪ್ರಚಾರ ಮಾಡಿತು. ಅದಕ್ಕಾಗಿಯೇ ಒಂದಷ್ಟು ಜನರನ್ನೂ ನೇಮಿಸಿದೆ. ಅದರಲ್ಲೂ ಆರಂಭದ ದಿನಗಳಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆದಿದ್ದನ್ನು ಕಂಡು ಉತ್ಸಾಹಗೊಂಡ ಜಿಲ್ಲಾಧಿಕಾರಿಗಳು ಪ್ರತಿದಿನ ಇದೇ ವೆಬ್‌ಸೈಟಿನಲ್ಲಿ ದಿನಕ್ಕೆ ಹಲವು ಬಾರಿ "ಈ ಬಾರಿ ಹಾಸನಾಂಬೆ ದರ್ಶನೋತ್ಸವ ಸುಗಮವಾಗಿ ನಡೆಯುತ್ತಿದೆ. ಧರ್ಮದರ್ಶನದ ಕ್ಯೂನಲ್ಲಿ ಬಂದವರಿಗೂ ಕೂಡ ಒಂದೆರೆಡು ಗಂಟೆಗಳಲ್ಲಿ ದರ್ಶನ ಆಗುತ್ತಿದೆ " ಎಂದು ಸಂದೇಶ ನೀಡುತ್ತಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ಕೂಡ ಪ್ರತಿನಿತ್ಯ ಇದೇ ವೆಬ್‌ಸೈಟಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಹಾಸನಾಂಬ ದರ್ಶನೋತ್ಸವ ಸುಲಲಿತವಾಗಿ ನಡೆಯುತ್ತಿದೆ. ಎಲ್ಲಾ ಕ್ಯೂಗಳಲ್ಲಿ ಕೂಡ ಸುಗಮ ದರ್ಶನ ಆಗುತ್ತಿದೆ ಎಂದು ನೀಡಿದ ಸಂದೇಶಗಳು ಹೊರ ಜಿಲ್ಲೆಯ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರೇರೇಪಿಸಿತು. ಅದರಲ್ಲೂ ಆರಂಭದ ಐದು ದಿನಗಳಲ್ಲಿ ಕಂಡ ಯಶಸ್ಸಿನ ಪಾಲು ತಮ್ಮದಾಗಿಸಿಕೊಳ್ಳಬೇಕೆನ್ನುವ ಆತುರಕ್ಕೆ ಬಿದ್ದವರಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ನೀಡಿದ ಸಂದೇಶಗಳೆ ಈ ಅವ್ಯವಸ್ಥೆಗೆ ಕಾರಣವಾಗಿದೆ ಎನ್ನುವುದ ಭಕ್ತರು ಮಾಡುವ ಆರೋಪ. ಈ ಸಂದೇಶಗಳನ್ನು ಕೇಳಿ ದರ್ಶನಕ್ಕೆ ಬಂದು ಹತ್ತು ಹನ್ನೆರೆಡು ಗಂಟೆ ಕ್ಯೂನಲ್ಲಿ ನಿಂತರೂ ದರ್ಶನವಾಗದಿದ್ದಾಗ ಅದೇ ಜನರು ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ರೀತಿಯ ಸಂದೇಶಗಳನ್ನು ಏಕೆ ನೀಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

200 ಬಸ್‌ಗಳು ಬಂದ್‌

ಹಾಸನಾಂಬೆ ಜಾತ್ರಾ ವಿಶೇಷವಾಗಿ ನೆರೆಯ ಬೆಂಗಳೂರು, ತುಮಕೂರು, ಮೈಸೂರು, ಶಿವಮೊಗ್ಗ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ ಬಿಡಲಾಗಿದ್ದ 200 ವಿಶೇಷ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಜಾತ್ರೆ ಆರಂಭವಾದ ಅ.9ರಿಂದಲೇ 200 ಹೆಚ್ಚುವರಿ ಬಸ್ಸುಗಳ ಸಂಚಾರ ಆರಂಭವಾಗಿತ್ತು. ಉತ್ಸವದ ಮೊದಲ ಐದು ದಿನ ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು. ಆದರೆ, ಕಳೆದ ಮೂರು ದಿನಗಳಿಂದ ಸಾಗರೋಪಾದಿಯಲ್ಲಿ ಜನರು ದರ್ಶನಕ್ಕೆ ಆಗಮಿಸುತ್ತಿರುವುದರಿಂದ ಜನರನ್ನು ನಿಯಂತ್ರಿಸುವ ಹಲವು ಕ್ರಮಗಳ ಪೈಕಿ ಬಸ್‌ ವ್ಯವಸ್ಥೆಯನ್ನು ಕೂಡ ನಿಲ್ಲಿಸಲಾಗಿದೆ. ಅದರಲ್ಲೂ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಬಸ್ಸುಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಿದ್ದು, ಬರುವ ಭಕ್ತರ ಪೈಕಿ ಶೇ.70 ರಷ್ಟು ಮಹಿಳೆಯೇ ಆಗಿರುವುದು ವಿಶೇಷ. ಹಾಗಾಗಿ ಇದನ್ನು ಅರಿತ ಜಿಲ್ಲಾಡಳಿತ ಮೂರು ದಿನಗಳಿಂದಲೇ ಹಂತಹಂತವಾಗಿ ಈ 200 ಬಸ್ಸುಗಳನ್ನೂ ನಿಲ್ಲಿಸಲಾಗಿದೆ.ಮಾತಿಗೆ ತಪ್ಪಿದ ಜಿಲ್ಲಾಡಳಿತ:

ಅ. 9ರಿಂದ ಆರಂಭವಾಗಿರುವ ಹಾಸನಾಂಬೆ ದರ್ಶನೋತ್ಸವದ ಕಡೆಯ ಐದು ದಿನಗಳಲ್ಲಿ ಶಿಷ್ಟಾಚಾರದ ದರ್ಶನ (ಪ್ರೋಟೋಕಾಲ್‌) ಇರುವುದಿಲ್ಲ ಎಂದು ಜಿಲ್ಲಾಡಳಿತ ಆರಂಭದಲ್ಲೇ ಹೇಳಿತ್ತು. ಆದರೆ, ಇದೀಗ ಮಾತು ತಪ್ಪಿರುವ ಜಿಲ್ಲಾಡಳಿತ ಕಡೆಯ ಐದು ದಿನಗಳಲ್ಲಿ ಕೂಡ ಗಣ್ಯರು ಸೇರಿದಂತೆ ಹಲವರಿಗೆ ಶಿಷ್ಟಾಚಾರದ ಮೂಲಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುತ್ತಿದೆ. ಹಾಗೆಯೇ ಶಿಷ್ಟಾಚಾರದಡಿ ಬರುವವರ ಜತೆ ನಾಲ್ಕು ಜನರಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು. ಆದರೆ, ಈವರೆಗೂ ಅದು ಪಾಲನೆಯಾಗಿಲ್ಲ. ಶಿಷ್ಟಾಚಾರದಡಿ ಬರುವವರ ಜತೆ ಹೆಚ್ಚಿನ ಜನರು ಬರುವುದರಿಂದ ಸಾಮಾನ್ಯ ಜನರ ದರ್ಶನಕ್ಕೆ ತೊಂದರೆಯಾಗಿ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾಗಿ ಜಿಲ್ಲಾಡಳಿತ ತಾನು ಹೇಳಿದಂತೆ ನಡೆದುಕೊಂಡಿಲ್ಲ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ