ಐದೂವರೆ ವರ್ಷದ ಬಳಿಕ ಮಲೆನಾಡಲ್ಲಿ ಮತ್ತೆ ರಣಜಿ ಹವಾ

KannadaprabhaNewsNetwork |  
Published : Oct 20, 2025, 01:02 AM IST
ಪೊಟೋ: 19ಎಸ್‌ಎಂಜಿಕೆಪಿ02ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಮೈದಾನದ ಹೊರನೋಟ. | Kannada Prabha

ಸಾರಾಂಶ

2020ರ ಬಳಿಕ ಮಲೆನಾಡಿನಲ್ಲಿ ಮತ್ತೆ ರಣಜಿ ಹವಾ ಶುರುವಾಗಿದ್ದು, ಕರ್ನಾಟಕ ಮತ್ತು ಗೋವಾ ತಂಡಗಳ ನಡುವೆ ನಡೆಯಲಿರುವ ರಣಜಿ ಪಂದ್ಯಕ್ಕೆ ನವುಲೆಯ ಕೆಎಸ್‌ಸಿಎ ಮೈದಾನ ಸಾಕ್ಷಿಯಾಗಲಿದೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

2020ರ ಬಳಿಕ ಮಲೆನಾಡಿನಲ್ಲಿ ಮತ್ತೆ ರಣಜಿ ಹವಾ ಶುರುವಾಗಿದ್ದು, ಕರ್ನಾಟಕ ಮತ್ತು ಗೋವಾ ತಂಡಗಳ ನಡುವೆ ನಡೆಯಲಿರುವ ರಣಜಿ ಪಂದ್ಯಕ್ಕೆ ನವುಲೆಯ ಕೆಎಸ್‌ಸಿಎ ಮೈದಾನ ಸಾಕ್ಷಿಯಾಗಲಿದೆ.

ಅ.25ರಿಂದ 28ರವರೆಗೆ ನಾಲ್ಕು ದಿನ ನಡೆಯುವ ರಣಜಿ ಪಂದ್ಯಕ್ಕೆ ಈಗಾಗಲೇ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಮಲೆನಾಡಿನ ಕ್ರಿಕೆಟ್‌ ಪ್ರಿಯರು ಕುಣಿದು, ಕುಪ್ಪಳಿಸುವ ಅವಕಾಶ ಸಿಕ್ಕಿದೆ. 2020ರ ಫೆಬ್ರವರಿ 4ರಿಂದ 7ರವರೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ತಂಡಗಳು ಈ ಮೈದಾನದಲ್ಲಿ ಸೆಣಸಾಡಿದ್ದವು. ಇದೇ ಕೊನೆ ರಣಜಿ ಪಂದ್ಯವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೂಚ್‌ ಬಿಹಾರ್‌ ಟ್ರೋಫಿ, 15 ವರ್ಷದೊಳಗಿನ ಬಾಲಕಿಯರ ಕ್ರಿಕೆಟ್‌ ಪಂದ್ಯಾವಳಿ, ವಿಜಯ್‌ ಮರ್ಚಂಟ್‌ 16 ವರ್ಷದೊಳಗಿನ ಬಾಲಕರ ಕ್ರಿಕೆಟ್‌ ಪಂದ್ಯಾವಳಿ ಬಿಟ್ಟರೆ ಪ್ರಥಮ ದರ್ಜೆ ಪಂದ್ಯಗಳಾವುವು ನಡೆದಿರಲಿಲ್ಲ.

ಈ ಋುತುವಿನಲ್ಲಿ ಎಲೈಟ್‌ ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಗುಂಪು ಹಂತದಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿದೆ. ಈ ಪೈಕಿ ತವರಿನಲ್ಲಿ 3 ಪಂದ್ಯಗಳನ್ನು ಆಡಲಿದ್ದು, ಹೊರ ರಾಜ್ಯದಲ್ಲಿ 4 ಪಂದ್ಯಗಳನ್ನಾಡಲಿದೆ. ರಾಜ್‌ಕೂಟ್‌ನಲ್ಲಿ ಈ ವರ್ಷದ ಮೊದಲ ರಣಜಿ ಪಂದ್ಯದಲ್ಲಿ ಸೌರಾಷ್ಟ್ರವನ್ನು ತಂಡವನ್ನು ಎದುರಿಸಿರುವ ಕರ್ನಾಟಕ ತಂಡ ಡ್ರಾ ಮಾಡಿಕೊಂಡಿದ್ದು, ಎರಡನೇ ಪಂದ್ಯಕ್ಕಾಗಿ ಶಿವಮೊಗ್ಗದ ಕೆಎಸ್‌ಸಿಎ ಮೈದಾನಕ್ಕೆ ಆಗಮಿಸಲಿದೆ.

ಈಗಾಗಲೇ ಬಿಸಿಸಿಐನ ಕ್ಯೂರಿಯೇಟರ್‌ಗಳು ನಗರಕ್ಕೆ ಆಗಮಿಸಿ ಮೈದಾನದ ಪಿಚ್‌ ಅನ್ನು ಕ್ರಿಕೆಟ್‌ ಪಂದ್ಯಾವಳಿಗಾಗಿ ಹದಗೊಳಿಸುತ್ತಿದ್ದಾರೆ. ಅ.23ರಂದು ಬೆಳಗ್ಗೆ ಕರ್ನಾಟಕ ತಂಡದ ಆಟಗಾರರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ನಂತರ ಎರಡು ದಿನ ಮೈದಾನದಲ್ಲಿ ಅಭ್ಯಾಸ ನಡೆಸುವರು. ಈ ಋುತುವಿನಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟೂರ್ನಿಯ 2ನೇ ಪಂದ್ಯ ಇದಾಗಿದೆ.

ಈಗಾಗಲೇ ತನ್ನ ಮೊದಲ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಡ್ರಾ ಮಾಡಿಕೊಂಡಿದೆ. ಅಂಕಪಟ್ಟಿಯಲ್ಲಿ 1 ಅಂಕ ಕಲೆ ಹಾಕಿದ್ದು, ಎಲೈಟ್‌ ಬಿ ಗುಂಪಿನಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ಕಿರಿಯರ ಕ್ರಿಕೆಟ್‌ ಪಂದ್ಯಾವಳಿಯ ಸವಿಯನ್ನು ಸವಿಸಿದ್ದ ಕ್ರೀಡಾ ಪ್ರೇಮಿಗಳು ಇದೀಗ ರಣಜಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಐದುವರೆ ವರ್ಷದ ಬಳಿಕ ಈ ಕ್ರೀಡಾಂಗಣದಲ್ಲಿ ರಣಜಿ ಪಂದ್ಯ ನಡೆಯುತ್ತಿರುವುದರಿಂದ ಹೆಚ್ಚಿನ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ.

ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಮೈದಾನ ಈಗಾಗಲೇ ಸಾಕಷ್ಟು ಪಂದ್ಯಗಳಿಗೆ ಆತಿಥ್ಯ ನೀಡುತ್ತಿದೆ. 2017ರಿಂದ ಈವರೆಗೆ ಆರು ರಾಜ್ಯಗಳ ದಕ್ಷಿಣ ವಲಯ ಸೈಯದ್‌ ಮುಷ್ತಾಕ್‌ ಅಲಿ ಟಿ-20 ಕ್ರಿಕೆಟ್‌ ಪಂದ್ಯಾವಳಿ ಸೇರಿದಂತೆ ಹಲವು ರಣಜಿ ಪಂದ್ಯಾಗಳಿಗೆ ಅತಿಥ್ಯ ನೀಡಿರುವ ಕೆಎಸ್‌ಸಿಎ ಮೈದಾನ ಭಾರತ ಮತ್ತು ವೆಸ್ಟ್‌ಇಂಡೀಸ್‌ ತಂಡಗಳ ನಡುವೆ ನಡೆದ ಅನಾಧಿಕೃತ ಟೆಸ್ಟ್‌ ಪಂದ್ಯಕ್ಕೂ ಸಾಕ್ಷಿಯಾಗಿದೆ.

ಪ್ರಮುಖರ ಗೈರು

ನಾಯಕ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡಕ್ಕೆ ಗೋವಾ ವಿರುದ್ಧ ನಡೆಯುವ ರಣಜಿ ಪಂದ್ಯಾವಳಿಗೆ ಪ್ರಮುಖ ಆಟಗಾರರ ಗೈರು ಕಾಡಲಿದೆ. ಆಸ್ಪ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯಾವಳಿಗೆ ಕೆ.ಎಲ್‌.ರಾಹುಲ್‌ ಆಯ್ಕೆಯಾಗಿದ್ದು, ರಣಜಿ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಅಲ್ಲದೆ, ಹಿರಿಯ ಅನುಭವಿ ಆಟಗಾರ ಮನೀಷ್‌ ಪಾಂಡೆಯೂ ಅಲಭ್ಯರಾಗಲಿದ್ದಾರೆ. ಜೊತೆಗೆ ಆರ್‌.ಸಮರ್ಥ್‌, ಕೆ.ಗೌತಮ್‌ ಅವರು ತಂಡದಲ್ಲಿ ಇಲ್ಲದಿರುವುದು ಪ್ರಮುಖ ಆಟಗಾರರ ಕೊರತೆ ಪಂದ್ಯಾವಳಿಗೆ ಕಾಡಲಿದೆ. ಉಳಿದಂತೆ ಕರುಣ್ ನಾಯರ್‌, ಅಭಿನವ್‌ ಮನೋಹರ್‌, ವೈಶಾಕ್‌ ವಿಜಯಕುಮಾರ್‌, ವಿದ್ವತ್‌ ಕಾವೇರಪ್ಪ, ಶ್ರೇಯಸ್‌ ಗೋಪಾಲ್ ಅಂತ ಆಟಗಾರರರು ತಂಡದಲ್ಲಿದ್ದಾರೆ.

ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುವ ಎಲ್ಲಾ ಕ್ರಿಕೆಟ್‌ ಪಂದ್ಯಾವಳಿಯನ್ನೂ ನೋಡುತ್ತೇನೆ. ಕಳೆದ ವರ್ಷ ನಡೆದ ಕೂಚ್‌ ಬಿಹಾರ್‌ ಟ್ರೋಫಿಯ ಪಂದ್ಯಾವಳಿಯನ್ನು ಕಡೆಯದಾಗಿ ನೋಡಿದ್ದೆ. ಇದೀಗ ರಣಜಿ ಪಂದ್ಯಾವಳಿ ಬಂದಿದೆ. ಕರ್ನಾಟಕ ಮತ್ತು ಗೋವಾ ಪಂದ್ಯ ನೋಡಲು ಕಾತುರನಾಗಿದ್ದೇನೆ.

- ಮೇಘರಾಜ್‌, ಸ್ಥಳೀಯ.

ಶಿವಮೊಗ್ಗ ನವುಲೆಯ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಮುಂದಿನ ದಿನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ನಿರಂತರವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರಿಕೆಟ್‌ಗೆ ಆತಿಥ್ಯ ವಹಿಸಿಕೊಳ್ಳುವ ಸಲುವಾಗಿ ಈ ಪಂದ್ಯವನ್ನು ಅತ್ಯುತ್ತಮವಾಗಿ ಸಂಘಟಿಸುವ ಮೂಲಕ ಕೆಎಎ ಮತ್ತು ಬಿಸಿಸಿಐ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಅ.25ರಿಂದ ನಡುವೆ ರಣಜಿ ಪಂದ್ಯಕ್ಕೆ ನಗರದ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಪಂದ್ಯ ವೀಕ್ಷಣೆಗೆ ಮುಕ್ತ ಆಹ್ವಾನ ನೀಡಲಾಗುವುದು.

- ಡಿ.ಎಸ್.ಅರುಣ್, ಕೆಎಸ್‌ಸಿಎ ಮೂಲಸೌಲಭ್ಯ ಸಮಿತಿ ಸದಸ್ಯ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ