ಬಿಹಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಗಂಭೀರ ಆರೋಪ ಮಾಡಿದರು.
ಶಿವಮೊಗ್ಗ: ಬಿಹಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಗಂಭೀರ ಆರೋಪ ಮಾಡಿದರು.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರು ಬಿಹಾರದ ಚುನಾವಣೆಗೆ ಫಂಡ್ ಕಳುಹಿಸಬೇಕೆಂದು ಅಧಿಕಾರಿಗಳಿಂದ ಲೂಟಿ ಮಾಡುತ್ತಿದ್ದಾರೆ. ಸಚಿವರ ವಸೂಲಿಗೆ ಅಧಿಕಾರಿಗಳು ಕಣ್ಣೀರು ಹಾಕಿಕೊಂಡು ನಮ್ಮ ಎದುರಿಗೆ ಹೇಳುತ್ತಿದ್ದಾರೆ. ವರ್ಗಾವಣೆ ದಂಧೆ ಮುಗಿದಿದೆ. ಈಗ ರಿನಿವಲ್ ಅಂತ ಎಲ್ಲಾ ಇಲಾಖೆಯ ಮಂತ್ರಿಗಳು ವಸೂಲಿ ಮಾಡಿ ಬಿಹಾರ ಚುನಾವಣೆಗೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಈಗ ದಂಧೆ ಆಗಿದೆ. ಅದು ಬಿಹಾರಕ್ಕೆ ತಲುಪಲ್ಲ, ಅದು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ. ಬಿಹಾರದ ಚುನಾವಣೆ ಇಟ್ಟುಕೊಂಡು ರಾಜ್ಯದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.ಚಿತ್ತಾಪುರದ ಘಟನೆಯೂ ಅಷ್ಟೇ, ಶಾಸಕ ಗುತ್ತೇದಾರ್ ಅವರು ಹೇಳಿದ್ದಾರೆ, ದೀಪಾವಳಿ ಪ್ರಯುಕ್ತ ನನ್ನ ಕಚೇರಿ ಸ್ವಚ್ಛಗೊಳಿಸುವ ಕೆಲಸ ಆಗಿದೆ. ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಪೂರಕವಾದ ದಾಖಲೆ ಹುಡುಕಲು ಅವರ ಹೈಕಮಾಂಡ್ ಹೇಳಿದೆಯೆನೋ ಗೊತ್ತಿಲ್ಲ ಎಂದು ಟೀಕಿಸಿದರು. 6 ತಿಂಗಳು ಸಂಬಳ ಕೊಟ್ಟಿಲ್ಲ ಅಂತ ನೀರುಗಂಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒತ್ತಡದಿಂದಾಗಿ ಸರ್ವೆಗೆ ಹೋಗಿದ್ದ ಹೆಣ್ಣು ಮಗಳು ಬಾವಿಗೆ ಹಾರಿದ್ದಾರೆ, ಅದೆನು ಅಂತ ನಮಗೆ ಗೊತ್ತಿಲ್ಲ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ನೈತಿಕತೆಯನ್ನು ಸರ್ಕಾರ ಕೊಡುತ್ತಿಲ್ಲ ಎಂದು ದೂರಿದರು.
ಆರ್‌ಎಸ್‌ಎಸ್‌ಗೆ ನಿರ್ಬಂಧವೇ ಕಾಂಗ್ರೆಸ್‌ನ
ಅಧಃಪತನಕ್ಕೆ ಕಾರಣವಾಗುತ್ತದೆ
ಶಿವಮೊಗ್ಗ: ಆರ್‌ಎಸ್‌ಎಸ್‌ಗೆ ನಿರ್ಬಂಧ ಹೇರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಮೇಲೆ ನಿರ್ಬಂಧ ಹೇರುವ ಕೆಲಸ ಮಾಡುತ್ತಿದೆ. ಹಿಂದೆ ಇದನ್ನು ಜಗದೀಶ್ ಶೆಟ್ಟರ್ ಅವರು ಮಾಡಿದ್ರು ಅಂತ ಸಿಎಂ ಅವರು ಹೇಳಿದ್ದಾರೆ. ಚಿತ್ತಾಪುರದಲ್ಲಿ ಅನುಮತಿಗೆ ತಿರುಗಾಡಿಸಲಾಗುತ್ತಿದೆ. ಆರ್‌ಎಸ್‌ಎಸ್‌ನ ಆಸ್ತಿ ಪರಿಶೀಲನೆ ಮಾಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಕಾಂಗ್ರೆಸ್‌ನ ಅಧಃಪತನಕ್ಕೆ ಕಾರಣವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು, ಹರಿಪ್ರಸಾದ್ ಮಂತ್ರಿ ಸ್ಥಾನ ಪಡೆಯಲು, ಹೈಕಮಾಂಡ್ ಮೆಚ್ಚುಗೆ ಪಡೆಯಲು ಹೀಗೆ ಮಾತನಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೆಂಕಿ ಹಾಕಿದವರ ವಿರುದ್ಧ ಪ್ರಕರಣವನ್ನು ಸಚಿವ ಸಂಪುಟದಲ್ಲಿ ರದ್ದು ಮಾಡುತ್ತಾರೆ ಎಂದರೆ ಇವರಿಗೆ ಏನ್ ಹೇಳಬೇಕು ಎಂದು ಪ್ರಶ್ನಿಸಿದರು.ಆರ್‌ಎಸ್‌ಎಸ್‌ಗೆ ಬಂದಂತಹವರಿಗೆ ಅಮಾನತು ಮಾಡುವ ಹಾಗೆ, ಆರ್‌ಎಸ್‌ಎಸ್ ದಂಡ ಹಿಡಿದವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತರು ತಮ್ಮ ಮನೆಯ ಅನ್ನ ತಿಂದು ದೇಶದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಖಾಸಗಿಯವರು ಗುಂಡಿ ಮುಚ್ಚುತ್ತೇವೆ ಎಂದರೆ ಸಚಿವರು ಸ್ವಾಗತ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.