ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಪೊನ್ನತ್ಪುರ ಬೋವಿ ಕಾಲೋನಿ ನಿವಾಸಿ ಅಣ್ಣಪ್ಪ ಅವರ ಹೊಲದಲ್ಲಿ ಔಷಧಿ ಅಂಗಡಿಯವರು ನೀಡಿದ ಬದಲಿ ಕಳೆನಾಶಕ ಸಿಂಪಡಣೆಯಿಂದಾಗಿ ಲಕ್ಷಾಂತರ ಮೌಲ್ಯದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಪೊನ್ನತ್ಪುರ ಬೋವಿ ಕಾಲೋನಿ ನಿವಾಸಿ ಅಣ್ಣಪ್ಪ ಮಾತನಾಡಿ, ನಾವು ಹಳೇಬೀಡು ಸಮೀಪದ ಘಟ್ಟದಹಳ್ಳಿಯಲ್ಲಿ 2 ಎಕರೆ 26 ಗುಂಟೆ ಜಮೀನನ್ನು ಬೋಗ್ಯಕ್ಕೆ ಪಡೆದು ಒಟ್ಟು 13 ಲಕ್ಷ ರುಪಾಯಿ ಬಂಡವಾಳ ಹೂಡಿ ಶುಂಠಿ ಬೆಳೆದಿದ್ದೆವು. ಕಳೆ ನಿಯಂತ್ರಣಕ್ಕಾಗಿ ಬೇಲೂರಿನ ರಘು ದಾಸೇಗೌಡ ಪ್ಲಾಂಟೇಶನ್‌ನಲ್ಲಿ ‘71 ಆಕ್ಸಿಗೋಲ್ಡ್’ ಕಳೆನಾಶಕವನ್ನು ಕೇಳಿದಾಗ ಅಂಗಡಿಯವರು ಆಕ್ಸಿಗೋಲ್ಡ್ ಬದಲಿಗೆ ಬತ್ತಕ್ಕೆ ಹೊಡೆಯುವ ‘ಮ್ಯಾಕ್ಸ್‌ವೆಲ್ 71’ ಎಂಬ ಬೇರೆ ಕಳೆನಾಶಕವನ್ನು ನೀಡಿ, ''''''''ಇದನ್ನು ಸಿಂಪಡಿಸಿದರೆ ಕಳೆ ಸಂಪೂರ್ಣವಾಗಿ ನಾಶ ಆಗುತ್ತದೆ'''''''' ಎಂದು ಹೇಳಿದ್ದರು. ಅಂಗಡಿಯವರ ಮಾತನ್ನು ನಂಬಿ ಔಷಧಿ ಸಿಂಪಡಿಸಿದ 8 ದಿನಗಳಾದರೂ ಕಳೆ ಒಣಗಲಿಲ್ಲ . ಈ ಬಗ್ಗೆ ಮರುಪ್ರಶ್ನಿಸಿದಾಗ "ಔಷಧಿ ಕೆಲಸ ಮಾಡಲು 15 ದಿನ ಬೇಕು " ಎಂದು ಅಂಗಡಿಯವರು ಹೇಳಿ ಕಳುಹಿಸಿದ್ದರು. ಆದರೆ ದಿನಗಳು ಕಳೆದಂತೆ ಕಳೆಯ ಜೊತೆಗೆ ಶುಂಠಿ ಗಿಡಗಳೂ ಸಂಪೂರ್ಣವಾಗಿ ಒಣಗಲು ಆರಂಭಿಸಿದವು. ನಂತರ ಬೆಳೆ ಉಳಿಸಿಕೊಳ್ಳಲು ಅಂಗಡಿಯವರ ಸಲಹೆಯಂತೆ ಇತರೆ ದುಬಾರಿ ಔಷಧಿಗಳನ್ನು ಹೊಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ನಾಲ್ಕು ತಿಂಗಳಾದರೂ ಬೆಳೆಯೂ ಬರದೆ, ಇತ್ತ ಕಳೆಯೂ ಸರಿಯಾಗಿ ನಾಶವಾಗದೆ ಇಡೀ ಬೆಳೆ ಸಂಪೂರ್ಣ ಹಾಳಾಗಿದೆ. ಕಳೆದ 15 ವರ್ಷಗಳಿಂದ ಶುಂಠಿ ಬೆಳೆಯನ್ನೇ ನಂಬಿಕೊಂಡು ಈ ಬಾರಿ 35 ರಿಂದ 40 ಲಕ್ಷ ರುಪಾಯಿ ಆದಾಯದ ನಿರೀಕ್ಷೆಯಲ್ಲಿದ್ದು . ಆದರೆ ಈಗ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ಬಂಗಾರ ಅಡವಿಟ್ಟು ಹಾಗೂ ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಯ ಹಂತಕ್ಕೆ ತಲುಪಿದ್ದೇವೆ ಎಂದು ಅಳಲು ತೋಡಿಕೊಂಡರು.ಅಣ್ಣಪ್ಪ ಅವರ ಪತ್ನಿ ನೇತ್ರ ಮಾತನಾಡಿ, ನಮ್ಮ ಕುಟುಂಬಸ್ಥರು ಸುಮಾರು 15 ವರ್ಷದಿಂದ ಶುಂಠಿ ಬೆಳೆಯನ್ನು ಬೆಳೆಯುತ್ತಿದ್ದೇವೆ. ಯಾವ ವರ್ಷವೂ ಈ ಪರಿಸ್ಥಿತಿ ಬಂದಿರಲಿಲ್ಲ. ನಾವು ಬೆಳೆಗಾಗಿ ಒಡವೆ ಅಡವಿಟ್ಟು, ಸಾಲ ಮಾಡಿ ಇಲ್ಲಿಗೆ ಬಂದು ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಔಷಧಿ ಅಂಗಡಿಯವರು ನಮಗೆ ಯಾವುದೇ ಬಿಲ್ ಕೊಟ್ಟಿಲ್ಲ. ಬೆಳೆ ಹಾಳಾದ ಬಗ್ಗೆ ಕೇಳಲು ಹೋದರೆ ಜೋರಾಗಿ ಮಾತಾಡಿ ಉಡಾಫೆಯಿಂದ ವರ್ತಿಸುತ್ತಾರೆ. ನಮಗೆ ಮಾತಾಡಲು ಅವಕಾಶವನ್ನೇ ಕೊಡುತ್ತಿಲ್ಲ. ಸಾಲಗಾರರು ಮನೆಗೆ ಬಂದು ಹಿಂಸೆ ನೀಡುತ್ತಿದ್ದಾರೆ. ಅವರಿಗೆ ಎಲ್ಲಿಂದ ಹಣ ತಂದು ಕೊಡಲಿ? ನಮಗೆ ಈ ಬೆಳೆಯೇ ಜೀವನಕ್ಕೆ ಆಧಾರವಾಗಿತ್ತು. ಈಗ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ " ಈಗಾಗಲೇ ಹಾಸನದ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ.