- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ । ಎಐಟಿಯುಸಿ ನೇತೃತ್ವದಲ್ಲಿ ಬಹಿರಂಗ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿರೋಧಿಸಿ ದುಡಿಯುವ ಜನಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಫೆ.1 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಜೆಟ್ ಪೂರ್ವ ಜನಾಗ್ರಹ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಆಯೋಜಿಸಲಾಗಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಡಾಯಿ, ಭರವಸೆ, ಭಾಷಣ ಸಾಕು, ಜನಪರ ಆಡಳಿತ ಬೇಕು ಘೋಷಣೆಯೊಂದಿಗೆ ಅಂದು ಬಿಸಿಯೂಟ, ಅಂಗನವಾಡಿ, ಆಶಾ, ಕೈಗಾರಿಕಾ, ಕಟ್ಟಡ, ಸಾರಿಗೆ, ಬೀಡಿ, ಪ್ಲಾಂಟೇಶನ್, ಬ್ಯಾಂಕ್, ವಿಮಾ, ಗಣಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿಯವರು ಘೋಷಿಸಿದ್ದ 6ನೇ ಗ್ಯಾರಂಟಿ ಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ರು, ಶಾಲೆಗಳಲ್ಲಿ ಬಿಸಿ ಯೂಟ ಕಾರ್ಯಕರ್ತೆಯರಿಗೆ 10 ಸಾವಿರ ರು. ಮತ್ತು ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರು. ಗೌರವಧನ ಹೆಚ್ಚಿಸುವುದರ ಜೊತೆಗೆ ಎಲ್ಲಾ ಯೋಜನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಇಡುಗಂಟು, ಇಎಸ್‌ಐ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲು ಪ್ರಬಲ ಜನಾಂದೋಲನ ರೂಪಿಸಲು ಕನಿಷ್ಟ ವೇತನ ಕುರಿತಂತೆ ಬೆಲೆಗಳ ವೈಜ್ಞಾನಿಕ ಅಧ್ಯಯನವನ್ನು ರಾಜ್ಯ ಉಚ್ಚ ನ್ಯಾಯಾಲಯ 31,500 ರು. ಪ್ರತಿಯೊಂದು ಕುಟುಂಬ ನಿರ್ವಹಣೆಗೆ ಅಗತ್ಯವಾಗಿದೆ ಎಂದು ಹೇಳಿದೆ ಎಂದರು.ಈ ಆದೇಶದನ್ವಯ ರಾಜ್ಯದ 1.7 ಕೋಟಿ ಕಾರ್ಮಿಕರು ಇದರ ಪ್ರಯೋಜನ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕೆ.ಗುಣಶೇಖರನ್, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿ ಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾವತಿ, ಪಾರ್ವತಮ್ಮ, ಸವಿತಾ, ವಸಂತ, ಶೈಲ, ಕಲಾ ಉಪಸ್ಥಿತರಿದ್ದರು. 13 ಕೆಸಿಕೆಎಂ 6ಚಿಕ್ಕಮಗಳೂರಿನಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.