ತಿರುಪತಿಯಲ್ಲಿ ನಿತ್ಯ ನಡೆಯುವ ಮೊದಲ ಆರತಿಯನ್ನು ಕರ್ನಾಟಕದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇತರೆ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ನೀಡುವ ಸಂಬಂಧ ರಾಜ್ಯ ಸರ್ಕಾರದಿಂದ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಿರುಪತಿಯಲ್ಲಿ ನಿತ್ಯ ನಡೆಯುವ ಮೊದಲ ಆರತಿಯನ್ನು ಕರ್ನಾಟಕದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇತರೆ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ನೀಡುವ ಸಂಬಂಧ ರಾಜ್ಯ ಸರ್ಕಾರದಿಂದ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ನಗರದ ಬನಶಂಕರಿಯ ಆರನೇ ಹಂತದಲ್ಲಿ ಷಣ್ಮುಖ ಸುಬ್ರಮಣ್ಯ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ದಿನದಿಂದ ಮನೆದೇವರು ತಿರುಪತಿಗೆ ಹೋಗಿರಲಿಲ್ಲ. ಇತ್ತೀಚೆಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಬಗ್ಗೆ ಆಲೋಚನೆ ಮಾಡಿದ್ದೇನೆ ಎಂದು ಹೇಳಿದರು.
ಈವರೆಗೆ ತಿರುಮಲ ವೆಂಕಟೇಶ್ವರ ದೇಗುಲದ ಒಳ ಮುಖ್ಯದ್ವಾರದ ಬಳಿ ತೆರಳಿ ಪೂಜೆ ಮಾಡಲು ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಮಾತ್ರ ಅವಕಾಶವಿದೆ. ಈ ಆರತಿಯನ್ನು ಪ್ರತಿದಿನ ನಮ್ಮ ರಾಜ್ಯ ಸರ್ಕಾರದ ವಿಶೇಷ ಅಧಿಕಾರಿ ಪಡೆಯುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿ ಯಾರಾದರೂ ಭೇಟಿ ನೀಡಿದ್ದರೆ ಅಥವಾ ಸರ್ಕಾರ ಪರ ಯಾರೇ ಹೋಗಿದ್ದರೂ ಅವರಿಗೆ ಈ ಆರತಿ ನೀಡಬೇಕು ಎನ್ನುವ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದು ನನ್ನ ಕಾಲದಲ್ಲಿ ಆಗಲಿರುವ ಮುಖ್ಯ ಘೋಷಣೆ ಎಂದರು.
ದರ್ಶನ ಸಿಗದೆ ವಾಪಸ್ ಬಂದಿದ್ದಾರೆ:
ರಾಜ್ಯದ ಎಷ್ಟೋ ಮಂದಿ ಶಾಸಕರು, ಜನಪ್ರತಿನಿಧಿಗಳು ತಿರುಪತಿಗೆ ಹೋದಾಗ ದರ್ಶನ ಸಿಗದೇ ವಾಪಸ್ ಬಂದಿದ್ದಾರೆ. ಆರತಿ ಪಡೆಯುವ ನಿರ್ಧಾರದಿಂದ ದೇವರ ಮುಂದೆ ನಿಂತು ಆರತಿ ಪಡೆಯಲು ಅವಕಾಶ ದೊರೆಯಲಿದೆ. ಈ ರಾಜ್ಯದ ಸೇವೆ ಮಾಡುವವರಿಗೆ ದೇವರಲ್ಲಿ ಪ್ರಾರ್ಥನೆ ಮಾಡಲು ಈ ಅವಕಾಶ ಒದಗಿಸಲಾಗುತ್ತದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.