ರಶೀದ್‌ ಪುಸ್ತಕದಲ್ಲಿ ಡಿಕೆಶಿ ಬೈಕ್‌ ಪ್ರೇಮ ಅನಾವರಣ

KannadaprabhaNewsNetwork |  
Published : Jul 13, 2026, 12:45 AM ISTUpdated : Jul 13, 2026, 12:47 PM IST
DK Shivakumar

ಸಾರಾಂಶ

ಪತ್ರಕರ್ತ ರಶೀದ್‌ ಕಿದ್ವಾಯಿ ಅವರು ಪುಸ್ತಕದಲ್ಲಿ, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್‌ ಅವರ ಯೆಜ್ಡಿ ಬೈಕ್‌ ಪ್ರೀತಿಯ ಅನಾವರಣವಾಗಿದೆ. ‘ಡಿ.ಕೆ. ಶಿವಕುಮಾರ್‌- ಕಾಂಗ್ರೆಸ್‌ನ ಸಂಕಟ ನಿವಾರಕ, ಕರ್ನಾಟಕದ ಕಿಂಗ್‌ಮೇಕರ್’ ಪುಸ್ತಕದಲ್ಲಿ, ಯೆಜ್ಡಿ ರೋಡ್‌ಕಿಂಗ್ ಬೈಕ್‌ ಜತೆಗಿನ ಅವರ ಒಡನಾಟದ ಬಗ್ಗೆ ಬರೆಯಲಾಗಿದೆ.

ನವದೆಹಲಿ: ಪತ್ರಕರ್ತ ರಶೀದ್‌ ಕಿದ್ವಾಯಿ ಅವರು ಪುಸ್ತಕದಲ್ಲಿ, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್‌ ಅವರ ಯೆಜ್ಡಿ ಬೈಕ್‌ ಪ್ರೀತಿಯ ಅನಾವರಣವಾಗಿದೆ. ‘ಡಿ.ಕೆ. ಶಿವಕುಮಾರ್‌- ಕಾಂಗ್ರೆಸ್‌ನ ಸಂಕಟ ನಿವಾರಕ, ಕರ್ನಾಟಕದ ಕಿಂಗ್‌ಮೇಕರ್’ ಪುಸ್ತಕದಲ್ಲಿ, ಯೆಜ್ಡಿ ರೋಡ್‌ಕಿಂಗ್ ಬೈಕ್‌ ಜತೆಗಿನ ಅವರ ಒಡನಾಟದ ಬಗ್ಗೆ ಬರೆಯಲಾಗಿದೆ.

ಶಿವಕುಮಾರ್‌ ವಿದ್ಯಾರ್ಥಿಯಾಗಿದ್ದ 1980ರ ಕಾಲವನ್ನು ಸ್ಮರಿಸಿರುವ ಲೇಖಕರು, ಅವರ ಸಂಘಟನಾ ಚಾತುರ್ಯವನ್ನೂ ಹ್ಯಾಚೆಟ್ ಇಂಡಿಯಾ ಪ್ರಕಟಿಸಿರುವ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

ಪುಸ್ತಕದಲ್ಲೇನಿದೆ?:

ತಮ್ಮ ಸುತ್ತಲಿರುವ ಜನರನ್ನು ಸಂಘಟಿಸುವ ರೀತಿಯಿಂದಲೇ ಶಿವಕುಮಾರ್‌ ಕಾಲೇಜಿನಲ್ಲಿ ಜನಪ್ರಿಯರಾಗಿದ್ದರು. ರಕ್ತಗತವಾಗಿ ಬಂದಿದ್ದ ಅಧಿಕಾರ ಚಲಾಯಿಸುವ ಗುಣದಿಂದ ಅವರು, ಕಾಲೇಜಿನ ಒಳಗೆ ಮತ್ತು ಹೊರಗೆ ಜನರನ್ನು ಒಟ್ಟುಗೂಡಿಸುತ್ತಿದ್ದರು. ಮುಂದೆ ಅವರು ರಾಜಕಾರಣಕ್ಕಿಳಿಯಬಹುದು ಎಂಬ ಸುಳಿವು ಅಂದೇ ಸಿಗುವಂತಿತ್ತು. ಕಾಲೇಜು ಚುನಾವಣೆಗಳಲ್ಲಿ ಅವರ ಭಾಗವಹಿಸುವಿಕೆ ಇದಕ್ಕೆ ಪುಷ್ಟಿ ನೀಡುತ್ತಿತ್ತು.

ಆಗೆಲ್ಲಾ ಯೆಜ್ಡಿ ರೋಡ್‌ಕಿಂಗ್ ಬೈಕ್‌ಗಳು ‘ಸಿಇಎ 7684’ ಸಂಖ್ಯೆಯ ಫಲಕವನ್ನು ಹೊಂದಿರುತ್ತಿದ್ದವು. ಯೌವ್ವನದ ಸಂಕೇತವಾಗಿದ್ದ ಅದರಲ್ಲಿ ಶಿವಕುಮಾರ್‌, ಹಾಸ್ಟೆಲ್‌, ಪ್ರಚಾರದ ಸ್ಥಳಗಳು ಮತ್ತು ಕಾಲೇಜು ಮೈದಾನಗಳಲ್ಲಿ ಓಡಾಡುತ್ತಿದ್ದರು.

ಪದವಿ ಮುಗಿಸುವ ಮುನ್ನವೇ ಅವರಿಗೆ ಕಾಂಗ್ರೆಸ್‌ನಿಂದ ವಿಧಾನಸಭೆ ಚುನಾವಣೆಯ ಟಿಕೆಟ್‌ ದೊರಕಿತು. 1989ರಲ್ಲಿ ಶಾಸಕರಾದ ಅವರು, ಬಳಿಕ ಮಂತ್ರಿಯಾದರು.

ಜವಾಬ್ದಾರಿ ಹೆಚ್ಚಾದಂತೆಲ್ಲಾ ಅವರ ಬೈಕ್‌ ಮರೆಯಾಯಿತು. ಕೊನೆಗೆ, ಸದಾಶಿವನಗರದ ಅವರ ನಿವಾಸದಲ್ಲಿ ತುಕ್ಕು ಹಿಡಿಸಿಕೊಂಡು ಕುಳಿತಿತು. ಒಂದು ದಿನ ಅದನ್ನು ಶಿವಕುಮಾರರ ಸ್ನೇಹಿತ ಶ್ಯಾಮ್‌ ನೋಡಿದರು. ಹಳೆಯ ನೆನಪುಗಳಿಗೆ ಮತ್ತೆ ಜೀವ ಕೊಡುವ ತಮ್ಮ ಉದ್ದೇಶದಿಂದ ರಾಜಶೇಖರ್‌ ಎಂಬುವವರ ನೆರವಿನೊಂದಿಗೆ ಅದನ್ನು ಕೊಂಡೊಯ್ದರು.

ಹಳೆಯ ಬೈಕ್‌ಗಳ ಬಗ್ಗೆ ಆಸಕ್ತಿಯಿದ್ದ ಪರಿಚಯಸ್ಥರ ಮಗನಾದ ಸುಪ್ರೀತ್‌ ನಾಯಕ್‌ಗೆ ಡಿಕೆಶಿಯವರ ಬೈಕ್‌ ರಿಪೇರಿ ಕೆಲಸ ವಹಿಸಿದರು. ಇದು ಸುಲಭದ ಕೆಲಸವಾಗಿರಲಿಲ್ಲ. ಅದರ ಕೆಲ ಭಾಗಗಳನ್ನು ಮೈಸೂರು, ಮುಂಬೈ, ಚೆನ್ನೈ, ವಿಯೆಟ್ನಾಂನಿಂದಲೂ ತರಿಸಬೇಕಾಯ್ತು.

ಬ್ಯಾಟರಾಯನಪುರ ಮತ್ತು ಕತ್ರಿಗುಪ್ಪೆಯ ನುರಿತ ಮೆಕ್ಯಾನಿಕ್‌ಗಳ 6 ತಿಂಗಳ ಶ್ರಮದಿಂದ ''''ರೋಡ್‌ಕಿಂಗ್'''' ಮತ್ತೆ ಜೀವ ಪಡೆಯಿತು. ಶಿವಕುಮಾರ್ ಯುವ ವಿದ್ಯಾರ್ಥಿ ನಾಯಕರಾಗಿದ್ದಾಗ ಸವಾರಿ ಮಾಡುತ್ತಿದ್ದ ಕಾಲದಂತೆ ಆ ಬೈಕ್‌ ಮತ್ತೆ ಡುಗು-ಡುಗು ಸದ್ದು ಹೊರಡಿಸಿತು. 2024ರ ಜೂ.3ರಂದು ಯಾವುದೋ ಕಾರ್ಯಕ್ರಮಕ್ಕೆಂದು ಶಿವಕುಮಾರ್‌ ಜೆಪಿ ನಗರಕ್ಕೆ ಬಂದಾಗ ಅವರಿಗಲ್ಲೊಂದು ಸರ್ಪ್ರೈಸ್‌ ಕಾದಿತ್ತು.

ಮರುಜನ್ಮ ಪಡೆದ ಯೆಜ್ಡಿ ರೋಡ್‌ಕಿಂಗ್ ನಿಂತಿದ್ದಲ್ಲಿಗೆ ಶಿವಕುಮಾರ್‌ರನ್ನು ಶ್ಯಾಮ್‌ ಮತ್ತು ಸುಪ್ರೀತ್‌ ಕರೆದೊಯ್ದಾಗ ಅವರ ಕಣ್ಣುಗಳು ಹೊಳೆದವು. ಒಮ್ಮೆ ಅದನ್ನು ಸುತ್ತಿ ನೋಡಿದ ಡಿಕೆಶಿ, ಪ್ರೀತಿಯಿಂದ ಸವರಿದರು. ಸ್ಟಾರ್ಟರ್‌ ತುಳಿದಾಗ ಹೊರಟ ಶಬ್ದ ಕೇಳಿ ಪುಳಕಿತರಾದರು. ಫೋಟೋಗಳಿಗೆ ಪೋಸ್‌ ಕೊಟ್ಟು, ಬಳಿಕ ಅದನ್ನು ತಮ್ಮ ಮನೆಗೆ ಕಳಿಸುವಂತೆ ಕೇಳಿಕೊಂಡರು. 2 ತಿಂಗಳ ಬಳಿಕ, ಅಂದರೆ ಸೆ.1ರಂದು ಆ ಬೈಕ್‌ ಶಿವಕುಮಾರ್‌ ಅವರ ಮನೆ ತಲುಪಿತು.

ಶಿವಕುಮಾರ್‌ ಅವರು ಯುವಕರಾಗಿದ್ದಾಗ ಬೈಕ್‌ ಜತೆ ಇದ್ದ ಹಾಗೂ ಈಗಿನ ಒಂದು ಫೋಟೋವನ್ನು ಶ್ಯಾಮ್‌ ಅವರಿಗೆ ಉಡುಗೊರೆಯಾಗಿ ನೀಡಿದರು. ಶಿವಕುಮಾರ್ ಮತ್ತೊಮ್ಮೆ ಬೈಕ್ ಅನ್ನು ಸ್ಟಾರ್ಟ್ ಮಾಡಿದರು. ಮಾಧ್ಯಮದವರು ಆ ಭಾವನಾತ್ಮಕ ಕ್ಷಣವನ್ನು ಸೆರೆಹಿಡಿಯುತ್ತಿದ್ದಾಗ ಅವರಲ್ಲಿ ಮಕ್ಕಳಂತಹ ಸಂಭ್ರಮವಿತ್ತು. ಐತಿಹಾಸಿಕ ವೈಯಕ್ತಿಕ ವಸ್ತುವೊಂದನ್ನು ಕಾಪಿಟ್ಟುಕೊಂಡದ್ದಕ್ಕಾಗಿ ಮಹಿಂದ್ರ ಗ್ರೂಪ್‌ನ ಆನಂದ್‌ ಮಹಿಂದ್ರ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ತ ಶಿವಕುಮಾರ್‌, ತಮ್ಮ ಮನೆಯ ಭೋಜನಗೃಹದಲ್ಲಿ ಬೈಕ್‌ಗಾಗಿಯೇ ಒಂದು ಸ್ಥಳವನ್ನು ನಿಗದಿಪಡಿಸುವಂತೆ ಒಳಾಂಗಣ ವಿನ್ಯಾಸಕನಿಗೆ ಸೂಚಿಸಿದರು.

ಆ ಬೈಕ್‌ಗೆ ಇನ್ನೊಂದು ಅಚ್ಚರಿಯೂ ಕಾದಿತ್ತು. 2025ರ ಆ.9ರಂದು, ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಫ್ಲೈಓವರ್ ರ‍್ಯಾಂಪ್ ಮೇಲೆ ರೋಡ್‌ಕಿಂಗ್ ನಿಂತಿತ್ತು, ಇದನ್ನು ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿದ್ದ ಶಿವಕುಮಾರ್ ಉದ್ಘಾಟಿಸಬೇಕಿತ್ತು. ರಿಬ್ಬನ್ ಕತ್ತರಿಸಿದ ನಂತರ, ಹಳೆಯ ನೆನಪುಗಳು ಮತ್ತು ರಾಜಕೀಯ ವ್ಯಕ್ತಿತ್ವದ ಘನತೆ ಮೇಳೈಸಿದ ಕ್ಷಣವೊಂದರಲ್ಲಿ, ಶಿವಕುಮಾರ್ ಅವರು ತಮ್ಮ ಯೌವನದ ದಿನಗಳಲ್ಲಿ ಧರಿಸುತ್ತಿದ್ದಂತೆ ಖಾದಿ ಉಡುಪಿನಲ್ಲೇ, 40 ವರ್ಷ ಹಳೆಯ ತಮ್ಮ ಮೋಟಾರ್‌ಸೈಕಲ್ ಏರಿ ಫ್ಲೈಓವರ್‌ನ ಮೇಲೆ ಸವಾರಿ ಮಾಡಿದರು.

ನಗರದ ಹೊಸ ಕಾರಿಡಾರ್‌ನಲ್ಲಿ ಎಂಜಿನ್‌ನ ಗುಡುಗುಡು ಸದ್ದು ಪ್ರತಿಧ್ವನಿಸಿತು. ಆ ಬೈಕ್‌ ಮತ್ತೆ ಉತ್ತಮ ಸ್ಥಿತಿಗೆ ಮರಳಿದ್ದು ಮತ್ತು ಅದರಿಂದ ಶಿವಕುಮಾರ್‌ ಅವರ ಮೊಗದಲ್ಲಿ ಸಂತಸ ಮೂಡಿದ್ದನ್ನು ಕಂಡು ಸಿದ್ದರಾಮಯ್ಯ ಆಶ್ಚರ್ಯಚಕಿತರಾದರು.

ಅಧಿಕಾರ, ರಾಜಕೀಯ ಮತ್ತು ಸಾರ್ವಜನಿಕ ಜೀವನದ ನಡುವೆ ಒಬ್ಬ ಮನುಷ್ಯ ಎಷ್ಟೇ ದೂರ ಪ್ರಯಾಣಿಸಿದರೂ, ಮೊದಲ ಪ್ರಯಾಣದ ನೆನಪುಗಳು ಅವನೊಳಗಿನ ಹುಡುಗನನ್ನು ಜಾಗೃತಗೊಳಿಸುತ್ತದೆ.

ಅಂದು ಆ ರೋಡ್‌ಕಿಂಗ್ ಕೇವಲ ಮೇಲ್ಸೇತುವೆಯನ್ನು ದಾಟಲಿಲ್ಲ. ಬದಲಿಗೆ ಅದು 4 ದಶಕಗಳ ಭಾರವನ್ನೂ, ಸ್ನೇಹದ ಭಾವನೆಯನ್ನೂ, ಬೆಂಕಿಯ ಭಟ್ಟಿಯಲ್ಲಿ ಹದಗೊಂಡ ನಾಯಕರ ನೆನಪುಗಳ ಮೂಲೆಯಲ್ಲೂ ಮೃದುತ್ವ ಅಡಗಿರುತ್ತದೆ ಎಂಬುದಕ್ಕೆ ಜೀವಂತ ಸಾಕ್ಷಿಯನ್ನೂ ತನ್ನೊಂದಿಗೆ ಹೊತ್ತು ಸಾಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆಧ್ಯಾತ್ಮಿಕ ಅನುಭೂತಿಯ ಮುದ್ರಾಧಾರಣೆ
ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ - ವೀರನಹೊಸಹಳ್ಳಿಯಿಂದ ಮೈಸೂರಿಗೆ ಬಂದ 9 ಆನೆಗಳು