ಕಾಂಗ್ರೆಸ್‌ಗೆ ಕೇಸರಿ ಬಟ್ಟೆ ಕಂಡ್ರೆ ಬೆಂಕಿಯಂತೆ ವರ್ತಿಸುತ್ತಾರೆ. ಈ ಸರ್ಕಾರ ಕಿತ್ತೊಗೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಮನೆಯಲ್ಲಿಯೂ ಗಣೇಶ ಪ್ರತಿಷ್ಠಾಪನೆ ಮಾಡದಂತಾಗುತ್ತೆ ಎಂದು ಶಾಸಕ ಬಿ.ಪಿ. ಹರೀಶ್ ಖಾರವಾಗಿ ನುಡಿದಿದ್ದಾರೆ.
- ಹರಿಹರ ನಗರದಲ್ಲಿ ಗಣೇಶೋತ್ಸವ –2025ರ ಶ್ರಮ ಪರಿಹಾರ ಕಾರ್ಯಕ್ರಮ
- - -
ಕನ್ನಡಪ್ರಭ ವಾರ್ತೆ ಹರಿಹರ
ಕಾಂಗ್ರೆಸ್‌ಗೆ ಕೇಸರಿ ಬಟ್ಟೆ ಕಂಡ್ರೆ ಬೆಂಕಿಯಂತೆ ವರ್ತಿಸುತ್ತಾರೆ. ಈ ಸರ್ಕಾರ ಕಿತ್ತೊಗೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಮನೆಯಲ್ಲಿಯೂ ಗಣೇಶ ಪ್ರತಿಷ್ಠಾಪನೆ ಮಾಡದಂತಾಗುತ್ತೆ ಎಂದು ಶಾಸಕ ಬಿ.ಪಿ. ಹರೀಶ್ ಖಾರವಾಗಿ ನುಡಿದರು.
ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಶ್ರೀ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಭಾನುವಾರ ಗಣೇಶೋತ್ಸವ –2025ರ ಶ್ರಮ ಪರಿಹಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೂಗಳು ಒಗ್ಗಟ್ಟಾಗಬಾರದು ಎಂದು ಕಳೆದ ಗಣೇಶೋತ್ಸವದಲ್ಲಿ ಡಿಜೆ ಹಚ್ಚದಂತೆ ತಡೆದರು. ಆದರೂ ನಿರೀಕ್ಷೆಗೆ ಮೀರಿದ ಜನತೆ ಭಾಗವಹಿಸಿ ಅದ್ಧೂರಿ ಶೋಭಾಯಾತ್ರೆ ಮಾಡಲಾಯಿತು ಎಂದರು.
ಕೇಸರಿ ಶಾಲು ಹಾಗೂ ಆರ್‌ಎಸ್‌ಎಸ್ ಕಂಡರೆ ಅವರಿಗೆ ಆಗದು. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಆರಿಸಿದಲ್ಲಿ ಕೇಸರಿ ಶಾಲನ್ನು ಮನೆಯಲ್ಲಿ ಇಟ್ಟು ಹಸಿರು ಶಾಲು ಧರಿಸಬೇಕಾಗುತ್ತದೆ. ಈಗಾಗಲೇ ಕಳ್ಳ ಮತದಾರರನ್ನು ಎಸ್‌ಐಆರ್‌ನಲ್ಲಿ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿ ತಕ್ಷಣ ಎಸ್‌ಐಆರ್‌ನಲ್ಲಿ ತಮ್ಮ ಹೆಸರು ಸೇರಿಸಿ. ಇನ್ನು ಕೇವಲ ಕೆಲ ದಿನಗಳು ಮಾತ್ರ ಉಳಿದಿವೆ ಎಂದರು.
ಗ್ರಾಮಾಂತರದಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆಗೆ ನಿಲ್ಲಲು ಅಥವಾ ತಮ್ಮವರನ್ನು ಗೆಲ್ಲಿಸಲು ಹೆಚ್ಚು ನೋಂದಣಿ ಮಾಡಲಾಗುತ್ತಿದೆ. ಆದರೆ, ನಗರ ನಿವಾಸಿಗಳು ಅಲಕ್ಷ್ಯ ಮಾಡುತ್ತಿದ್ದಾರೆ. ಈ ವರ್ಷ ಮತದಾರ ಪಟ್ಟಿಯಲ್ಲಿ ಮೊದಲು ಹೆಸರು ಸೇರಿಸಿ. ಬರುವ ಗಣೇಶೊತ್ಸವವನ್ನು ಇನ್ನೂ ಅದ್ಧೂರಿಯಾಗಿ ಮಾಡೋಣ ಎಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್ ಗೌಡ ಗಣೇಶೋತ್ಸವದ ಲೆಕ್ಕಪತ್ರ ಒಪ್ಪಿಸಿ, 2025ರ ಶಿಲ್ಕು ₹2,30,000 ಇದೆ. ನಗದು ಹಾಗೂ ಬ್ಯಾಂಕ್ ಖಾತೆ ಮೂಲಕ ದೇಣಿಗೆ ₹18,35,255 ಬಂದಿದೆ. ಕಾಣಿಕೆ ಹುಂಡಿ ಅನ್ನ ಸಂತರ್ಪಣೆ ಕೂಪನ್ ಹಾಗೂ ಇನ್ನಿತರ ಮೂಲಗಳಿಂದ ₹1,51,200 ಸೇರಿ 22,16,455 ಹಣ ಸಂಗ್ರಹವಾಗಿತ್ತು. ಗಣೇಶ ಮೂರ್ತಿ ಹಾಗೂ ಅದನ್ನು ತಂದ ಬಾಬ್ತು ₹2,11,330, ಗಣೇಶ ಮಂಟಪ ನಗರ ದೀಪಾಲಂಕಾರ, ಕೇಸರಿ ಬಾವುಟ ಪ್ರಿಂಟಿಂಗ್ ದಿನ ನಿತ್ಯದ ಪೂಜೆ, ಅನ್ನ ಸಂತರ್ಪಣೆ, ಕಲಾವಿದರ ತಂಡ ಮುಂತಾದವುಗಳಿಗೆ ₹20,06,455 ಖರ್ಚಾಗಿದೆ. ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ ₹2,10,000 ಶಿಲ್ಕು ಇದೆ ಎಂದು ವಿವರವಾಗಿ ತಿಳಿಸಿದರು.
ಗೌರವ ಅಧ್ಯಕ್ಷ ಶಶಿಕುಮಾರ್ ಮೆಹರ್ವಾಡೆ ಮಾತನಾಡಿ, ಒಂದೇ ಬಾರಿಗೆ ಹಲವು ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಮೂಲಕ ಶೋಭಾಯಾತ್ರೆಗೆ ಕಳೆ ತರಲಾಯಿತು. ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಒಗ್ಗೂಡಿಸುವ ಕಾರ್ಯ ನಡೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುರೇಶ್ ಪೈಲ್ವಾನ್ ಮಾತನಾಡಿ, ನನಗೆ ನೀಡಿದ ಜವಬ್ದಾರಿಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ಸಮರ್ಥವಾಗಿ ನಿಭಾಯಿಸಿದ ಆತ್ಮಸಂತೋಷ ನನಗಿದೆ. ಮುಂದಿನ ದಿನಗಳಲ್ಲಿ ಯಾರೇ ಅಧ್ಯಕ್ಷರಾದರೂ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಸಮಿತಿಗಳ ಅಧ್ಯಕ್ಷರಾದ ನಾಗರಾಜ್ ಬಂಡಾರಿ, ರಾಜು ರೊಖಡೆ ಹಾಗೂ ಇತರರು ಉಪಸ್ಥಿತರಿದ್ದರು.
- - -
(ಕೋಟ್) ಓಡಾಡುವ ವ್ಯಕ್ತಿ ಎಡವುದು ಸಹಜ. ಆದರೆ, ಖಂಡಿತ ಯಶಸ್ವಿ ಆಗುತ್ತಾರೆ. ಆಗ ಸರಿ ಕಂಡದ್ದು, ನಂತರ ತಪ್ಪಾಗಿ ಕಾಣಬಹುದು. ಗಣೇಶೋತ್ಸವ ಅತ್ಯಂತ ಯಶಸ್ಸು ಕಂಡಿದೆ. ಹಿಂದೂಗಳ ಶಕ್ತಿ ಕುಗ್ಗಿಸುವ ಒಡೆಯುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.