ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿನಾಡಿನ ಜಾನಪದ ಸೊಗಡನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಆಶಯದೊಂದಿಗೆ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸ್ಥಾಪಿತವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇಂದು ವಿದ್ಯಾರ್ಥಿಗಳ ಕೊರತೆಯಿಂದಾಗಿ ಸೊರಗುತ್ತಿದೆ. ಇಲ್ಲಿನ ಪಿಜಿ ಕೋರ್ಸ್‌ಗಳು ವರ್ಷದಿಂದ ವರ್ಷಕ್ಕೆ ಬೇಡಿಕೆ ಕಳೆದುಕೊಳ್ಳುತ್ತಿದ್ದು, ವಿವಿಯ ಅಸ್ತಿತ್ವಕ್ಕೆ ಸವಾಲು ಎದುರಾಗಿದೆ.
ಜಾನಪದ ಸಂಶೋಧನೆ, ಪ್ರಕಟಣೆ, ಅಧ್ಯಯನ ಇನ್ನಿತರ ಸಾಧನೆಯಿಂದ ಹೆಸರಾಗಬೇಕಿದ್ದ ವಿವಿ ಹಲವು ವಿವಾದ, ಆಂತರಿಕ ಕಚ್ಚಾಟಗಳಿಂದಲೇ ಸುದ್ದಿಯಲ್ಲಿದ್ದದ್ದು ಹೆಚ್ಚು. ದಶಕಗಳ ಕಾಲ ಕಾಯಂ ಉಪನ್ಯಾಸಕರಿಲ್ಲದೆ ಸೊರಗಿದ್ದ ವಿವಿಗೆ ವರ್ಷದ ಹಿಂದಷ್ಟೇ ಕಾಯಂ ಬೋಧಕರ ನೇಮಕವಾಗಿದೆ. ಆದರೆ, ಈಗ ಇಲ್ಲಿ ಸ್ನಾತಕೋತ್ತರ ಪದವಿ ಬಯಸಿ ಬರುವ ವಿದ್ಯಾರ್ಥಿಗಳಿಗೇ ಬರವಾಗಿದೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದ ಪ್ರವೇಶಾತಿ ನಿರಂತರವಾಗಿ ಇಳಿಕೆಯಾಗಿದ್ದು, ಕೆಲವು ಕೋರ್ಸ್‌ಗಳು ಮುಚ್ಚುವ ಹಂತಕ್ಕೆ ಬಂದಿವೆ.ಪ್ರವೇಶಾತಿ ಪಾತಾಳಕ್ಕೆ:
ಜಾನಪದ ವಿಶ್ವವಿದ್ಯಾಲಯದಲ್ಲಿ ಒಟ್ಟು 15 ವಿವಿಧ ವಿಭಾಗಗಳಿದ್ದು, ಬಹುತೇಕ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿ ದಾಟಿಲ್ಲ. 2022-23ನೇ ಸಾಲಿನಲ್ಲಿ ವಿವಿಯಲ್ಲಿ 740 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2023-24ರಲ್ಲಿ 481ಕ್ಕೆ ಇಳಿದಿದೆ. 2024-25ನೇ ಸಾಲಿನಲ್ಲಿ ಅದು 303ಕ್ಕೆ ಬಂದು ನಿಂತರೆ, 2025-26ನೇ ಶೈಕ್ಷಣಿಕ ವರ್ಷಕಲ್ಲಿ ಇಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 160. ಇದು ವಿವಿಯ ಶೈಕ್ಷಣಿಕ ಪ್ರಗತಿಗೆ ಹಿಡಿದ ಕನ್ನಡಿಯಾಗಿದೆ.
ಮುಚ್ಚುವ ಹಂತದಲ್ಲಿ ಕೆಲವು ಕೋರ್ಸ್‌ಗಳು:
ವಿಶ್ವವಿದ್ಯಾಲಯದ ಕೆಲವು ಪ್ರಮುಖ ಕೋರ್ಸ್‌ಗಳಿಗೆ ಒಬ್ಬರೂ ಪ್ರವೇಶ ಪಡೆಯದಿರುವ ಅಂಶ ಬೆಳಕಿಗೆ ಬಂದಿದೆ. ಒಂದೆರಡು ವಿಭಾಗ ಬಿಟ್ಟರೆ ಉಳಿದೆಲ್ಲವುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದಾರೆ. ಇದರಿಂದ ಕೆಲವು ವಿಭಾಗಗಳು ಮುಚ್ಚುವ ಹಂತಕ್ಕೆ ತಲುಪಿವೆ. 2022-23ರಲ್ಲಿ 4 ವಿದ್ಯಾರ್ಥಿಗಳಿದ್ದ ಯೋಗ ವಿಭಾಗ, 2024ರಲ್ಲಿ ಶೂನ್ಯ ಪ್ರವೇಶಾತಿ ಕಂಡಿದೆ. ಇದರಿಂದ ಈ ವರ್ಷ ಯೋಗ ವಿಭಾಗವೇ ವಿವಿಯಲ್ಲಿ ಕಣ್ಮುಚ್ಚಿದೆ. ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ಜೀವಂತವಾಗಿಡಬೇಕಾದ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.ಕಾರಣಗಳೇನು?:
ಜಾನಪದ ವಿವಿಯಲ್ಲಿನ ಆಂತರಿಕ ಕಚ್ಚಾಟ ತೀವ್ರವಾಗಿರುವುದು ವಿವಿ ಅಭಿವೃದ್ಧಿಗೆ ಮುಳುವಾಗಿದೆ. ವಿವಿ ಚುಕ್ಕಾಣಿ ಹಿಡಿದವರು ಅಧಿಕಾರ, ಹುದ್ದೆ ಅನುಭವಿಸುತ್ತ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪವೂ ಕೇಳಿ ಬರುತ್ತಿದೆ. ಕೆಲ ಪ್ರಾಧ್ಯಾಪಕರು ವಿವಿ ಉಳಿಸಲು ಶ್ರಮಿಸುತ್ತಿದ್ದರೆ, ಅವರಿಗೆ ಬೆಂಬಲವಾಗಿ ನಿಲ್ಲುವವರು ಇಲ್ಲವಾಗಿದ್ದಾರೆ. ಅಲ್ಲದೇ ಜಾನಪದ ಕೋರ್ಸ್‌ಗಳನ್ನು ಮುಗಿಸಿದ ನಂತರ ಸಿಗುವ ಉದ್ಯೋಗಾವಕಾಶಗಳ ಕೊರತೆ, ಆಧುನಿಕ ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳತ್ತ ವಿದ್ಯಾರ್ಥಿಗಳ ಒಲವು ಹಾಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೂಕ್ತ ಪ್ರಚಾರ ಮತ್ತು ಆಕರ್ಷಕ ಪಠ್ಯಕ್ರಮದ ಕೊರತೆ ಕೂಡ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.ಸಂಬಂಧಪಟ್ಟ ಉನ್ನತ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎಚ್ಚೆತ್ತುಕೊಂಡು, ಹೊಸ ಯೋಜನೆಗಳು ಹಾಗೂ ಉದ್ಯೋಗಾಧಾರಿತ ಪಠ್ಯಕ್ರಮಗಳನ್ನು ಅಳವಡಿಸದಿದ್ದರೆ, ಜಾನಪದ ವಿವಿ ಕೇವಲ ಹೆಸರಿಗಷ್ಟೇ ಸೀಮಿತವಾಗುವ ದಿನಗಳು ದೂರವಿಲ್ಲ. ಜತೆಗೆ, ಇನ್ನು ಕೆಲವೇ ದಿನಗಳಲ್ಲಿ ಖಾಲಿಯಾಗಲಿರುವ ಕುಲಪತಿಗಳ ಹುದ್ದೆಗೆ ಅರ್ಹರನ್ನು ನೇಮಕ ಮಾಡಬೇಕಿದೆ.
---ಟೇಬಲ್---2025-26ನೇ ಸಾಲಿನ ಪ್ರವೇಶಾತಿ ವಿವರ
ವಿಷಯಪ್ರವೇಶಅರ್ಥಶಾಸ್ತ್ರ20
ಇಂಗ್ಲಿಷ್16ಜಾನಪದ ಕಲೆ4
ಜಾನಪದ ಸಾಹಿತ್ಯ5ಜಾನಪದಶಾಸ್ತ್ರ3
ಪತ್ರಿಕೋದ್ಯಮ15ಕನ್ನಡ ಮತ್ತು ಜಾನಪದ5
ಪ್ರದರ್ಶನ ಕಲೆ7ಗ್ರಾಮೀಣ, ಬುಡಕಟ್ಟು ನಿರ್ವಹಣೆ25
ಎಂಎಸ್‌ಡಬ್ಲು17ಸಮಾಜಶಾಸ್ತ್ರ8
ಪ್ರವಾಸೋದ್ಯಮ20ಚಿತ್ರಕಲೆ9
ಮಹಿಳಾ ಅಧ್ಯಯನ6ಒಟ್ಟು160