ಕನ್ನಡಪ್ರಭ ವಾರ್ತೆ ಮದ್ದೂರು

ರೈತರು ಬೆಳೆದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಆಗುವ ನಷ್ಟ ತಪ್ಪಿಸಲು ನೀರು ಹರಿಸುವಂತೆ ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರದಲ್ಲಿ ಕಾವೇರಿ ನೀರಾವರಿ ನಿಗಮದ 3ನೇ ಉಪವಿಭಾಗದ ಕಚೇರಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಮ್ಮ ಬೇಡಿಕೆ ಸಲ್ಲಿಸಿ ಅಣೆಕಟ್ಟೆಯಿಂದ ನೀರು ಬಿಡುವಂತೆಸಚಿವರೊಂದಿಗೆ ಚರ್ಚಿಸಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ ಎಂದರು.

ನಮ್ಮ ಜಿಲ್ಲೆಯ ರೈತರಿಗೆ ಈಗ ಇರುವಬೆಳೆ ಉಳಿಸಲು ನೀರು ಕೊಡುತ್ತೇವೆ ಎಂದು ಹೇಳಿದ್ದೇವೆ. ಅಲ್ಲದೆ ಜನ ಜಾನುವಾರುಗಳಿಗೆ ನೀರಿನ ಅಗತ್ಯವಿದೆ. ಕೆರೆ ಕಟ್ಟೆಗಳಿಗೆ ನೀರು ಬೇಕು. ನೀರು ಬಿಡದಿದ್ದರೆ ರೈತರ ಅರ್ಧಬರ್ಧ ಬೆಳೆ ಹಾಳಾಗಿ ನಷ್ಟವಾಗಲಿದೆ ಎಂದು ಹೇಳಿದರು.ಒಂದು ವೇಳೆ ನೀರು ಬಿಟ್ಟರೆ ರೈತರು ಹೊಸದಾಗಿ ಬೇಸಾಯ ಮಾಡುವುದು ಬೇಡ. ತಾತ್ಕಾಲಿಕ ಇರುವ ಬೆಳೆಗಳು ಉಳಿಸಲು ನೀರು ಹರಿಸಲು ಕೋರಿದ್ದೇವೆ. ಇನ್ನು ಮಳೆ ಬರಬೇಕು. ಅಣೆಕಟ್ಟೆ ತುಂಬಬೇಕು. ಕಾವೇರಿ ನೀರಾವರಿ ನಿಗಮ ಮುಂದಿನ ಪ್ರಕಟಣೆ ತಿಳಿಸಿದ ಮೇಲೆ ಹೊಸದಾಗಿ ಬೇಸಾಯ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು.ಒಂದು ವೇಳೆ ಅಣೆಕಟ್ಟೆಯಿಂದ ನೀರು ಹರಿಸಿದರೆ ಕೊನೆ ಭಾಗಕ್ಕೆ ನೀರು ಬರುವವರೆಗೂ ನಾಲೆಗಳಿಗೆ ನೀರು ಹರಿಸುವಂತೆ ಕೇಳಿದ್ದೇನೆ. ಪ್ರಸ್ತುತ ನಿರೀಕ್ಷೆಯಷ್ಟು ಮಳೆ ಬಂದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ನೆರವಾಗಲು ನೀರಾವರಿ ಸಲಹಾ ಸಮಿತಿ ತೀರ್ಮಾನಿಸಲಿದೆ ಎಂದರು.

ಕಾವೇರಿ ನೀರಾವರಿ ನಿಗಮದಿಂದ ನಗರದಲ್ಲಿ ಹೊಸದಾಗಿ ನೂತನ ಉಪವಿಭಾಗ ಕಚೇರಿ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸುಮಾರು 10 ಕೋಟಿ ರು ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಕೋಟಿ ರು ಬಿಡುಗಡೆ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.


ಕಾವೇರಿ ನೀರಾವರಿ ನಿಗಮದ 3ನೇ ಉಪವಿಭಾಗದ ಕಚೇರಿಯಲ್ಲಿ ಭಾರತೀನಗರ ಉಪವಿಭಾಗ, ಮದ್ದೂರು ವಿಸಿ ಉಪವಿಭಾಗ, ಕೆರಗೋಡು ಉಪವಿಭಾಗ ಮೂರು ವಿಭಾಗಗಳು ಸೇರಲಿವೆ ಎಂದು ಮಾಹಿತಿ ನೀಡಿದರು.

ಈ ವೇಳೆ ಕಾವೇರಿ ನೀರಾವರಿ ನಿಗಮದ ಇ.ಇ.ನಾಗರಾಜು, ಎಇಇ ಅಜಯ್ಬ್ಎ.ಇ.ಚೇತನ, ಅವಿನಾಶ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎ.ಎಸ್.ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸದಸ್ಯರಾದ ವನಿತಾ, ಮುಖಂಡರಾದ ಇಂತಿಯಾಜುಲ್ಲಾ ಖಾನ್, ಎಂ.ಡಿ.ಮಹಾಲಿಂಗಯ್ಯ ಹಲವರು ಇದ್ದರು.