ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿಗಳಿಗೆ ಸಿದ್ಧಪಡಿಸಿರುವ ಆದ್ಯತೆ ಪಟ್ಟಿಯಲ್ಲಿ ಶಾಲಾವಾರು ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಒಟ್ಟು ಕೊಠಡಿಗಳು. ದುರಸ್ತಿಗೆ ಅಗತ್ಯವಿರುವ ಕೊಠಡಿಗಳು, ಶಾಲೆ ಪ್ರಸ್ತುತ ಸ್ಥಿತಿ, ಅಗತ್ಯ ವೆಚ್ಚದ ಅಂದಾಜು ಹಾಗೂ ಇತರೆ ಸಂಬಂಧಿತ ಮಾಹಿತಿ ಸೇರಿಸಿ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಶಾಲಾ ಶಿಕ್ಷಣ, ಲೋಕೋಪಯೋಗಿ ಮತ್ತು ಪಿಆರ್‌ಇಡಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡಗಳನ್ನು ದುರಸ್ತಿ ಮಾಡಲು ಹಾಗೂ ಸದರಿ ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಉದ್ದೇಶದಿಂದ ಶಾಲೆಗಳನ್ನು ಖುದ್ದು ಪರಿಶೀಲಿಸಿ ಅವಶ್ಯಕತೆ ಆಧರಿಸಿ ಆದ್ಯತೆ ಪಟ್ಟಿ ಸಿದ್ಧಪಡಿಸುವಂತೆ ನೀಡಲಾಗಿದ್ದು, ಸುಸ್ಥಿತಿಯಲ್ಲಿರುವ ಶಾಲೆಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಬೇಕು ಎಂದರು.
ಪ್ರಸಕ್ತ ಸಾಲು ಹಾಗೂ ಮೂಂದಿನ ಸಾಲುಗಳಲ್ಲಿ ಬಿಡುಗಡೆಯಾಗುವ ಅನುದಾನವನ್ನು ಆದ್ಯತೆ ಪಟ್ಟಿಯ ಅನುಸಾರವೇ ಕೈಗೆತ್ತಿಕೊಳ್ಳಬೇಕು. ಯಾವುದೇ ಇಲಾಖೆಯಡಿ ಶಾಲಾ ಕಟ್ಟಡ ದುರಸ್ತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದರೂ ಸದರಿ ಪಟ್ಟಿಯನ್ನು ಆಧರಿಸಿಯೇ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು. ಮೇಲ್ಛಾವಣಿ ಹಾಗೂ ನೆಲಹಾಸು ಹಾಳಾಗಿರುವ ಶಾಲೆಗಳಿಗೆ ಪ್ರತಿ ಚದರ ಅಡಿ ಆಧಾರದ ಮೇಲೆ ವೆಚ್ಚದ ಅಂದಾಜು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.ವಿವಿಧ ಲೆಕ್ಕ ಶೀರ್ಷಿಕೆ ಹಾಗೂ ವಿವಿಧ ಇಲಾಖೆಯಡಿ ಶಾಲಾ ಕಟ್ಟಡ ದುರಸ್ತಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳುವಾಗ ಯಾವುದೇ ಕಾಮಗಾರಿಗಳು ಪುನರಾವರ್ತನೆ ಆಗದಂತೆ ಪರಿಶೀಲಿಸಿ, ನಿಖರ ಹಾಗೂ ಸಮಗ್ರ ಮಾಹಿತಿಯೊಂದಿಗೆ ಕ್ರಿಯಾಯೋಜನೆ ರೂಪಿಸುವಂತೆ ತಿಳಿಸಿದರು.
ಕಾಮಗಾರಿ ಪೂರ್ಣಗೊಂಡು ಸ್ವಲ್ಪ ಅವಯಲ್ಲಿಯೇ ಮತ್ತೊಮ್ಮೆ ದುರಸ್ತಿ ಮಾಡಬೇಕೆಂಬ ಅವಶ್ಯಕತೆ ಕಂಡು ಬಂದಲ್ಲಿ, ಅಂತಹ ಶಾಲಾ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸಿ ಕಳಪೆ ಕಾಮಗಾರಿ ನಡೆಸಿರುವುದು ಕಂಡುಬಂದಲ್ಲಿ ಸಂಬಂಸಿದ ಅನುಷ್ಠಾನ ಸಂಸ್ಥೆಗಳಿಗೆ ನೋಟಿಸ್ ನೀಡುವಂತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ವರ್ಷ ಸ್ವಲ್ಪ ಅನುದಾನ ಮೀಸಲಿರಿಸಿ ಕಾಮಗಾರಿಗಳನ್ನು ತೆಗೆದುಕೊಳ್ಳದೆ, ಶಾಲೆ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಬೇಕು. ಲಭ್ಯವಿರುವ ಎಲ್ಲ ಅನುದಾನ ಒಟ್ಟುಗೂಡಿಸಿಕೊಂಡು ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ಆದೇಶಿಸಿದರು.
ಸಿಎಸ್‌ಆರ್ ಅನುದಾನದಡಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಲಭ್ಯವಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಶಾಲೆಗಳ ವ್ಯವಸ್ಥಿತ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಿ, ಅಗತ್ಯ ಮಾಹಿತಿಯನ್ನು ದಾಖಲಿಸುವ ಮೂಲಕ ವಾಸ್ತವಿಕ ಅಗತ್ಯತೆಗಳ ಆಧಾರದ ಮೇಲೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಯೋಗೇಶ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ್, ಶಿಕ್ಷಣಾಕಾರಿ ಚಂದ್ರಕಾಂತ, ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಕಾರಿಗಳು, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.