ಕನ್ನಡಪ್ರಭ ವಾರ್ತೆ ಮಂಡ್ಯ
ಹೊರ ಸಂಪನ್ಮೂಲ ಸಿಬ್ಬಂದಿಗೆ ಪರಿಷ್ಕೃತ ದರದಂತೆ ಕನಿಷ್ಠ ವೇತನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅರಣ್ಯ ಇಲಾಖೆ ದಿನಗೂಲಿ ಪ.ಜಾತಿ ಮತ್ತು ಪ.ಪಂಗಡ ವರ್ಗಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ ಒತ್ತಾಯಿಸಿದರು.೪೮ ಇಲಾಖೆಗಳಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನೀಡುವಂತೆ ಆದೇಶ ಹೊರಡಿಸಿದೆ. ಆದರೆ, ಅರಣ್ಯ ಇಲಾಖೆಗೆ ಇದು ಅನ್ವಯವಾಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಉಪ ಸಮಿತಿ ಮಾಡುತ್ತೇವೆ. ಅದು ವರದಿ ಕೊಟ್ಟ ನಂತರ ನಾವು ವೇತನದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಳೆದ ೨೦ ವರ್ಷಕ್ಕಿಂತಲೂ ಹೆಚ್ಚು ಅವಧಿಯಲ್ಲಿ ನಾವುಗಳು ಕೆಲಸ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಯಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನೆಡುತೋಪು, ಕಾಡ್ಗಿಚ್ಚು, ಚಿರತೆ ಹಾವಳಿ ಸೇರಿದಂತೆ ಎಲ್ಲ ಕೆಲಸಗಳಿಗೂ ನಮ್ಮನ್ನು ಅಧಿಕಾರಿಗಳು ಬಳಸಿಕೊಳ್ಳುತ್ತಾರೆ. ಆದರೆ, ಕನಿಷ್ಠ ವೇತನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಅರಣ್ಯ ಇಲಾಖೆಯ ದಿನಗೂಲಿ ಹಾಗೂ ಹೊರಗುತ್ತಿಗೆ ನೌಕಕರನ್ನು ನೇಮಕ ಮಾಡಿಕೊಂಡಿರುವ ಸಂಸ್ಥೆ ಯಾವುದು ಎಂಬುದೇ ತಿಳಿದಿಲ್ಲ. ಪರಿಷ್ಕೃತ ಕನಿಷ್ಠ ವೇತನ ೨೩ ಸಾವಿರ ರು. ಇದೆ. ಹಿಂದಿನ ಕುಶಲ ನೌಕರರಿಗೆ ೧೮,೫೨೩ ರು., ಅಕುಶಲ ನೌಕರರಿಗೆ ೧೬,೨೫೦ ರು., ಹಾಗೂ ಅರೆ ಕುಶಲ ನೌಕರರಿಗೆ ೧೬,೧೨೦ ರು. ಕನಿಷ್ಠ ವೇತನ ನೀಡುತ್ತಿಲ್ಲ. ತಮ್ಮಿಚ್ಚೆಗೆ ಬಂದಂತೆ ೧೨ರಿಂದ ೧೫ ಸಾವಿರ ರು. ಹಣವನ್ನು ವೇತನವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ಪರಿಷ್ಕೃತ ಕನಿಷ್ಠ ವೇತನ ನೀಡಬೇಕು ಇಲ್ಲವಾದಲ್ಲಿ ಆಗಸ್ಟ್ ತಿಂಗಳಿನಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿರುವ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಲ್ಲಾಧ್ಯಕ್ಷೆ ಸುಕನ್ಯಮ್ಮ, ಮುಖಂಡರಾದ ಮರೀಗೌಡ, ಕುಮಾರ, ನಾಗೇಶ್ ಇದ್ದರು.