ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿದ ಬೆನ್ನಲ್ಲೇ ಹಳ್ಳಿಗಳಲ್ಲಿ ಈಗ ಚುನಾವಣಾ ಜ್ವರ ಶುರುವಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲೆಲ್ಲೂ ಚುನಾವಣೆಯದ್ದೇ ಮಾತು. ಸ್ಪರ್ಧಾಕಾಂಕ್ಷಿಗಳಲ್ಲಿ ರಣೋತ್ಸಾಹ. ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದವರಿಂದ ಪ್ರಚಾರ ಚಟುವಟಿಕೆ ಆರಂಭ. ರಾಜಕೀಯ ಕಾರಣಗಳಿಂದ ಮೀಸಲು ಕ್ಷೇತ್ರವಾಗಿರುವ ಕಡೆ ಹಲವರಿಗೆ ನಿರಾಸೆ. ಮೀಸಲು ಬದಲಾವಣೆ ಮಾಡುವಂತೆ ನ್ಯಾಯಾಲಯಕ್ಕೆ ಮೊರೆ.

ಮಳೆ ಕೊರತೆ ಹಾಗೂ ಬರದ ನಡುವೆಯೂ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ನಿಗದಿಯಾಗಿರುವ ಮೀಸಲು ಹಳ್ಳಿಗಳಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿದೆ. ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಲೆಕ್ಕಾಚಾರ ಶುರುವಾಗಿದೆ. ಯಾವ ಯಾವ ಕ್ಷೇತ್ರಗಳಲ್ಲಿ ನಮ್ಮ ಬಲವಿದೆ. ಎಲ್ಲಿ ನಮ್ಮ ಪ್ರಾಬಲ್ಯ ಕುಂದಿದೆ. ಸಮನಾಂತರ ಪೈಪೋಟಿ ಇರುವ ಕ್ಷೇತ್ರಗಳು ಯಾವುವು. ಗೆಲ್ಲುವ ಅಭ್ಯರ್ಥಿಗಳು ಯಾರಿದ್ದಾರೆ. ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ. ಮಹಿಳಾ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿ ಮಾಡುವುದು. ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲುವುದು ಹೇಗೆ ಎಂಬೆಲ್ಲಾ ಲೆಕ್ಕಾಚಾರಗಳು ಒಳಗೊಳಗೆ ನಡೆಯುತ್ತಿವೆ.

ರಾಜಕೀಯ ಪ್ರಭಾವದಿಂದ ಮೀಸಲು ಕ್ಷೇತ್ರ:


ಆಡಳಿತರೂಢ ಕಾಂಗ್ರೆಸ್ ಪಕ್ಷದ ಪ್ರಭಾವವಿಲ್ಲದ ಪಂಚಾಯಿತಿ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನಾಗಿ ಮಾಡಿದೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಇದು ಕಾಂಗ್ರೆಸ್ ವಿರುದ್ಧ ಹಲವು ಆಕಾಂಕ್ಷಿಗಳು ಸಿಟ್ಟಿಗೆದ್ದಿದ್ದಾರೆ. ಚುನಾವಣೆ ನಡೆಸದಂತೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಪ್ರಯತ್ನವನ್ನೂ ಹಲವರು ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕುಟುಂಬದವರೇ ಎದುರಾಳಿಗಳಾಗುವ ಸಾಧ್ಯತೆ:

ಮಹಿಳಾ ಕ್ಷೇತ್ರಗಳಲ್ಲೂ ಚುನಾವಣೆಗೆ ಸ್ಪರ್ಧಿಸಲು ಕುಟುಂಬದವರ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಅತ್ತೆ- ಸೊಸೆ, ಅಣ್ಣ- ತಮ್ಮ, ಅಕ್ಕ- ತಂಗಿ, ನಾದಿನಿ, ಚಿಕ್ಕಪ್ಪ- ದೊಡ್ಡಪ್ಪ ಹೀಗೆ ಸಂಬಂಧಿಗಳೇ ನೇರ ಎದುರಾಳಿಗಳಾಗುವ ಸಾಧ್ಯತೆಗಳೂ ಇವೆ. ಪ್ರಭಾವವಿರುವವರು ಮೀಸಲು ಕ್ಷೇತ್ರಗಳಲ್ಲಿ ಆ ಸಮುದಾಯದವರನ್ನು ಕಣಕ್ಕಿಳಿಸಿ ಗೆಲ್ಲಿಸಿ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲೂ ತೊಡಗಿದ್ದಾರೆ. ಪಂಚಾಯಿತಿ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಕಡಿಮೆಯಾಗದಂತೆ ಹಿಡಿತ ಕೈತಪ್ಪಿ ಹೋಗದಂತೆ ತಮ್ಮ ಮಾತಿನಂತೆ ನಡೆಯುವವರನ್ನೇ ಹುಡುಕಿ ಕಣಕ್ಕಿಳಿಸುವುದಕ್ಕೆ ಹಲವರು ತಯಾರಿ ನಡೆಸಿದ್ದಾರೆ.

ಪರೋಕ್ಷವಾಗಿ ಚುನಾವಣಾ ಪ್ರಚಾರ:

ಚುನಾವಣೆಗಳಿಗೆ ಸ್ಪರ್ಧಿಸಲು ಸಜ್ಜಾಗಿರುವ ಆಕಾಂಕ್ಷಿಗಳು ತಮ್ಮನ್ನು ಗೆಲ್ಲಿಸಿದರೆ ಪಂಚಾಯಿತಿ ಅಭಿವೃದ್ಧಿಗೆ ನೀಡುವ ಕೊಡುಗೆಗಳ ಪಟ್ಟಿಯನ್ನೇ ಜನರ ಮುಂದಿಡುತ್ತಿದ್ದಾರೆ. ಈಗಿನಿಂದಲೇ ಮನೆ ಮನೆಗಳಿಗೆ ಎಡತಾಕುತ್ತಾ, ಅಲ್ಲಲ್ಲಿ ಊರಿನವರಿಗೆ ಗುಂಡು- ತುಂಡು ಪಾರ್ಟಿಗಳನ್ನು ಏರ್ಪಡಿಸುತ್ತಾ, ಹಬ್ಬದ ಹೆಸರಿನಲ್ಲಿ ದೇಣಿಗೆಯನ್ನು ನೀಡುತ್ತಾ ಪಂಚಾಯಿತಿ ಎಲೆಕ್ಷನ್ ಗೆಲ್ಲುವುದಕ್ಕೆ ಬೇಕಾದ ಎಲ್ಲಾ ರಣತಂತ್ರಗಳನ್ನೂ ಅನುಸರಿಸುತ್ತಿದ್ದಾರೆ.

ಶಾಸಕರು- ಮಾಜಿ ಶಾಸಕರಿಂದ ಅವಲೋಕನ:

ವಿಧಾನಸಭೆ ಚುನಾವಣೆ ಇನ್ನು ಎರಡೇ ವರ್ಷವಿರುವುದರಿಂದ ಶಾಸಕರು, ಮಾಜಿ ಶಾಸಕರು, ಟಿಕೆಟ್ ಆಕಾಂಕ್ಷಿತರೂ ಕೂಡ ಪಂಚಾಯಿತಿಗಳಲ್ಲಿ ಸಂಚರಿಸುತ್ತಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಬಹುಪಾಲು ಪಂಚಾಯಿತಿಗಳನ್ನು ಅತಿಕ್ರಮಿಸಿಕೊಂಡು ೨೦೨೮ರ ವಿಧಾನಸಭೆ ಚುನಾವಣೆ ವೇಳೆಗೆ ಪಂಚಾಯಿತಿಗಳಲ್ಲಿ ಹಿಡಿತ ಸಾಧಿಸುವ ಗುರಿಯೊಂದಿಗೆ ಹಲವರು ಮುನ್ನಡೆದಿದ್ದಾರೆ.

ಅನ್ಯ ಕ್ಷೇತ್ರಗಳತ್ತ ಗಮನ:

ಮೀಸಲು ಕ್ಷೇತ್ರಗಳಿಂದ ಸ್ಪರ್ಧೆಯಿಂದ ವಂಚಿತರಾದವರು ಅನ್ಯಕ್ಷೇತ್ರಗಳನ್ನು ಹುಡುಕಿಕೊಂಡು ಅಲ್ಲಿ ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಜನರೂ ಕೂಡ ಹೊಸ ಸ್ಪರ್ಧಾಕಾಂಕ್ಷಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳುವ ಕುತೂಹಲವನ್ನು ತೋರುತ್ತಿದ್ದರೆ, ಕೆಲವರು ಸಂಬಂಧಿಕರು, ಸ್ನೇಹಿತರು ಹೆಚ್ಚಾಗಿರುವ ಕ್ಷೇತ್ರಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ಮೀಸಲು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. ಆನಂತರದಲ್ಲಿ ಚುನಾವಣಾ ಕಾರ್ಯಚಟುವಟಿಕೆಗಳು ಮತ್ತಷ್ಟು ಬಿರುಸನ್ನು ಪಡೆದುಕೊಳ್ಳಲಿವೆ.

ಜೆಡಿಎಸ್- ಕಾಂಗ್ರೆಸ್ ನಡುವೆ ನೇರ ಸೆಣಸಾಟ

ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸೆಣಸಾಟ ಇದ್ದೇ ಇರುತ್ತದೆ. ಹಿಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದ ಬಿಜೆಪಿ ಅಲ್ಲಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುತ್ತಾ ಬೆಳವಣಿಗೆ ಸಾಧಿಸುತ್ತಿರುವುದು ಬಹಿರಂಗ ಸತ್ಯ. ಬಿಜೆಪಿ ಮುಖಂಡರು ಪ್ರವರ್ಧಮಾನಕ್ಕೆ ಬರುತ್ತಿದ್ದು, ಹಲವೆಡೆ ತ್ರಿಕೋನ ಪೈಪೋಟಿ ಏರ್ಪಡುವ ಸಾಧ್ಯತೆಗೂ ಇವೆ. ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆ ನಡೆಯದೇ ಇದ್ದರೂ ಮೂರು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಆ ಪಕ್ಷದ ನಾಯಕರು ಹಲವಾರು ಕ್ಷೇತ್ರಗಳ ಮೀಸಲಾತಿಯನ್ನು ಬದಲಾಯಿಸಿ ಪ್ರಬಲ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ನೀಡದಂತೆ ಪ್ರಯತ್ನಗಳನ್ನು ನಡೆಸಿದ್ದಾರೆನ್ನಲಾಗಿದೆ. ಅದೇ ರೀತಿ ಜೆಡಿಎಸ್- ಬಿಜೆಪಿಯವರು ಅದಕ್ಕೆ ಸೆಡ್ಡು ಹೊಡೆದು ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದರೆ, ಪ್ರತಿಷ್ಠೆಯಾಗಿ ಪರಿಗಣಿಸಿದವರು ಮೀಸಲು ರದ್ಧತಿ ಕೋರಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಇದರಿಂದ ಹಲವು ಗ್ರಾಮ ಪಂಚಾಯಿತಿ ಕ್ಷೇತ್ರದ ಚುನಾವಣೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಜೆಡಿಎಸ್ ನಾಯಕರೂ ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ೨೦೨೮ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಚಾಯಿತಿಗಳನ್ನು ಗೆಲ್ಲುವುದಕ್ಕೆ ರಣತಂತ್ರ ರೂಪಿಸುತ್ತಿದ್ದಾರೆ. ಪಂಚಾಯಿತಿ ಸ್ಥಾನಗಳು ಕೈತಪ್ಪಿ ಹೋಗದಂತೆ ಮುಖಂಡರು- ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಪಕ್ಷದ ಮುಖಂಡರು- ಕಾರ್ಯಕರ್ತರು ಪಂಚಾಯಿತಿಯೊಳಗಿನ ಲಾಭ- ನಷ್ಟದ ಲೆಕ್ಕಾಚಾರವನ್ನು ನಾಯಕರ ಮುಂದಿಟ್ಟು ಗೆಲುವಿಗೆ ಬೇಕಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಕಾಂಗ್ರೆಸ್ ಪ್ರಾಬಲ್ಯವಿರುವ ಕಡೆಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಒಂದಾಗಿ ತಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳಾಗಿ ಪ್ರಬಲರನ್ನು ಕಣಕ್ಕಿಳಿಸಿ ಕೈ ಪಕ್ಷಕ್ಕೆ ಹಿನ್ನಡೆ ಉಂಟುಮಾಡುವುದಕ್ಕೆ ತಂತ್ರಗಾರಿಕೆ ನಡೆಸಲಾಗುತ್ತಿದೆ. ಸ್ಪರ್ಧೆಗೆ ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರಾದವರನ್ನು ತಮ್ಮತ್ತ ಸೆಳೆದುಕೊಂಡು ಕಣಕ್ಕಿಳಿಸುವ ಪ್ರಯತ್ನಗಳನ್ನು ಮೈತ್ರಿ ಪಕ್ಷದ ಮುಖಂಡರು- ನಾಯಕರು ನಡೆಸುತ್ತಿದ್ದಾರೆ. ಬಿಜೆಪಿ ಬಲವಿರುವ ಪಂಚಾಯಿತಿ ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಅವರಿಗೆ ಶಕ್ತಿ ತುಂಬುತ್ತಿದ್ದಾರೆ.

ಹೀಗೆ ಹಳ್ಳಿ ಕದನ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಮೀಸಲು ನಿಗದಿ ಬೆನ್ನಲ್ಲೇ ಚುನಾವಣಾ ಕಣ ರಣಕಣವಾಗಿ ರೂಪಾಂತರಗೊಂಡು ಎಲ್ಲರ ಗಮನಸೆಳೆಯುವಂತೆ ಮಾಡಿದೆ.