ಕೆ.ಆರ್.ಪೇಟೆ:

ಪಟ್ಟಣದ ಪುರಸಭಾ ವ್ಯಾಪ್ತಿಯ ಮತದಾರರ ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ನಾಗರಿಕರು, ಪುರಸಭೆ ಸಿಬ್ಬಂದಿ ಹಾಗೂ ಬಿಎಲ್‌ಓಗಳು ತಮ್ಮ ಮನೆಯ ಬಳಿ ಬಂದಾಗ ನಿಮ್ಮ ವಿವರಗಳು ಮತ್ತು ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಅಶೋಕ್ ಮನವಿ ಮಾಡಿದರು.

ಪಟ್ಟಣದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಂಬಂಧ ನಾಗರಿಕರ ಭೇಟಿ ವೇಳೆ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆಗೆ ನಮೂನೆಗಳನ್ನು ತಲುಪಿಸಿರುವ ಜೊತೆಗೆ ಪ್ರತಿನಿತ್ಯ ನಾಗರಿಕರ ಮನೆಗಳ ಮುಂದೆ ಬರುವ ಕಸದ ಗಾಡಿಯಲ್ಲಿ ಧ್ವನಿವರ್ಧಕದ ಮೂಲಕವೂ ಪ್ರಚಾರವನ್ನು ಮಾಡಲಾಗುತ್ತಿದೆ ಎಂದರು.

ಪ್ರತಿಯೊಂದು ವಾರ್ಡ್‌ನ ನೀರು ಬಿಡುವ ಸಿಬ್ಬಂದಿಯಿಂದ ವಿವರಗಳನ್ನು ಬಿಎಲ್‌ಓ ಗಳಿಗೆ ಒದಗಿಸಲು ಸೂಚಿಸಲಾಗಿದೆ. ಆದ್ದರಿಂದ ನಾಗರಿಕರು ತಮ್ಮ ಬಳಿಗೆ ಬರುವ ಅಧಿಕಾರಿಗಳಿಂದ ನಮೂನೆ ಪಡೆದು ಸುಮ್ಮನಾಗಬೇಡಿ. ನಮೂನೆಯನ್ನು ಭರ್ತಿಮಾಡಿ ಸಹಿ ಹಾಕಿ, ಹಿಂತಿರುಗಿಸದವರ ಹೆಸರು ಕರಡು ಮತಪಟ್ಟಿಯಲ್ಲಿ ಇರಲ್ಲ ಎಂದರು.

ಆನ್‌ಲೈನ್, ಆಫ್‌ಲೈನ್ ಎರಡರಲ್ಲಿಯೂ ಅರ್ಜಿ ತುಂಬಲು ಅವಕಾಶ ನೀಡಲಾಗಿದೆ. ಹೆಚ್ಚಿನ ಜನರು ಆಫ್‌ಲೈನ್ ನಲ್ಲಿಯೇ ನೋಂದಾಯಿಸುತ್ತಿರುವುದರಿಂದ ನಿಮಗೆ ನೀಡುವ ಗಣತಿ ನಮೂನೆಯು ಸರಿಯಾಗಿದೆಯೇ ಎಂದು ಪರಿಶೀಲಿಸಿ ವಿವರಗಳನ್ನು ದಾಖಲಿಸಬೇಕು. ನಿಮಗೆ ದಾಖಲು ಮಾಡಲು ಆಗದಿದ್ದರೆ ನಿಮ್ಮ ಬಳಿ ಬರುವ ಅಧಿಕಾರಿಗಳಿಗೆ ವಿವರಗಳನ್ನು ನೀಡಿ ಬರೆಸಿ ಸಹಿ ಹಾಕಿ ನಮೂನೆಯನ್ನು ಹಿಂದಿರುಗಿಸಬೇಕು ಎಂದು ಅಶೋಕ್ ತಿಳಿಸಿದರು.


ಪರಿಶೀಲನೆ ವೇಳೆ ಮಾಹಿತಿ ಹೊಂದಾಣಿಕೆ ಆಗದಿದ್ದಲ್ಲಿ ಅಧಿಕಾರಿಗಳು ನೋಟಿಸ್ ಕೊಡುತ್ತಾರೆ. ಈ ವೇಳೆ ಆಯೋಗ ನಿಗದಿ ಮಾಡಿ ರುವ 11 ದಾಖಲೆಗಳ ಪೈಕಿ ಒಂದು ದಾಖಲೆ ಸಲ್ಲಿಸಬೇಕು. ಬದಲಾವಣೆ ಮಾಡುವುದಿದ್ದಲ್ಲಿ ಜು.29ರೊಳಗೆ ಮಾಡಿಕೊಳ್ಳಬೇಕು. ತಿದ್ದುಪಡಿಗೆ ಬಿಎಲ್‌ಒಗಳಿಗೆ ಅಧಿಕಾರವಿದೆ. ಮತದಾರರ ಅನುಮತಿ ಇಲ್ಲದೆ ಬಿಎಲ್‌ಒಗಳು ಬದಲಾವಣೆ ಮಾಡಲು ಅವಕಾಶವಿಲ್ಲ ಎಂದರು.

ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕವೂ ತಿದ್ದುಪಡಿಗಳಿಗೆ ಅವಕಾಶವಿದೆ. ಮತದಾರರು ಫಾರ್ಮ್ 8 ಮೂಲಕ ಬದಲಾವಣೆ ಮಾಡಿಕೊಳ್ಳಬಹುದು ಎಂದರು.

ಈ ವೇಳೆ ಪುರಸಭೆ ಅಭಿಯಂತರರಾದ ಬಸವೇಗೌಡ, ಚೌಡಪ್ಪ, ಪ್ರಿಯಾಂಕ, ವ್ಯವಸ್ಥಾಪಕಿ ಕಾಂಚನಾ, ಕಂದಾಯ ಅಧಿಕಾರಿಗಳಾದ ನಾಗರಾಜು, ಶ್ರೀನಾಥ್, ಪುಟ್ಟಸ್ವಾಮಿ, ಸುಕನ್ಯಾ, ರತ್ನಮ್ಮ, ಸುಷ್ಮಾ ಸೇರಿದಂತೆ ಸಿಬ್ಬಂದಿ ಇದ್ದರು.