ಗದಗ- ಬೆಟಗೇರಿಯಲ್ಲಿ ಜಾಗೃತವಾಗಿದೆ ಮೂರನೇ ಕಣ್ಣು

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಗದಗ- ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ನಿಯಮ ಪಾಲನೆ, ಸುಗಮ ಸಂಚಾರ ವ್ಯವಸ್ಥೆ ಜಾರಿಗಾಗಿ ರೂಪಿಸಲಾಗಿರುವ ಥರ್ಡ್‌ ಐ ಯೋಜನೆ ಪರಿಣಾಮಕಾರಿ ಕಾರ್ಯರೂಪಕ್ಕೆ ಬಂದಿದ್ದು, ಸಂಚಾರ ನಿಯಮದ ಬಗ್ಗೆ ಅತ್ಯಂತ ನಿರ್ಲಕ್ಷ್ಯದ ಮಾತುಗಳನ್ನು ಆಡುತ್ತಿದ್ದ ಜನರೆಲ್ಲಾ ಈಗ ಸ್ವಯಂ ಪ್ರೇರಿತವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದು ಸೇರಿ ಹೊಸತನಕ್ಕೆ ಒಗ್ಗಿ ಕೊಳ್ಳುತ್ತಿದ್ದಾರೆ.

ಗದಗ: ಗದಗ- ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ನಿಯಮ ಪಾಲನೆ, ಸುಗಮ ಸಂಚಾರ ವ್ಯವಸ್ಥೆ ಜಾರಿಗಾಗಿ ರೂಪಿಸಲಾಗಿರುವ ಥರ್ಡ್‌ ಐ ಯೋಜನೆ ಪರಿಣಾಮಕಾರಿ ಕಾರ್ಯರೂಪಕ್ಕೆ ಬಂದಿದ್ದು, ಸಂಚಾರ ನಿಯಮದ ಬಗ್ಗೆ ಅತ್ಯಂತ ನಿರ್ಲಕ್ಷ್ಯದ ಮಾತುಗಳನ್ನು ಆಡುತ್ತಿದ್ದ ಜನರೆಲ್ಲಾ ಈಗ ಸ್ವಯಂ ಪ್ರೇರಿತವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದು ಸೇರಿ ಹೊಸತನಕ್ಕೆ ಒಗ್ಗಿ ಕೊಳ್ಳುತ್ತಿದ್ದಾರೆ. ಈಗಾಗಲೇ ಮಹಾ ನಗರಗಳಲ್ಲಿ ಸಂಚಾರ ನಿಯಮಗಳ ಪಾಲನೆಗಾಗಿ ಜಾರಿಯಲ್ಲಿದ್ದ ಅಟೋಮೇಟಿಕ್ ವ್ಯವಸ್ಥೆಯನ್ನು ಅವಳಿ ನಗರದಲ್ಲಿ ಅನುಷ್ಠಾನ ಮಾಡಲಾಗಿದ್ದು, ಅ.23ರಿಂದ ಆನ್‌ಲೈನ್‌ ದಂಡ ರಸೀದಿ ನೀಡುವ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಇದಕ್ಕೆ ಪ್ರಾರಂಭದಲ್ಲಿ ಜನರು ಅಷ್ಟೊಂದಾಗಿ ಸ್ಪಂದಿಸಿರಲಿಲ್ಲ, ಯಾವಾಗ ಸಂಚಾರ ನಿಯಮ ಪಾಲಿಸದೇ ಸಂಚರಿಸಿರುವುದನ್ನು ವಿಡಿಯೋ ಮೂಲಕ ಗುರುತಿಸಿ, ವಾಹನಗಳ ನಂಬರ್ ಪ್ಲೇಟ್ ಗಳಲ್ಲಿನ ದಾಖಲೆಯ ಆಧಾರದಲ್ಲಿ ಮಾಲೀಕರ ಮನೆಗೆ ನೋಟಿಸ್‌ಗಳು ಬರಲು ಪ್ರಾರಂಭವಾದವೋ ಅಲ್ಲಿಂದ ಪಾಲನೆಯಾಗುತ್ತಿವೆ ಸಂಚಾರಿ ನಿಯಮಗಳು. ಯೋಜನೆ ಅನುಷ್ಠಾನಕ್ಕೆ ಬಂದ ನಂತರ ಸಾವಿರಾರು ಪ್ರಕರಣಗಳನ್ನು ದಾಖಲಿಸಿಕೊಂಡು ತಪ್ಪಿತಸ್ಥರಿಗೆ ದಂಡದ ನೋಟಿಸ್ ಜಾರಿ ಮಾಡಲಾಗಿದೆ. ಇಲಾಖೆಯ ಮಾಹಿತಿ ಆಧಾರದಲ್ಲಿ ಇದುವರೆಗೆ ಒಟ್ಟು 7 ಲಕ್ಷಕ್ಕೂ ಅಧಿಕ ದಂಡ ಈ ಥರ್ಡ ಐ ಯೋಜನೆಯಿಂದ ವಸೂಲಿಯಾಗಿದೆ. ಅವಳಿ ನಗರದ ಪ್ರಮುಖ 15 ಸ್ಥಳಗಳಲ್ಲಿ 3 ಕೋಟಿ ರು. ವೆಚ್ಚದಲ್ಲಿ ಎಎಂಪಿಆರ್ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು 360 ಡಿಗ್ರಿ ಕಾರ್ಯ ನಿರ್ವಹಿಸುತ್ತವೆ. 44 ಸ್ಥಳಗಳಲ್ಲಿ ಬುಲೆಟ್ ಕ್ಯಾಮೆರಾ ಸೇರಿದಂತೆ ಒಟ್ಟು 110 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸ್ಥಾಪಿಸಲಾದ ಕಮಾಂಡ್ ಸೆಂಟರ್‌ನಲ್ಲಿ ಸಿಸಿ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಿ ಸಾರಿಗೆ ಇಲಾಖೆಯ ಸಹಕಾರದೊಂದಿಗೆ ವಾಹನಗಳ ಮಾಲೀಕರ ದಾಖಲೆ ಪಡೆದು ಆ ವಿಳಾಸಕ್ಕೆ ದಂಡದ ರಸೀದಿಗಳನ್ನು ಅಂಚೆ ಮೂಲಕ ಕಳಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ 48 ಗಂಟೆಗಳಲ್ಲಿ ಮನೆಗೆ ನೋಟಿಸ್ ಬರುತ್ತದೆ. ದಂಡ ಕಟ್ಟಲು ಒಂದು ವಾರದ ಗಡುವು ಕೂಡಾ ನಿಡಲಾಗುತ್ತಿದ್ದು, ಜಿಲ್ಲೆಯ 12 ಪೊಲೀಸ್ ಠಾಣೆಯಲ್ಲಿ ದಂಡ ಪಾವತಿ ಕೌಂಟರ್ ಪ್ರಾರಂಭಿಸಲಾಗಿದ್ದು, ಜಿಲ್ಲಾ ಕೇಂದ್ರಕ್ಕೆ ಬಂದಾಗ ನಿಯಮ ಉಲ್ಲಂಘಿಸುವ ಬೇರೆ ಬೇರೆ ತಾಲೂಕಿನ ಜನರು ಕೂಡಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.45 ಸ್ಥಳಗಳ ನೆಟ್‌ವರ್ಕ: ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳು ಸೇರಿದಂತೆ ಒಟ್ಟು 45 ಸ್ಥಳಗಳನ್ನು ಪೊಲೀಸ್ ಸಿಬ್ಬಂದಿ ಜಿಲ್ಲಾ ಕಚೇರಿಯಿಂದಲೇ ನಿಗಾ ವಹಿಸುವಂತಾ ವ್ಯವಸ್ಥೆಯನ್ನು (ನೆಟ್ ವರ್ಕ) ಈ ನೂತನ ವ್ಯವಸ್ಥೆ ಹೊಂದಿದೆ. ಇದರಿಂದಾಗಿ ಅವಳಿ ನಗರದ ಟ್ರಾಫಿಕ್ ನಿರ್ವಹಣೆ ಅತ್ಯಂತ ಸಲೀಸಾಗಿದ್ದು, ಇದರೊಟ್ಟಿಗೆ ತಡ ರಾತ್ರಿ ರಸ್ತೆಗಳಲ್ಲಿ ನಡೆಯುವ ಎಲ್ಲಾ ರೀತಿಯ ಕೃತ್ಯಗಳನ್ನು ಪತ್ತೆ ಮಾಡಲು ನೂತನ ವ್ಯವಸ್ಥೆ ಅನುಕೂಲವಾಗಿದೆ.

ಇದರೊಟ್ಟಿಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ದೂರು ಸ್ವೀಕಾರ, ಅದಕ್ಕಾಗಿ ಬೇಕಾಗುವ ಸಮಯ ಪೊಲೀಸ್ ಸಿಬ್ಬಂದಿಗಳ ನಿರ್ಲಕ್ಷ್ಯದ ವರ್ತನೆಗೂ ಇದರಿಂದ ನಿಧಾನವಾಗಿ ಕಡಿವಾಣ ಬೀಳುತ್ತಿದೆ. ಥರ್ಡ್ ಐ ಜಾರಿಯಾದ ಮೇಲೆ ಈಗಾಗಲೇ ಬಂದು ದಂಡ ಕಟ್ಟಿದವರು 1380, ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮಾಡಿದ ಪ್ರಕರಣ 3433, ತ್ರಿಬಲ್ ರೈಡಿಂಗ್ 560, ವಾಹನ ಚಾಲನೆ ಸಂದರ್ಭದಲ್ಲಿ ಪೋನ್ ಬಳಕೆ ಮಾಡಿದ್ದು 66, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೇ ಕಾರ್ ಚಲಾವಣೆ ಮಾಡಿದ್ದು 50, ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿ ನಿಯಮ ಉಲ್ಲಂಘಿಸಿದ್ದು 5, ಇನ್ನು ಆಟೋಗಳಲ್ಲಿ ಸಮವಸ್ತ್ರ ಧರಿಸದ ಪ್ರಕರಣಗಳು 177 ಹೀಗೆ ಅವಳಿ ನಗರದಲ್ಲಿ ಹೊಸ ಶಕೆಯನ್ನು ಥರ್ಡ್‌ ಐ ಪ್ರಾರಂಭಿಸಿದೆ.ಅವಳಿ ನಗರದಲ್ಲಿ ಸಂಚಾರ ನಿಯಮ ಪಾಲನೆ, ಅಪರಾಧ ಪತ್ತೆಗಾಗಿ ಥರ್ಡ್‌ ಐ ಯೋಜನೆ ಪ್ರಾರಂಭಿಸಲಾಗಿದ್ದು, ಸಾಕಷ್ಟು ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಾರದರ್ಶಕ ಆಡಳಿತ ವ್ಯವಸ್ಥೆಗೆ ಇದು ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು, ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ದಂಡ ಕಟ್ಟುವುದರಿಂದ ಮುಕ್ತರಾಗಲು ಸಾಧ್ಯ, ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ, ದಂಡ ಕಟ್ಟಿದರಾಯ್ತು ಎನ್ನುವ ನಿರ್ಲಕ್ಷ್ಯ ಭಾವನೆ ರೂಢಿಸಿಕೊಂಡಲ್ಲಿ ಕಾನೂನು ಇನ್ನಷ್ಟು ಬಿಗಿಯಾಗಿರುತ್ತದೆ ಎಂದು ಎಸ್ಪಿಬಿ.ಎಸ್. ನೇಮಗೌಡ್ರ ಹೇಳುತ್ತಾರೆ.

Share this article