ಪರಿಷತ್ ಚುನಾವಣೆಗೆ ‘ಗ್ಯಾರಂಟಿ’ ಸಹಾಯ: ಮಧು ಬಂಗಾರಪ್ಪ

KannadaprabhaNewsNetwork |  
Published : May 21, 2024, 12:30 AM IST
ಮಧು20 | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಲ್ಲ 6 ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಹೇಳಿದ್ದಾರೆ. ಅದರಂತೆ ತಯಾರಿಗಳನ್ನು ನಡೆಸಿದ್ದೇವೆ. ನೈರುತ್ಯ ಕ್ಷೇತ್ರದಲ್ಲಿ ಸುಮಾರು 74,000 ಪದವೀಧರ ಮತ್ತು 24,000 ಶಿಕ್ಷಕ ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ ಮತ್ತು ಡಾ.ಕೆ.ಕೆ.ಮಂಜುನಾಥ್ ಗೆಲ್ಲಿದ್ದಾರೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಯ ಆಧಾರದಲ್ಲಿ ಅಧಿಕಾರಕ್ಕೆ ಬಂದಿದೆ. ಸರ್ಕಾರ ಗ್ಯಾರಂಟಿಗಳನ್ನು ಈಡೇರಿಸಿದೆ. ಅದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಸಹಾಯವಾಗಿದೆ. ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಸಹಾಯವಾಗುತ್ತದೆ. ಕಾಂಗ್ರೆಸ್ ಎಲ್ಲ 6 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ವಿಧಾನ ಪರಿಷತ್ ಚುನಾವಣಾ ಪೂರ್ವ ಸಭೆಯನ್ನು ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಲ್ಲ 6 ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಹೇಳಿದ್ದಾರೆ. ಅದರಂತೆ ತಯಾರಿಗಳನ್ನು ನಡೆಸಿದ್ದೇವೆ. ನೈರುತ್ಯ ಕ್ಷೇತ್ರದಲ್ಲಿ ಸುಮಾರು 74,000 ಪದವೀಧರ ಮತ್ತು 24,000 ಶಿಕ್ಷಕ ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ ಮತ್ತು ಡಾ.ಕೆ.ಕೆ.ಮಂಜುನಾಥ್ ಗೆಲ್ಲಿದ್ದಾರೆ ಎಂದರು.

ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಹೊಸ ಪಿಂಚಣಿ ನೀತಿಯನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಹೇಳಿದೆ. 17ನೇ ವೇತನ ಆಯೋಗದ ವರದಿ ಕೂಡ ಜಾರಿಯಾಗಲಿದೆ. ಇದರಿಂದ ಕಾರ್ಮಿಕರಿಗೆ, ನೌಕರರಿಗೆ ಸಹಾಯವಾಗುತ್ತದೆ. ಅವರೆಲ್ಲರೂ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಮಂಜುನಾಥ್ ಮಾತನಾಡಿ, ಶಿಕ್ಷಕರ ಕ್ಷೇತ್ರವನ್ನು ಶಿಕ್ಷಕರೇ ಪ್ರತಿನಿಧಿಸಬೇಕು, ಉದ್ಯಮಿಗಳು ಗೆದ್ದರೆ ತಮ್ಮ ಉದ್ಯಮವನ್ನೇ ಗಟ್ಟಿಗೊಳಿಸುತ್ತಾರೆ. ತಾನು ಶಿಕ್ಷಕನಾಗಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಲ್ಲೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ನೀಡಲು ಶಿಕ್ಷಕರು ತನ್ನನ್ನು ಬೆಂಬಲಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಉಡುಪಿ ಜಿಲ್ಲೆಗೆ ಕೆಪಿಸಿಸಿ ಉಸ್ತುವಾರಿ ಟಿ.ಎಂ. ಶಾಹಿದ್ ತೆಕ್ಕಿಲ್, ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಾಯಕರಾದ ಐವನ್ ಡಿಸೋಜ, ಉದಯಕುಮಾರ್ ಶೆಟ್ಟಿ ಮುನಿಯಾಲು, ಕಿಶನ್ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ