ಮಳೆ ನೀರಿನಿಂದ ಗಾಯತ್ರಿ ನಗರ ಜಲಾವೃತ

KannadaprabhaNewsNetwork |  
Published : May 21, 2024, 12:30 AM IST
ಪೋಟೋ:19ಜಿಎಲ್ಡಿ4ಗುಳೇದಗುಡ್ಡ: ಕಮತಗಿ ರಸ್ತೆಗೆ ಹೊಂದಿಕೊಂಡ ಗಾಯಿತ್ರಿ ನಗರದಲ್ಲಿ ಮಳೆ ನೀರಿನಿಂದ ಜಲಾವೃತವಾದ ಪ್ರದೇಶ. | Kannada Prabha

ಸಾರಾಂಶ

ಗುಳೇದಗುಡ್ಡ: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣದ ಕಮತಗಿ ರಸ್ತೆಗೆ ಹೊಂದಿಕೊಂಡ ನೇಕಾರರ ಗಾಯತ್ರಿ ನಗರದ ಮನೆಗಳ ಸುತ್ತಲೂ ಭಾರಿ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿ ಈ ಪ್ರದೇಶ ಸಂಪೂರ್ಣ ಜಲಾಮಯಗೊಂಡಿತ್ತು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣದ ಕಮತಗಿ ರಸ್ತೆಗೆ ಹೊಂದಿಕೊಂಡ ನೇಕಾರರ ಗಾಯತ್ರಿ ನಗರದ ಮನೆಗಳ ಸುತ್ತಲೂ ಭಾರಿ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿ ಈ ಪ್ರದೇಶ ಸಂಪೂರ್ಣ ಜಲಾಮಯಗೊಂಡಿತ್ತು.

ಕಮತಗಿ, ಪಾದನಕಟ್ಟಿ ರಸ್ತೆಗೆ ಹೊಂದಿಕೊಂಡ ಗಾಯತ್ರಿ ನಗರದಲ್ಲಿ ಪ್ರತಿ ವರ್ಷ ಮಳೆ ಸುರಿದಾಗಲೊಮ್ಮೆ ಮಳೆ ನೀರು ಸಂಗ್ರಹವಾಗಿ ಜನರ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಈ ಮಳೆ ನೀರು 10-15 ದಿನಗಳವರೆಗೆ ನಿಂತಲ್ಲೇ ನಿಂತು ಜನರಿಗೆ ಭಾರಿ ಸಮಸ್ಯೆ ತಂದೊಡ್ಡುತ್ತಿದೆ.

ಎರಡು ದಿನಗಳ ಹಿಂದೆ ರಾತ್ರಿ ಎಡಬಿಡದೆ ಸುರಿದ ಧಾರಾಕಾರ ಮಳೆಯಿಂದ ಗಾಯಿತ್ರಿ ನಗರದ ಎಲ್ಲೆಡೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿದೆ. ಮಳೆಯಿಂದ ಸಂಗ್ರಹವಾದ ನೀರು ಮುಂದೆ ಹರಿದು ಹೋಗುತ್ತಿಲ್ಲ. ಇದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ನಿಂತ ನೀರಿನಲ್ಲಿ ಹಾವು, ಚೇಳು, ಕ್ರಿಮಿಕೀಟಗಳ ಹಾವಳಿ ಕೂಡ ಮಿತಿ ಮೀರಿದೆ.

ಇಲ್ಲಿ ಹೆಚ್ಚಾಗಿ ನೇಕಾರರ ಮನೆಗಳಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಮಳೆನೀರಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿವರ್ಷ ಇಲ್ಲಿನ ಎಲ್ಲ ನಾಗರಿಕರು ಪುರಸಭೆ ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಮಳೆ ನೀರು ಮುಂದೆ ಹರಿದು ಹೋಗುವಂತೆ ವ್ಯವಸ್ಥೆ ಮಾಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಗಾಯಿತ್ರಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಲ್ಲ. ಇಲ್ಲಿನ ಪ್ರತಿಯೊಬ್ಬರು ಮನೆಗಳ ಮುಂದೆ ಇಂಗು ಗುಂಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ನೀರು ಶೇಖರಣೆ ಆಗುವುದರಿಂದ ಇಂಗುಗುಂಡಿಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತದೆ. ಮಳೆ ನೀರು ಹರಿದು ಹೋಗುವಂತೆ ಮಾಡಲು ಪುರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಇಲ್ಲಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬುದು ಗಾಯತ್ರಿ ನಗರದ ನಿವಾಸಿಗಳ ಗೋಳು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌