ಬೀಳಗಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 1974-75ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಂದ ಭಾನುವಾರ ಗುರುವಂದನೆ ಕಾರ್ಯಕ್ರಮ ನಡೆಯತು.
ಕನ್ನಡಪ್ರಭ ವಾರ್ತೆ ಬೀಳಗಿ
ಜ್ಞಾನ ದಾನ ಮಾಡಿದ ಗುರುಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಜ್ಞಾನ ದಾನ ಮಾಡಿ ಸಂಸ್ಕಾರ ಜತೆಗೆ ಶಿಕ್ಷಣ ನೀಡಿದ ಗುರುಗಳ ಜ್ಞಾನ ಎಂದಿಗೂ ಕಡಿಮೆ ಆಗದು. ಬಾಲ್ಯದ ನೆನಪುಗಳನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಯಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 1974-75ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಗುರುಗಳಿಂದ ಪಡೆದ ಜ್ಞಾನದ ಬಲದಿಂದ ಇಷ್ಟು ಎತ್ತರಕ್ಕೆ ಬೆಳೆಯಲು ಎಲ್ಲರಿಗೂ ಸಾಧ್ಯವಾಯಿತು. ಶಿಕ್ಷಕರು ದೇವರಿಗಿಂತ ಮಿಗಿಲು ಅವರ ಮಾರ್ಗದರ್ಶನ ಬಲದಿಂದ ನಾವೆಲ್ಲ ಕಾರ್ಯ ನಿರ್ವಹಿಸುತ್ತಿದ್ದೇವೆ. ಮನುಷ್ಯ ಜನಸೇವೆ, ಪರರಸೇವೆ, ಪರೋಪಕಾರದಲ್ಲಿ ಸದಾ ನಿರತನಾಗಿರಬೇಕು. ಸ್ವಾಮಿ ಎಂದರೆ ಮಠದ ಅಧಿಪತಿ, ಒಡೆಯನಲ್ಲ ಸಮಾಜ ಸೇವಕ ಎಂದು ಹೇಳಿದರು.
ಬೇರೆ ಇಲಾಖೆಗಳಲ್ಲಿ ಇಲ್ಲದ ಗುರುವಂದನೆ ಈ ಶಿಕ್ಷಣ ಇಲಾಖೆಯಲ್ಲಿರುವುದು ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರ ಮಹತ್ವ ತಿಳಿಸುತ್ತದೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿ ಎಚ್.ಬಿ. ಧರ್ಮಣ್ಣವರ ಹೇಳಿದರು.
ಮನುಷ್ಯ ಸಂಬಂಧಗಳೇ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಗುರುವಂದನೆ ಕಾರ್ಯಕ್ರಮದ ಮುಖಾಂತರ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತಿರುವ ತಮಗೆ ಅಭಿನಂದನೆ ಎಂದು ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟಣ್ಣವರ ಹೇಳಿದರು. 75, 80ರ ಇಳಿವಯಸ್ಸಿನ ನಿವೃತ್ತ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಬಸಟ್ಟೆಪ್ಪ ಸಾತಾನಿ ಹಾಡಿದ ಒಳಿತು ಮಾಡು ಮನುಷಾ ಹಾಡು ಸೇರಿದವರ ಮನಗೆದ್ದಿತು. ಅಶೋಕ ಜೋಶಿ, ಶಂಕರ ಕೋಟಿ, ಸೋಮಶೇಖರ ಶಹಾಪುರ, ಎಮ್.ಎ.ಮಹಲಿನಮನಿ, ಮಂಜುಳಾ ಕಲ್ಯಾಣಮಠ, ಗುರುಬಾಯಿ ಚೌಕಿಮಠ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.