ಕನ್ನಡಪ್ರಭ ವಾರ್ತೆ ಹಳೇಬೀಡುವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಹಳೇಬೀಡು ಸೇರ್ಪಡೆಯಾಗಿದ್ದು, ಸ್ಥಳೀಯ ಜನತೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ತಿಳಿಸಿದರು. ಈ ಹಿಂದೆ ಗ್ರಾಮ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆದು ಹಳೇಬೀಡಿಗೆ ಹೆಚ್ಚು ಪ್ರವಾಸಿಗರು ಬರುವ ಸ್ಥಳವಾಗಿದ್ದು, ಈ ಸ್ಥಳದಲ್ಲಿ ಸುಂದರತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದ್ದರು. ಪ್ರಮುಖ ರಸ್ತೆಯಲ್ಲಿ ಇರುವ ಗೂಡಂಗಡಿ ತೆರವು ಮಾಡಿಸಿ ಅವರಿಗೆ ತಾತ್ಕಾಲಿಕ ಅಂಗಡಿಗಳನ್ನು ಮಾಡುವ ಉದ್ದೇಶ ನಮ್ಮದಾಗಿದೆ. ನಮ್ಮ ಪಂಚಾಯತಿ ಸ್ಥಳದಲ್ಲಿ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷ ಮಾಧ್ಯಮದೊಂದಿಗೆ ಮಾತನಾಡುತ್ತ, ಇತಿಹಾಸ ಹೊಂದಿದ ಸ್ಥಳಕ್ಕೆ ನಿತ್ಯ ಪ್ರವಾಸಿಗರು ಮತ್ತು ವಿ.ಐ.ಪಿ.ಗಳು ಬರುವುದು ಸಾಮನ್ಯವಾಗಿದೆ. ಸ್ಥಳದಲ್ಲಿ ಸ್ವಚ್ಛತೆ ಇಲ್ಲದ್ದರೆ ನಮಗೆ ದೂರವಾಣಿ, ಪತ್ರ ಮೂಲಕ ನೋಟಿಸ್ ಬರುತ್ತದೆ. ಆದಕಾರಣ ಹಳೇಬೀಡಿನ ಮುಖ್ಯರಸ್ತೆಯಲ್ಲಿರುವ ಗೂಡಂಗಡಿಗ ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ಹಳೇಬೀಡಿನ ಪೊಲೀಸ್ ಇಲಾಖೆಯ ವಸತಿ ಸ್ಥಳದ ಮುಂಭಾಗದಲ್ಲಿ ೩೦ ಅಡಿ ಗ್ರಾಮ ಪಂಚಾಯಿತಿಯ ಹೆಸರಲ್ಲಿ ಖಾಲಿ ಸ್ಥಳವಿದ್ದು, ಈ ಸ್ಥಳದಲ್ಲಿ ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿಯಿಂದ ಅಂಗಡಿ ಮಳಿಗೆಗಳನ್ನು ಮಾಡಿಕೊಡಲಾಗುವುದು. ೨೦೧೦- ೧೧ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಗ್ರಾಮ ಪಂಚಾಯಿತಿ ವತಿಯಿಂದ ಪೂರ್ವ- ಪಶ್ಚಿಮ ೨೦೦ ಅಡಿ, ಉತ್ತರ ದಕ್ಷಿಣ ೭೦ಅಢಿ ಜಾಗವನ್ನು ಉಚಿತವಾಗಿ ಖಾತೆ ಮಾಡಿಕೊಡಲಾಗಿದೆ. ಇದರ ಮುಂದಿನ ಜಾಗದಲ್ಲಿ ೩೦ ಅಡಿ ಗ್ರಾಮ ಪಂಚಾಯಿತಿ ಹೆಸರಲ್ಲಿ ಇದ್ದು ಆ ಜಾಗವನ್ನು ಹಳೇಬೀಡಿನ ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹಾಗೂ ಬರುವ ಪ್ರವಾಸಿಗರಿಗೆ ತೊಂದರೆ(ಕಿರಿಕಿರಿ) ಆಗದಂತೆ ನೋಡಲು ಸುಂದರವಾಗಿ ಕಾಣಲು ಒಂದೇ ರೀತಿಯಲ್ಲಿ ಅಂಗಡಿ ಮಳಿಗೆ ಮಾಡಿಕೊಡುವ ಉದ್ದೇಶದಿಂದ ಈ ಸ್ಥಳದಲ್ಲಿ ಸರ್ವೆ ಮಾಡಿ ಸ್ಥಳಿಯ ಜನತೆಗೆ ಅನುಕೂಲಕ್ಕೆ ನಮ್ಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹೆಚ್ಚಿನ ಸದಸ್ಯರ ಸಮ್ಮುಖದಲ್ಲಿ ತಾತ್ಕಾಲಿಕ ಮಳಿಗೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಹಾಲಿ ಸಧಸ್ಯರಾದ ರಶ್ಮಿ ವಿನಯ್, ಕವಿತಾ ರಮೇಶ್, ಗೀತಾಅರಣ್, ಪ್ರೇಮಣ್ಣ, ನಿಂಗಪ್ಪ ಹಾಗೂ ಸದಸ್ಯರಾದ ಸುರೇಶ್, ಮೋಹನ್ ರಮೇಶ್, ಮಲ್ಲೇಶಪ್ಪ, ಲಕ್ಷ್ಮಿಬಸವರಾಜ್, ವಾಣಿಚಂದ್ರಶೇಖರ್, ಕಾರ್ಯದರ್ಶಿ ಶೈಲಜಾ, ನೌಕರರಾದ ಬಸವರಾಜ್ ಹಾಜರಿದ್ದರು.* ಹೇಳಿಕೆ 1ಹಳೇಬೀಡು ವಿಶ್ವ ಪಾರಂಪರಿ ಪಟ್ಟಿಯಲ್ಲಿ ಇರುವುದು ತುಂಬಾ ಸಂತೋಷದ ವಿಚಾರ. ಈ ಸ್ಥಳಕ್ಕೆ ಇತಿಹಾಸದ ದೇವಸ್ಥಾನ ಇದ್ದು ಇಲ್ಲಿಗೆ ದಿನ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲ ಮಾಡಿಕೊಡುವುದು. ನಮ್ಮ ಉದ್ದೇಶ. ನಮ್ಮ ಊರಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
- ಸುರೇಶ್, ಗ್ರಾಮ ಪಂಚಾಯತಿ ಸದಸ್ಯ