- ಚನ್ನಗಿರಿ ತಾಲೂಕು ಶಸಾಪ ದತ್ತಿ ಉಪನ್ಯಾಸದಲ್ಲಿ ಎಚ್.ಎಸ್.ಮಲ್ಲಿಕಾರ್ಜುನಪ್ಪ ಅಭಿಮತ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿ ಸುಮಾರು 4 ಸಾವಿರ ಮಠಗಳಿದ್ದು, ಅವುಗಳಲ್ಲಿ ಬಹುತೇಕ ಮಠಗಳು ಬಸವತತ್ವವನ್ನು ಪ್ರಚಾರ ಮಾಡುತ್ತಿವೆ. ಅದರಲ್ಲೂ ಸುತ್ತೂರು ಮಠದ ವಿಶೇಷವೆಂದರೆ, ಬಸವ ತತ್ವ ಹಾಗೂ ಬಸವಾದಿ ಶರಣರ ತತ್ವ- ಆದರ್ಶಗಳನ್ನು ನಾಡಿನ ಜನತೆಗೆ ಪ್ರಚಾರ ಉದ್ದೇಶದಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿರುವುದು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ಹೇಳಿದರು.ಪಟ್ಟಣದ ಹೊರವಲಯದ ಶ್ರೀ ತರಳಬಾಳು ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಜನ್ಮದಿನಾಚರಣೆ ಅಂಗವಾಗಿ ನಡೆದ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿಗೆ ಹಣಕಾಸಿನ ನೆರವಿಗಾಗಿ ದಾನಿಗಳಿಂದ ದತ್ತಿರೂಪದಲ್ಲಿ ಹಣ ಸಂಗ್ರಹಿಸಿ, ವರ್ಷಕ್ಕೆ ಒಂದು ಬಾರಿ ದಾನ ನೀಡಿದವರ ಹೆಸರಿನಲ್ಲಿ ದತ್ತಿ ಉಪನ್ಯಾಸಗಳನ್ನು ನಡೆಸಲಾಗುತ್ತಿದೆ. ಆ ಮೂಲಕ ಬಸವತತ್ವವನ್ನು ನಾಡಿನೆಲ್ಲೆಡೆ ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.ಮುಖ್ಯ ಶಿಕ್ಷಕ ಎಂ.ಆರ್.ಲೋಕೇಶ್ವಯ್ಯ ಅತಿಥಿ ಉಪನ್ಯಾಸ ನೀಡಿ, 12ನೇ ಶತಮಾನದ ಬಸವಾದಿ ಶಿವಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸಲು ಹೋರಾಡಿದವರು. ಕಾಯಕಗಳಲ್ಲಿ ಯಾವುದೂ ಮೇಲಲ್ಲ, ಯಾವುದು ಕೀಳಲ್ಲ. ಎಲ್ಲ ಕಾಯಕಗಳಿಗೂ ತನ್ನದೇ ಆದಂತಹ ಗೌರವಗಳಿರುತ್ತವೆ ಎಂದು ತೋರಿಸಿಕೊಟ್ಟವರು 12ನೇ ಶತಮಾನದ ಶರಣರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯದರ್ಶಿ ಎಂ.ಬಿ.ರಾಜಪ್ಪ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಶ.ಸಾ.ಪ. ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ, ಜಿ.ಎಸ್.ಶಂಕರಪ್ಪ, ರುದ್ರೇಶ್ ವಿ. ಮಠದ್, ಬಿ.ಎಸ್.ಕಿರಣ್ ಕುಮಾರ್, ಸವಿತ, ನೇತ್ರಾವತಿ, ಎನ್.ಎಸ್. ರಾಜಪ್ಪ, ಸಿದ್ದಯ್ಯ, ಬಿ.ಶಿವಲಿಂಗಪ್ಪ, ಶಾಲೆ ಸಿಬ್ಬಂದಿ ಹಾಜರಿದ್ದರು.- - -
-29ಕೆಸಿಎನ್‌ಜಿ3.ಜೆಪಿಜಿ:ಚನ್ನಗಿರಿ ಪಟ್ಟಣದ ತರಳಬಾಳು ಪ್ರೌಢಶಾಲೆಯಲ್ಲಿ ತಾಲೂಕು ಶ.ಸಾ.ಪ. ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪರಿಷತ್ ಗೌರವಾಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ಉದ್ಘಾಟಿಸಿದರು.