ಕನ್ನಡಪ್ರಭ ವಾರ್ತೆ ಹೊಳೆನರಸೀಪುರ *ಮುಖ್ಯಾಂಶಗಳು * ೯.೫೦ ಕೋಟಿ ರು. ವೆಚ್ಚದಲ್ಲಿ ಹಂಗರಹಳ್ಳಿರೈಲ್ವೆ ಮೇಲ್ಸೇತುವೆ ದುರಸ್ತಿ * 4 ತಿಂಗಳಲ್ಲಿ ಮುಗಿಯಲಿರುವ ದುರಸ್ತಿ ಕಾಮಗಾರಿ * ೨೦೧೮ರಲ್ಲಿ ನಿರ್ಮಾಣಗೊಂಡಿದ್ದ ಸೇತುವೆ ಕುಸಿದಿತ್ತು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೩೭೩ರ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿಯನ್ನು ೯.೫೦ ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಗುಣಮಟ್ಟದಿಂದ ಕೂಡಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಗುತ್ತಿಗೆದಾರ ವೆಂಕಟೇಶ್ ಅವರಿಗೆ ಸೂಚಿಸಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ತಾಲೂಕಿನ ಹಂಗರಹಳ್ಳಿ ಗ್ರಾಮ ರೈಲ್ವೆ ಮೇಲ್ಸೇತುವೆ ಕುಸಿದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕಳಪೆ ಗುಣ್ಣಮಟ್ಟದಿಂದ ಕೂಡಿದೆ ಎಂದು ತಜ್ಞರ ಸಲಹೆ ಮೇರೆಗೆ ಸುಮಾರು ೨೪೦ ಮೀಟರ್ ಉದ್ದದ ಸೇತುವೆಯನ್ನು ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ ಎಂದರು. ಗುತ್ತಿಗೆದಾರ ವೆಂಕಟೇಶ್ ಅವರು ಗುಣಮಟ್ಟದಿಂದ ಕೂಡಿದ ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಮುಗಿಸಿ, ಸಾರ್ವಜನಿಕರ ಸಂಚಾರಕ್ಕೆ ಬಿಟ್ಟು ಕೊಡುವ ಭರವಸೆ ನೀಡಿದ್ದಾರೆ ಎಂದರು. ರೈಲ್ವೆ ಎಂಜಿನಿಯರ್ ನಾಗರಾಜು ಮಾತನಾಡಿ, ತಾಲೂಕಿನ ಹಂಗರಹಳ್ಳಿ ಗ್ರಾಮ ರೈಲ್ವೆ ಮೇಲ್ಸೇತುವೆಯನ್ನು ೩೫ ಕೋಟಿ ರು. ವೆಚ್ಚದಲ್ಲಿ ೨೦೧೮ರಲ್ಲಿ ನಿರ್ಮಿಸಿ, ಲೋಕಾರ್ಪಣೆ ಮಾಡಲಾಗಿತ್ತು. ಈ ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಿರುವ ವಸ್ತುಗಳು ಹಾಗೂ ಸೇತುವೆ ಅಡಿಪಾಯಕ್ಕೆ ಬಳಸಿರುವ ಮಣ್ಣು ಗುಣ್ಣಮಟ್ಟವಿಲ್ಲ. ಜತೆಗೆ ಬಳಸಿರುವ ಕಬ್ಬಿಣ ಮತ್ತು ಅಗತ್ಯ ಪರಿಕಗಳನ್ನು ಬಳಸದಿರುವುದು ಮತ್ತು ಸೇತುವೆ ಮಧ್ಯಭಾಗದಲ್ಲಿ ತುಂಬಿರುವ ಮಣ್ಣು ಗುಣ್ಣಮಟ್ಟ ಕಳೆದುಕೊಂಡಿದ್ದರಿಂದ ಸೇತುವೆ ಕುಸಿಯಲು ಕಾರಣವಾಗಿದೆ ಎಂದು ಸಮಸ್ಯೆ ಕುರಿತು ಮಾಹಿತಿ ನೀಡಿದರು. ಸೇತುವೆ ನಿರ್ಮಿಸಿದ ಗುತ್ತಿಗೆದಾರರನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ದುರಸ್ತಿಗೆ ಖರ್ಚಾಗುವ ಹಣವನ್ನು ಗುತ್ತಿಗೆದಾರರಿಂದ ವಸೂಲಿ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎಂದರು. ಪ್ರಸ್ತುತ ಕುಸಿದಿರುವ ಸೇತುವೆಯನ್ನು ತೆರವುಗೊಳಿಸಿ ಪ್ರತಿ ಹತ್ತು ಮೀಟರ್‌ಗೆ ಗುಣ್ಣಮಟ್ಟದ ಪಿಲ್ಲರ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಮೇಲ್ಸೇತುವೆ ಗುಣ್ಣಮಟ್ಟದಿಂದ ಕೂಡಿರುತ್ತದೆ ಎಂದರು. ಹಂಗರಹಳ್ಳಿ ಗ್ರಾಮದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಯಾವುದೇ ವಾಹನಗಳು ಓಡಾಡದಂತೆ ಕ್ರಮಕೈಗೊಳ್ಳಲಾಗಿದೆ. ೨೦೨೪ರ ಫೆಬ್ರವರಿ ೧೮ರವರೆಗೆ ಹಾಸನಕ್ಕೆ ತೆರಳುವ ಭಾರಿ ವಾಹನಗಳು ಹೊಳೆನರಸೀಪುರ ಪಟ್ಟಣದಿಂದ ಅರಕಲಗೂಡು ರಸ್ತೆಯ ನಾಗಲಾಪುರ ಗೇಟ್ ಹತ್ತಿರ ತಿರುವು ಪಡೆದು ಪಡುವಲಹಿಪ್ಪೆ ಮಾರ್ಗವಾಗಿ ಹನುಮನಹಳ್ಳಿ, ಹಂಗರಹಳ್ಳಿ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗಿದೆ ಮತ್ತು ಲಘು ವಾಹನಗಳು ಹಳೇಕೋಟೆಯಿಂದ ಸ್ವಲ್ವ ಮುಂದೆ ತೆರಳಿ ಬಲಕ್ಕೆ ತಿರುವ ಪಡೆದು ಕಬ್ಬಿನಹಳ್ಳಿ ಮಾರ್ಗವಾಗಿ ಮೊಸಳೆಹೊಸಳ್ಳಿ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎನ್.ಆರ್.ಅನಂತ ಕುಮಾರ್, ಇತರರು ಇದ್ದರು. * ಬಾಕ್ಸ್‌ನ್ಯೂಸ್1: ರೈಲ್ವೆ ಗೇಟ್ ಬಳಸಲು ಅವಕಾಶ ನೀಡಿ ಹಂಗರಹಳ್ಳಿ ಗ್ರಾಮದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾದ ನಂತರ ಸೇತುವೆ ಸಮೀಪದ ಅಕ್ಕಪಕ್ಕದಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಹಿಂದೆ ಬಳಸುತ್ತಿದ್ದ ರೈಲ್ವೆ ಗೇಟ್ ಅನ್ನು ತಾತ್ಕಾಲಿಕವಾಗಿ ಬಳಸಲು ಅವಕಾಶ ಕಲ್ಪಿಸಿಕೊಡುವಂತೆ ರೈತರು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ರೈತರು ಮನವಿ ಮಾಡಿದರು. ರೈತರ ಮನವಿ ಆಲಿಸಿದ ಶಾಸಕರು ಅವಕಾಶ ಕೊಡಿಸುವ ಭರವಸೆ ನೀಡಿದರು. * ಹೇಳಿಕೆ 1 ಪ್ರಸ್ತುತ ದುರಸ್ತಿ ಕೈಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಪಕ್ಕದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಕ್ರಿಯಾಯೋಜನೆ ತಯಾರು ಮಾಡಿದ್ದು, ಇದಕ್ಕೆ ಅನುಮತಿಯೂ ದೊರೆತಿದೆ ಮತ್ತು ಈ ಸೇತುವೆಗೆ ೬೦ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. - ಎಚ್ ಡಿ ರೇವಣ್ಣ, ಶಾಸಕ