ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರ ಜೈ ಶ್ರೀರಾಮ ಸೇನೆ ಹಾಗೂ ಗ್ರಾಮಸ್ಥರ ವತಿಯಿಂದ 5ನೇ ವರ್ಷದ ಹನುಮಂತೋತ್ಸವ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ಅರ್ಚಕರು ಮೋಹನ್ ನೆರವೇರಿಸುವ ಮೂಲಕ ಆರಂಭವಾಯಿತು. ಜೈ ಶ್ರೀರಾಮ ಸೇನೆಯವರು ಉತ್ಸವ ಮೂರ್ತಿಯನ್ನು ನದಿಯಿಂದ ಪಲ್ಲಕ್ಕಿ ಉತ್ಸವಕ್ಕೆ ತಂದ ನಂತರ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಎ. ಮಂಜು, ಶ್ರೀರಾಮ ಎಲ್ಲಿ ನೆಲೆಸಿರುತ್ತಾರೆ ಅಲ್ಲಿ ಹನುಮ ಇರುತ್ತಾರೆ. ಹೀಗಾಗಿ ರಾಮ ಮಂದಿರದಲ್ಲಿಯೂ ಮಾರುತಿ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದರು. ದೇಶದ 80ರಷ್ಟು ಪಟ್ಟಣ ಹಾಗೂ ಗ್ರಾಮೀಣ ಗ್ರಾಮಗಳಲ್ಲಿ ಮಾರುತಿ ದೇವಾಲಯಗಳಿವೆ ಎಂದರು. ಈ ಸಂದರ್ಭದಲ್ಲಿ ಹನುಮ ಜಯಂತಿಯ ಶೋಭಾ ಯಾತ್ರೆ ಪಟ್ಟಣದ ದೇವಾಲಯದ ರಸ್ತೆ, ಕೆ.ಇ.ಬಿ. ರಸ್ತೆ, ಬಿಳಗೂಲಿ ರಸ್ತೆ, ಕೋಟವಾಳು ರಸ್ತೆ ಮೂಲಕ ಸಾಗಿ ಮೂಲಸ್ಥಾನ ತಲುಪಿತು. ಮಂಗಳವಾದ್ಯ, ಡೊಳ್ಳುಕುಣಿತ, ತಮಟೆ, ಮಂಗಳವಾದ್ಯ ಸೇರಿದಂತೆ ವಿವಿಧ ಅಕರ್ಷಣೀಯ ಕಲಾ ಪ್ರಕಾರಗಳು ಜನರ ಗಮನ ಸೆಳೆದವರಲ್ಲದೇ ಯುವಕ ಯುವತಿಯರು ಮತ್ತು ಹನುಮ ಭಕ್ತರು ಕೇಸರಿ ಧ್ವಜ ಕೈಯಲ್ಲಿ ಹಿಡಿದು ಅಂಜನೇಯನ ಜಪ ಮಾಡುತ್ತಾ ದಾರಿಯುದ್ದಕ್ಕೂ ಹರ್ಷೋದ್ಗಾರದಿಂದ ಮುನ್ನಡೆದರು. ಇದರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪಾನಕ ಸಿಹಿತಿಂಡಿ, ಪ್ರಸಾದದ ವ್ಯವಸ್ಥೆ, ಮಜ್ಜಿಗೆಯನ್ನು ವಿವಿಧ ಸಂಘಟನೆಯವರು ಭಕ್ತರು ವಿತರಣೆ ಮಾಡಿ ತಮ್ಮ ಭಕ್ತಿ ಮೆರೆದರು. ದಾರಿಯುದ್ದಕ್ಕೂ ಕಿಕ್ಕಿರಿದು ನಿಂತಿದ್ದ ಭಕ್ತ ಸಮೂಹ ಭಗವಂತನ ಸ್ಮರಣೆ ಮಾಡಿತು. ಈ ಸಂದರ್ಭದಲ್ಲಿ ಜೈಶ್ರೀರಾಮ ಸಮಿತಿಯವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಅರಕಲಗೂಡು ವೃತ ನಿರೀಕ್ಷಕರು ವಸಂತ್ ಕುಮಾರ್, ಕೊಣನೂರು ಠಾಣೆ ಪಿ.ಎಸ್.ಐ. ಮರಿಯಪ್ಪ, ಆರ್, ಬ್ಯಾಳಿ ಹಾಗೂ ಸಿಬ್ಬಂದಿಯವರು ಪೊಲೀಸ್ ಬಂದೋಬಸ್ತ್ ಮಾಡಿದ್ದರು.