ಕನ್ನಡಪ್ರಭ ವಾರ್ತೆ ಹಾಸನ
ನಗರದ ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಹಾಸನ ರವರ ವತಿಯಿಂದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ೨೦೨೪-೨೫ ನೇ ಸಾಲಿನ ವಾರ್ಷಿಕ ಸಂಚಿಕೆ ಜ್ಞಾನ ಸೌರಭ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸದರಿ ಕಾಲೇಜಿಗೆ ಅದರಲ್ಲೂ ಹೆಣ್ಣುಮಕ್ಕಳು ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ ಎಂದರಲ್ಲದೆ, ಎಲ್ಲರೂ ಚೆನ್ನಾಗಿ ಓದುವುದರ ಮೂಲಕ ಸಾಧನೆ ಮಾಡಿ ತಮ್ಮ ಕುಟುಂಬ, ನೆರೆಹೊರೆಯವರಿಗೆ ಸಹಾಯವನ್ನು ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜು ೭೫ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ವೇದಿಕೆ ಮಾಡಲು ಕಾಲೇಜಿನಲ್ಲಿ ಬೇಡಿಕೆಯನ್ನು ಇಟ್ಟಿದ್ದೀರಿ. ಶೀಘ್ರವೇ ಇದಕ್ಕೆ ಗುದ್ದಲಿ ಪೂಜೆಯನ್ನು ಮಾಡಲಾಗುತ್ತದೆ ಎಂದರು. ಇದಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ ಹಾಗಾಗಿ ಹಂತ ಹಂತವಾಗಿ ಈ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.ಬೂಕರ್ ಪ್ರಶಸ್ತಿ ವಿಜೇತರಾದ ನಮ್ಮ ಜಿಲ್ಲೆಯ ಲೇಖಕಿ ಬಾನು ಮುಷ್ತಾಕ್ ಅವರ "ಎದೆಯ ಹಣತೆ " ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳು ಓದಿ ಎಂದರಲ್ಲದೆ, ಅವರ ರೀತಿಯಲ್ಲಿಯೇ ಎಲ್ಲಾ ಮಕ್ಕಳು ಸಾಧನೆ ಮಾಡಿದೊಡ್ಡ ಮಟ್ಟದಲ್ಲಿ ಬೆಳೆಯಿರಿ ಎಂದು ಕಿವಿಮಾತು ಹೇಳಿದರು.