- ಜೈಲು ಶಿಕ್ಷೆ ಜತೆಗೆ 5 ಸಾವಿರ ರು. ದಂಡ
- ವಿಚಾರಣಾ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್- ತುಮಕೂರು ಜಿಲ್ಲೆ ಕೊರಟಗೆರೆ ಬಳಿ ನಡೆದ ಘಟನೆ ಬಗ್ಗೆ ತೀರ್ಪುಕನ್ನಡಪ್ರಭ ವಾರ್ತೆ ಬೆಂಗಳೂರು
ಅತಿವೇಗದ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆಯಿಂದ ಪಾದಚಾರಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ವ್ಯಕ್ತಿಯೋರ್ವನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ಐದು ಸಾವಿರ ರು. ದಂಡವನ್ನು ಹೈಕೋರ್ಟ್ ಕಾಯಂಗೊಳಿಸಿದೆ.ಪ್ರಕರಣದಲ್ಲಿ ತಮಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ತುಮಕೂರು ಜಿಲ್ಲೆಯ ಕೊರಟಗರೆ ತಾಲೂಕಿನ ಚಿನ್ನಹಳ್ಳಿ ಗ್ರಾಮದ ನಿವಾಸಿ ಹನುಮಂತರಾಯಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರ ಪೀಠ ಈ ಆದೇಶ ಮಾಡಿದೆ.ಅಲ್ಲದೆ, ಅಧಿಕೃತ ಚಾಲನಾ ಪರವಾನಗಿ ಮತ್ತು ವಿಮಾ ಪಾಲಿಸಿ ಹೊಂದಿರದ ವಾಹನಗಳ ಅಪಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಿರುವುದನ್ನು ನ್ಯಾಯಾಲಯ ನಿರಂತರ ಗಮನಿಸುತ್ತಿದೆ. ಯಾವುದೇ ಸಂಚಾರ ನಿಯಮ ಹಾಗೂ ಕಾನೂನು ಇಲ್ಲವೆಂಬಂತೆ ಮಾನ್ಯತೆ ಹೊಂದಿರುವ ಯಾವುದೇ ದಾಖಲೆಗಳಿಲ್ಲದೆ ಯುವಕರು ಉತ್ಸಾಹ ಮತ್ತು ಸಾಹಸ ಮನೋಭಾವದಿಂದ ವಾಹನ ಚಲಾಯಿಸಿ ಅಪಘಾತ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೈಕೋರ್ಟ್ ಇದೇ ವೇಳೆ ಬೇಸರ ವ್ಯಕ್ತಪಡಿಸಿತು.ಪ್ರಕರಣದ ವಿವರ:
2012ರ ಜು.23ರಂದು ಅರ್ಜಿದಾರ ಹನುಮಂತರಾಯಪ್ಪ (35) ಕೊರಟಗೆರೆ-ಊರ್ಡಿಗೆರೆ ರಸ್ತೆಯ ಇರಕಸಂದ್ರ ಕಾಲೋನಿಯ ಪಂಚರ್ ಶಾಪ್ ಎದುರು ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿರಬೇಕಾದರೆ ಪಾದಚಾರಿ ಪರಮೇಶಯ್ಯಗೆ ಡಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ ಪರಮೇಶ್ವಯ್ಯ ಎಂಬುವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಠಾಣಾ ಪೊಲೀಸರು, ತನಿಖೆ ಪೂರ್ಣಗೊಳಿಸಿ ಹನುಮಂತರಾಯಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯವು ನಿರ್ಲಕ್ಷ್ಯ ಮತ್ತು ಅತಿವೇಗದಿಂದ ವಾಹನ ಚಲಾಯಿಸಿ ಮಾನವ ಜೀವಕ್ಕೆ ಅಪಾಯ ಉಂಟು ಮಾಡಿದ (ಐಪಿಸಿ ಸೆಕ್ಷನ್ 279) ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ (ಸೆಕ್ಷ್ 304-ಎ) ಪ್ರಕರಣದಲ್ಲಿ ಹನುಮಂತರಾಯಪ್ಪನನ್ನು ದೋಷಿಯಾಗಿ ತೀರ್ಮಾನಿಸಿ, ಆರು ತಿಂಗಳ ಕಠಿಣ ಜೈಲು ಮತ್ತು ಐದು ಸಾವಿರ ರು. ದಂಡ ವಿಧಿಸಿ 2014ರ ಮಾ.28ರಂದು ಆದೇಶಿಸಿತ್ತು. ಈ ಆದೇಶವನ್ನು ಮಧುಗಿರಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು. ಇದರಿಂದ ಆತ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಸಹ ವಿಚಾರಣಾ ನ್ಯಾಯಾಲಯಗಳ ಆದೇಶವನ್ನು ಕಾಯಂಗೊಳಿಸಿದೆ.ನಿರ್ಲಕ್ಷ್ಯದಿಂದ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಕನಿಷ್ಠ ಆರು ತಿಂಗಳ ಜೈಲು ವಿಧಿಸುವ ಅಗತ್ಯವಿದೆ ಎಂದು ಸುಪ್ರಿಂ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಹನುಮಂತರಾಯಪ್ಪ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿರುವುದು ಸಾಬೀತಾಗಿದೆ. 2012ರಿಂದ ಆರೋಪಿ ಈ ಪ್ರಕರಣವನ್ನು ಎದುರಿಸುತ್ತಿದ್ದಾನೆ. ಪ್ರಕರಣದ ಸತ್ಯಾಂಶಗಳು ಮತ್ತು ದಾಖಲೆಗಳನ್ನುಪರಿಶೀಲಿಸಿದಾಗ, ವಿಚಾರಣಾ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯ ಹನುಮಂತರಾಯಪ್ಪನನ್ನು ದೋಷಿಯಾಗಿ ಪರಿಗಣಿಸಿ ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿರುವುದು ಸೂಕ್ತವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.