ಉಚಿತ ಚಿಕಿತ್ಸೆಯ ಪ್ರಯೋಜನ ಪಡೆಯಬೇಕು: ಡಾ. ಗೋಪಾಲಕೃಷ್ಣ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಉಚಿತ ಚಿಕಿತ್ಸೆಯ ಪ್ರಯೋಜನ ಪಡೆಯಬೇಕು: ಡಾ. ಗೋಪಾಲಕೃಷ್ಣ

ನಗರದ ಹೆರಿಗೆ ಆಸ್ಪತ್ರೆಯಲ್ಲಿ ಸಾಮಾಜಿಕ ಜಾಗೃತಿ- ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಒಆರ್ ಎಸ್ ಚಿಕಿತ್ಸೆ ತೀವ್ರತರವಾಗಿ ಬಾಧಿಸುವ ಅತಿಸಾರ ಬೇಧಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಅಭಿಪ್ರಾಯ ಪಟ್ಟರು. ನಗರದ ಹೆರಿಗೆ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಾಮಾಜಿಕ ಜಾಗೃತಿ ಹಾಗೂ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯರು ಮತ್ತು ದಾದಿಯರು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಅತಿಸಾರದಂತ ಕಾರ್ಯಕ್ರಮ ಯಶಸ್ವಿ ಯಾಗಲು ಸಾಧ್ಯ. ಜೀವರಕ್ಷಕಗಳಾದ ಒಆರ್ ಎಸ್ ಜಿಂಕ್‌ ಚಿಕಿತ್ಸೆಯ ಪಾತ್ರಗಳ ಬಗ್ಗೆಯೂ ಮಕ್ಕಳ ತಾಯಂದಿರಿಗೆ ಮನವರಿಕೆ ಮಾಡಬೇಕಿದೆ ಎಂದು ಹೇಳಿದರು.

ಅತಿಸಾರ ಉಂಟಾದಾಗ ಒಆರ್ ಎಸ್ ಸೇವಿಸುವ ಮೂಲಕ ಶೇ.70 ರೋಗಿಗಳು ಗುಣಮುಖರಾಗಿದ್ದಾರೆ. ಇದರ ಮಹತ್ವವನ್ನು ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಮುಟ್ಟಿಸುತ್ತಿರುವುದು ಶ್ಲಾಘನೀಯ ಎಂದರು. ಮಕ್ಕಳಲ್ಲಿ ಅತಿಸಾರ ಉಂಟಾದಾಗ ನೀರಿನ ಕೊರತೆ ಆಗದಂತೆ ಒಆರ್ ಎಸ್ ತಡೆಯುತ್ತದೆ. ಆದ್ದರಿಂದ ಇಂತಹ ಒಆರ್‌ ಎಸ್‌ ಬಗ್ಗೆ ಮಕ್ಕಳ ವೈದ್ಯರು ತಾಯಂದಿರಿಗೆ ಇದರ ಮಹತ್ವ ಮತ್ತು ಸೇವಿಸುವ ವಿಧಾನಗಳನ್ನು ಹೇಳಿಕೊಟ್ಟಾಗ ಅತಿಸಾರದಿಂದಾಗುವ ಸಾವಿನ ಸಂಖ್ಯೆ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಅತಿಸಾರ ಬೇಧಿ ಪ್ರಾರಂಭವಾದಾಗಲೇ ಪ್ರಾಥಮಿಕ ಹಂತದಿಂದ ಔಷಧ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಜೊತೆಗೆ ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಅಶ್ವಥ್‌ಬಾಬು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಕಲ್ಪನ, ಡಾ. ಚಂದ್ರೇಗೌಡ, ಡಾ. ಸೀಮಾ ಭಾಗವಹಿಸಿದ್ದರು. ಡಾ. ರವೀಂದ್ರ, ಡಾ. ಶಶಿಕಲಾ, ಡಾ. ಹರೀಶ್‌ಬಾಬು ಉಪನ್ಯಾಸ ನೀಡಿದರು.

---ಬಾಕ್ಸ್‌--

28ರವರೆಗೆ ಕಾರ್ಯಕ್ರಮ

ತೀವ್ರತರ ಅತಿಸಾರ ನಿಯಂತ್ರಣ ಕಾರ್ಯಕ್ರಮ ಜಿಲ್ಲೆಯಾದ್ಯಂತ ನ.15 ರಿಂದ ಆರಂಭವಾಗಿದ್ದು, 28 ರವರೆಗೆ ನಡೆಯಲಿದೆ ಎಂದು ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮಂಜುನಾಥ್‌ ಮಾಹಿತಿ ನೀಡಿದರು.

16 ಕೆಸಿಕೆಎಂ 1ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಸಾಮಾಜಿಕ ಜಾಗೃತಿ ಹಾಗೂ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉದ್ಘಾಟಿಸಿದರು.

Share this article