ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘ, ಉಡುಪಿ ಆಶ್ರಯದಲ್ಲಿ ಹಾಗೂ ಕ್ರೀಡಾಕೂಟ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ ಮಲೆಕುಡಿಯ ಸಮಾಜ ಬಾಂಧವರ ಅಂತರ್ ರಾಜ್ಯಮಟ್ಟದ “ಕ್ರೀಡಾ ವೈಭವ–2026” ಹಾಗೂ ಎಲ್ಲಾ ಸಮುದಾಯ ಬಾಂಧವರ ಮುಕ್ತ ಹಗ್ಗಜಗ್ಗಾಟ ಮತ್ತು ಸಭಾ ಕಾರ್ಯಕ್ರಮ ಏ. 11ರಂದು ಹೊಸ್ಮಾರಿನ ಗುರುಕೃಪಾ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆಯಿತು. ಮೂಲ ಕಾರಣ ಶಿಕ್ಷಣ: ಬೆಂಗಳೂರಿನ ಆರ್ಯ ಈಡಿಗ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಹಿಂದುಳಿದ ಸಮುದಾಯಗಳು ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿರುವುದು ಆಶಾದಾಯಕ ಸಂಗತಿ ಎಂದು ಹೇಳಿದರು. ಇದಕ್ಕೆ ಮೂಲ ಕಾರಣ ಶಿಕ್ಷಣವಾಗಿದ್ದು, ಮಲೆಕುಡಿಯರು ಸೇರಿದಂತೆ ಎಲ್ಲಾ ತಳ ಸಮುದಾಯಗಳು ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದು ಕರೆ ನೀಡಿದರು. ಕ್ರೀಡಾಕೂಟ ಸಮಿತಿ ಅಧ್ಯಕ್ಷ ಕರ್ಣ ನೂರಾಳ್ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, ಪಶ್ಚಿಮ ಘಟ್ಟದ ಉಳಿವಿನಲ್ಲಿ ಮಲೆಕುಡಿಯ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎನ್.ಎಂ. ಭಾಗವಹಿಸಿದ್ದರು. ಈ ಸಂದರ್ಭ ಸೇನೆಯಲ್ಲಿ 24 ವರ್ಷ 19 ದಿನಗಳ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಆನಂದ ಕಬ್ಬಿನಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ವತಿಯಿಂದ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ನಾಟಿ ವೈದ್ಯೆ ಗುಲಾಬಿ ಗೌಡ್ತಿ (ಕಬ್ಬಿನಾಲೆ) ಅವರನ್ನು ಸನ್ಮಾನಿಸಲಾಯಿತು. ಪುರುಷರ ವಾಲಿಬಾಲ್‌ನಲ್ಲಿ ಚೆನ್ನಯ ಸೈಬರ್ ಸವಣಾಲು–A ತಂಡ ಪ್ರಥಮ ಹಾಗೂ ಚೆನ್ನಯ ಸೈಬರ್ ಸವಣಾಲು–B ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಮಹಿಳೆಯರ ತ್ರೋಬಾಲ್‌ನಲ್ಲಿ ದುರ್ಗಾಪರಮೇಶ್ವರಿ ಅಂಡಾರು ತಂಡ ಪ್ರಥಮ ಹಾಗೂ ಚಾಮುಂಡೇಶ್ವರಿ ಫ್ರೆಂಡ್ಸ್ ಧರ್ಮಸ್ಥಳ ತಂಡ ದ್ವಿತೀಯ ಸ್ಥಾನ ಪಡೆದವು. ಶ್ವೇತಾ (ಧರ್ಮಸ್ಥಳ) ಬೆಸ್ಟ್ ರಿಸೀವರ್, ಶೋಭಾ ಆಲ್ ರೌಂಡರ್ ಹಾಗೂ ಮಲ್ಲಿಕಾ ಬೆಸ್ಟ್ ಅಟ್ಯಾಕರ್ ಪ್ರಶಸ್ತಿಗೆ ಪಾತ್ರರಾದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಚಾಮುಂಡೇಶ್ವರಿ ಫ್ರೆಂಡ್ಸ್ ಧರ್ಮಸ್ಥಳ ತಂಡ ಪ್ರಥಮ, ಶ್ರೀ ಮೂಜಿಲ್ನಯಾ ಕನ್ಯಾಲು ತಂಡ ದ್ವಿತೀಯ, ದುರ್ಗಾಪರಮೇಶ್ವರಿ ಅಂಡಾರು ಬಿ ತಂಡ ತೃತೀಯ ಹಾಗೂ ದುರ್ಗಾಪರಮೇಶ್ವರಿ ಅಂಡಾರು ಎ ತಂಡ ಚತುರ್ಥ ಸ್ಥಾನ ಪಡೆದವು. ಮುಕ್ತ ಹಗ್ಗಜಗ್ಗಾಟದಲ್ಲಿ ಮೂಜಿಲ್ನಯಾ ಫ್ರೆಂಡ್ಸ್ ತಂಡ ಪ್ರಥಮ, ಕನ್ಯಾಲು ಫ್ರೆಂಡ್ಸ್ ತಂಡ ದ್ವಿತೀಯ ಮತ್ತು ತೃತೀಯ ಸ್ಥಾನ ಹಾಗೂ ಮೂಜಿಲ್ನಯಾ ಈದು ತಂಡ ಚತುರ್ಥ ಸ್ಥಾನ ಗಳಿಸಿತು. ಕೆಜಿ ವಿಭಾಗದ ಹಗ್ಗಜಗ್ಗಾಟದಲ್ಲಿ ವೀರಾಂಜನೇಯ ಬಿ ತಂಡ ಪ್ರಥಮ, ವೀರಾಂಜನೇಯ ಎ ತಂಡ ದ್ವಿತೀಯ, ಸ್ವಾಮಿ ಕೊರಗಜ್ಜ ಬೆಳ್ತಂಗಡಿ ತಂಡ ತೃತೀಯ ಹಾಗೂ ಮೂಜಿಲ್ನಯಾ ಕನ್ಯಾಲು ತಂಡ ಚತುರ್ಥ ಸ್ಥಾನ ಪಡೆದವು.
ಹಗ್ಗಜಗ್ಗಾಟ ಪಂದ್ಯಾಟವನ್ನು ವಿಜಯ್ ಗೌಡ ಅತ್ತಾಜೆ ನಿರೂಪಿಸಿದರು. ವೇದಿಕೆಯಲ್ಲಿ ಈದು ಮೂಜಿಲ್ನಾಯಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಅಶೋಕ್ ಕುಮಾರ್ ಜೈನ್, ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು, ನಾರಾಯಣ ಪಂಡಿತ್ ಮೂಡುಕೋಡಿ, ಜಿನೇಂದ್ರ ಜೈನ್, ಸುರೇಶ್ ಕುಮಾರ್ ಶೆಟ್ಟಿ ಹೊಸ್ಮರು, ನಾರಾಯಣ ಸುವರ್ಣ, ಪ್ರಶಾಂತ ಚಿತ್ತಾರ, ಸುಂದರ ಬಿ., ಪ್ರಮೋದ್ ಕುಲಾಲ್, ರಜತ್ ಮೋಹನ್, ಜಗನ್ನಾಥ ದೇವಾಡಿಗ ಹಾಗೂ ಗುರುಕೃಪಾ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ರೋಹಿತ್ ಉಪಸ್ಥಿತರಿದ್ದರು. ಪ್ರತ್ವಿಕ್ ಪೇರಡ್ಕ ಪ್ರಾರ್ಥಿಸಿದರು. ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ವಂದಿಸಿದರು.