ಕನ್ನಡಪ್ರಭ ವಾರ್ತೆ ಮೈಸೂರು
ಹೆಣ್ಣು ಮಕ್ಕಳು ಸಮಾಜ ಬದಲಾಯಿಸುವ ಮುನ್ನ ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ನಾಲ್ಕು ಗೋಡೆಗಳಿಗೆ ಹೆಣ್ಣು ಮಕ್ಕಳು ಸೀಮಿತಗೊಳಿಸಬಾರದು. ಪೋಷಕರು ಸರಿಯಾಗಿ ಶಿಕ್ಷಣ ಕೊಡಿಸಿದರೆ ಮಹಿಳೆಯರು ಸಬಲರಾಗುತ್ತಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್. ಮಂಜು ತಿಳಿಸಿದರು.ನಗರದ ಪುರಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು (ಆರ್ ಎಲ್ಎಚ್ ಪಿ) ಧ್ವನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ಇಷ್ಟು ವರ್ಷಗಳ ಕಳೆದರೂ ಇಂದಿಗೂ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಶಾಲೆ ಬಿಡುವ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಯಬೇಕು ಎಂದರೆ, ಮಕ್ಕಳಿಗೆ ಶಿಕ್ಷಣ ಕೊಡಬೇಕು. ಹೀಗಾಗಿ, ಪಾಲಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ಮಕ್ಕಳ ಶಿಕ್ಷಣ ನೆರವಾಗಬೇಕು. ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು. ಯಾವುದೇ ಹಿಂಸೆಗೆ ಒಳಗಾಗದೆ ನೆಮ್ಮದಿಯ ಜೀವನವನ್ನು ನಡೆಸಬಹುದು ಎಂದು ಅವರು ಹೇಳಿದರು. ನಾನು ಪಿಯುಸಿ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ನನ್ನಜ್ಜಿ, ನನ್ನಪ್ಪನ ಮೇಲೆ ಒತ್ತಡ ಹಾಕಿ ಬಾಲ್ಯವಿವಾಹ ಮಾಡಿಸಿದರು. ಸತತ 13 ವರ್ಷಗಳ ದೌರ್ಜನ್ಯಕ್ಕೆ ಒಳಗಾಗದೆ. 4 ವರ್ಷದ ಮಗು, 2 ವರ್ಷದ ಹೆಣ್ಣು ಮಗಳಿದ್ದ ನನಗೆ ಓದಬೇಕು ಎನ್ನುವ ಆಸೆಯು ಕಿಡಿಯಾಗಿ ಪರಿಣಮಿಸಿತು. ನನ್ನ ಗಂಡನ ಬಳಿ ನಾನು ಓದಬೇಕು ಎಂದೆ. ಅದಕ್ಕಾವರು ಹಿಂದೂ- ಮುಂದೂ ನೋಡದೆ ಓದು ಎನ್ನುತ್ತಾ ನನ್ನ ಬೆನ್ನಿಗೆ ನಿಂತರು, ಅವಕಾಶ ಮಾಡಿಕೊಟ್ಟರು. ಯಾರಿಗೂ ಹೇಳದೆ ಕಾನೂನು ಪದವಿ ಅಧ್ಯಯನ ಮಾಡಿದೆ. ಈಗ ನಾನು ವಕೀಲರಾಗಿಳಾಗಿ ಬೆಳೆದಿರುವೆ. ನನಗೆ ನನ್ನ ಅಪ್ಪ- ಅಮ್ಮ ಸರಿಯಾಗಿ ವಿದ್ಯಾಭ್ಯಾಸ ಕೊಡಿಸಿದ್ದರೇ ಇನ್ನೂ ಉನ್ನತ ಸ್ಥಾನಕ್ಕೆ ಹೋಗುತ್ತಿದ್ದೇನೋ ಅನಿಸುತ್ತದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು. ಪತ್ರಕರ್ತೆ ರಶ್ಮಿ ಕೋಟಿ ಮಾತನಾಡಿ, ಮಹಿಳೆಯರಿಗೆ ವ್ಯವಸ್ಥಿತಿವಾಗಿ ಸವಲತ್ತುಗಳನ್ನು ಕೊಟ್ಟರೂ ಸಮಾಜ ಹೊಟ್ಟೆ ಹುರಿದುಕೊಳ್ಳಲಿದೆ. ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಹೀಗೆ ಮಹಿಳಾ ಸವಲತ್ತುಗಳನ್ನು ಕಂಡು ಹೊಟ್ಟೆ ಹುರಿದುಕೊಳ್ಳಲಿದೆ. ಹೀಗಾಗಿ, ದೇಶದಲ್ಲಿ ಈ ನಡುವೆ ಸ್ತ್ರೀವಾದ ತತ್ವವೇ ಮಹಾ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿಷಾದಿಸಿದರು.ಇದೇ ವೇಳೆ ಮಹಿಳಾ ಸಶಕ್ತತೆ ಕುರಿತು ನಿವೃತ್ತ ಪ್ರಾಧ್ಯಾಪಕಿ ಡಾ.ಎಂ. ಇಂದಿರಾ ವಿಚಾರ ಮಂಡಿಸಿದರು. ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಸಂತಾ ಅಧ್ಯಕ್ಷತೆ ವಹಿಸಿದ್ದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್. ರೋಹಿತ್, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಮೊದಲಾದವರು ಇದ್ದರು.----ಕೋಟ್...ಹೆಣ್ಣು ಮಕ್ಕಳ ಕೂತರು, ನಿಂತರು, ಸುಮ್ಮನಿದ್ದರು ಕೊಂಕು ಮಾತನಾಡುತ್ತಾರೆ, ಅವಮಾನಿಸುತ್ತಾರೆ. ಇದಕ್ಕೆ ಕಿವಿಗೊಡಬಾರದು. ನಮ್ಮ ಗುರಿ ಸಾಧಿಸಲು ಛಲವಾದಿಗಳಾಗಿ ದೃಢತೆಯಿಂದ ಕೆಲಸ ಮಾಡಬೇಕು.- ಎಸ್. ಮಂಜು, ಸದಸ್ಯೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ