ಮಳೆಗಾಲದೊಳಗೆ ಶಿರಾಡಿ ಕಾಮಗಾರಿ ಪೂರ್ಣವಾಗೋದು ಡೌಟ್‌

KannadaprabhaNewsNetwork |  
Published : Feb 19, 2025, 12:47 AM IST
18ಎಚ್ಎಸ್ಎನ್12 : ತಾಲೂಕಿನ ಕಪ್ಪಳಿ ಗ್ರಾಮ ಸಮೀಪ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ. | Kannada Prabha

ಸಾರಾಂಶ

ಸಕಲೇಶಪುರದಿಂದ ಹೆಗದ್ದೆ ಗ್ರಾಮದವರಗಿನ ೧೨ ಕಿ.ಮೀ. ಹೆದ್ದಾರಿಯಲ್ಲಿ ಬಾರಿಹೊಂಡ ಹಾಗೂ ಬೆಟ್ಟಸಾಲು ಎದುರಾಗಿರುವುದು ಗುತ್ತಿಗೆದಾರರಿಗೆ ಸವಾಲಾಗಿ ಪರಿಣಮಿಸಿದೆ. ೨೦೨೪ರ ಮಳೆಗಾಲದ ನಂತರದ ಇದುವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ೧೨ ಕಿ.ಮೀ. ಪೈಕಿ ದೋಣಿಗಾಲ್ ಗ್ರಾಮದವರೆಗಿನ ನಾಲ್ಕು ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನುಳಿದ ೮ ಕಿ.ಮೀ. ಕಾಮಗಾರಿಯಲ್ಲಿ ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆಯಾದರೂ ವಾಹನ ಸಂಚಾರಕ್ಕೆ ಮುಕ್ತಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬೆಂಗಳೂರು-ಮಂಗಳೂರು ರಾಷ್ಟ್ರಿಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮಳೆಗಾಲದ ಮುನ್ನ ಮುಗಿಯುವುದು ಅನುಮಾನವಾಗಿದೆ.

೨೦೧೬ರಲ್ಲಿ ಆರಂಭವಾದ ಹಾಸನದಿಂದ ಸಕಲೇಶಪುರ ತಾಲೂಕಿನ ಹೆಗದ್ದೆ ಗ್ರಾಮದವರೆಗಿನ 45 ಕಿ.ಮೀ. ಕಾಮಗಾರಿಯನ್ನು 2019ರ ಏಪ್ರೀಲ್ ತಿಂಗಳಿಗೆ ಮುಗಿಸುವ ಗುರಿ ಹೊಂದಲಾಗಿತ್ತಾದರೂ 2019ರವರೆಗೆ ಕಾಮಗಾರಿಯೇ ಆರಂಭವಾಗದ ಪರಿಣಾಮ ಮಧ್ಯಪ್ರವೇಶಿಸಿದ ಹೆದ್ದಾರಿ ಸಚಿವಾಲಯ ಮೂಲ ಗುತ್ತಿಗೆದಾರರ ಬದಲಿಗೆ, ಬದಲಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ 2023ರ ಏಪ್ರಿಲ್ ತಿಂಗಳ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಲು ಗಡವು ನೀಡಿತ್ತು. ಗುತ್ತಿಗೆ ಸಂಸ್ಥೆ 2023 ಜೂನ್ ತಿಂಗಳ ವೇಳೆಗೆ ತಾಲೂಕಿನ ಮಠಸಾಗರ ಗ್ರಾಮದವರಗಿನ ೨೭ ಕಿ.ಮೀ. ಕಾಮಗಾರಿ ಮುಕ್ತಾಯಗೊಳಿಸಲಷ್ಟೆ ಯಶಸ್ವಿಯಾಗಿತ್ತು. ೨೦೨೪ರ ಬೇಸಿಗೆಯಲ್ಲಿ ಅಲ್ಪಸ್ವಲ್ಪ ಕಾಮಗಾರಿ ಬಾಕಿಉಳಿದಿದ್ದ ಪಟ್ಟಣದ ಬೈಪಾಸ್ ರಸ್ತೆ ಕಾಮಗಾರಿಯನ್ನು ಮುಕ್ತಾಯಗೊಳಿಸುವ ಮೂಲಕ ೨೦೨೪ ಮೇ ತಿಂಗಳಿನಲ್ಲಿ ಬೈಪಾಸ್ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಮೂಲಕ ಸಕಲೇಶಪುರದವರಗಿನ ೩೩ ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಲು ಯಶಸ್ವಿಯಾಗಿತ್ತು. ಆದರೆ ಸಕಲೇಶಪುರದಿಂದ ಹೆಗದ್ದೆ ಗ್ರಾಮದವರಗಿನ ೧೨ ಕಿ.ಮೀ. ಹೆದ್ದಾರಿಯಲ್ಲಿ ಬಾರಿಹೊಂಡ ಹಾಗೂ ಬೆಟ್ಟಸಾಲು ಎದುರಾಗಿರುವುದು ಗುತ್ತಿಗೆದಾರರಿಗೆ ಸವಾಲಾಗಿ ಪರಿಣಮಿಸಿದೆ. ೨೦೨೪ರ ಮಳೆಗಾಲದ ನಂತರದ ಇದುವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ೧೨ ಕಿ.ಮೀ. ಪೈಕಿ ದೋಣಿಗಾಲ್ ಗ್ರಾಮದವರೆಗಿನ ನಾಲ್ಕು ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನುಳಿದ ೮ ಕಿ.ಮೀ. ಕಾಮಗಾರಿಯಲ್ಲಿ ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆಯಾದರೂ ವಾಹನ ಸಂಚಾರಕ್ಕೆ ಮುಕ್ತಗೊಂಡಿಲ್ಲ.

ಸವಾಲಿನ ಪ್ರದೇಶಗಳು:

ಹೆದ್ದಾರಿ ಕಾಮಗಾರಿಗೆ ದೋಣಿಗಾಲ್ ಗ್ರಾಮ ಸಮೀಪ ಸುಮಾರು ಐದುನೂರು ಮೀಟರ್‌ನಷ್ಟು ರಸ್ತೆ ಕುಸಿದಿದ್ದು ಏಕಪಥವಾಗಿ ಬದಲಾಗಿದೆ. ಇಲ್ಲಿ ರಸ್ತೆ ನಿರ್ಮಿಸಬೇಕಿದ್ದರೆ ನೂರು ಮೀಟರ್ ಆಳದಿಂದ ಮಣ್ಣನ್ನು ತುಂಬಿ ಮತ್ತೊಂದು ಪಥದ ರಸ್ತೆ ನಿರ್ಮಿಸಬೇಕಿದೆ ತಪ್ಪಿದಲ್ಲಿ ಕಾಂಕ್ರೀಟ್ ಪಿಲ್ಲರ್‌ಗಳನ್ನು ಆಳವಡಿಸಿ ಮತ್ತೊಂದು ಪಥ ನಿರ್ಮಾಣ ಮಾಡಬೇಕಿದೆ. ಇಂತಹ ಸವಾಲಿನ ಕೆಲಸ ಇನ್ನೂ ಆರಂಭವೇ ಆಗದಿರುವುದು ಮಳೆಗಾಲಕ್ಕೂ ಮುನ್ನ ಚತುಷ್ಪಥ ಕಾಮಗಾರಿ ಮುಕ್ತಾಯಗೊಳ್ಳುವ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಇದಲ್ಲದೆ ಇದೇ ಪ್ರದೇಶದಲ್ಲಿ ಎಂಜಿನಿಯರ್‌ಗಳ ಅಜ್ಞಾನದ ಪರಿಣಾಮ ಬೃಹತ್ ಪ್ರಪಾತಕ್ಕೆ ಅಡ್ಡಲಾಗಿ ಭಾರಿ ಪ್ರಮಾಣದ ಮಣ್ಣು ಹಾಕಿದ್ದ ಪರಿಣಾಮ ನಿರ್ಮಾಣವಾಗಿದ್ದ ದೊಡ್ಡ ಕೃತಕ ಹೊಂಡ ೨೦೨೩ ಮಳೆಗಾಲದಲ್ಲಿ ಒಡೆದಿದ್ದರಿಂದ ತಳಭಾಗದಲ್ಲಿದ್ದ ಸುಮಾರು ೧೦ ರೈತರ ಸುಮಾರು ೨೧ ಎಕರೆ ಭೂಮಿ ಮಣ್ಣಿನಿಂದ ಅವೃತ್ತವಾಗಿದೆ. ಇದರಿಂದ ಆಕ್ರೋಶಗೊಂಡಿರುವ ರೈತರು ಹೆದ್ದಾರಿ ಅಧಿಕಾರಿಗಳು ಜಮೀನಿನ ನಷ್ಟ ಭರಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪರಿಣಾಮ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದ ಹೊರತು ಇಲ್ಲಿ ಕಾಮಗಾರಿಗೆ ಅವಕಾಶವೇ ಇಲ್ಲದಾಗಿದೆ. ಇದು ಕಾಮಗಾರಿ ಮುಕ್ತಾಯಕ್ಕೆ ಅಡ್ಡಿಯಾಗಿದೆ.

ತಡೆಗೋಡೆ ನಿರ್ಮಿಸಬೇಕಿದೆ:

ಹೆದ್ದಾರಿ ಕಾಮಗಾರಿ ಆರಂಭವಾದ ೯ ವರ್ಷದಿಂದ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸುತಿರುವ ದೊಡ್ಡತಪ್ಪಲೆ ಗ್ರಾಮ ಸಮೀಪ ಬೃಹತ್‌ ಗಾತ್ರದ ತಡೆಗೋಡೆ ನಿರ್ಮಿಸಬೇಕಿದೆ. ಆದರೆ, ಇದಕ್ಕೆ ಹೆಚ್ಚಿನ ಅನುದಾನ ಬೇಕಿದ್ದು ಹೆಚ್ಚುವರಿಯಾಗಿ ೨೮ ಕೋಟಿ ರು. ಅನುದಾನಕ್ಕಾಗಿ ಕಳೆದ ಒಂದು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಇದುವರೆಗೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಉತ್ತರ ನೀಡದ ಪರಿಣಾಮ ತಡೆಗೋಡೆ ನಿರ್ಮಾಣ ಕಾಮಗಾರಿ ಮರೀಚಿಕೆಯಾಗಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸದೆ ರಸ್ತೆ ನಿರ್ಮಿಸಿದರೂ ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಎದುರಾಗುವುದು ನಿಶ್ಚಿತವಾಗಿದೆ. ಇನ್ನೂ ಎತ್ತಿನಹೊಳೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಮಂದಗತಿಯ ಕಾಮಗಾರಿ ಮುಗಿಯವ ಬಗ್ಗೆ ಯಾರಿಗೂ ತಿಳಿಯದಾಗಿದೆ.

ಬದಲಿ ಮಾರ್ಗಕ್ಕೆ ಮನವಿ:

ಸದ್ಯ ದೋಣಿಗಾಲ್ ಗ್ರಾಮದಿಂದ ಕಪ್ಪಳಿ ಗ್ರಾಮದವರಗಿನ ೮ ಹೇರ್ಪಿನ್ ತಿರುವು ರಸ್ತೆಗಳನ್ನು ನೇರ ರಸ್ತೆಯನ್ನಾಗಿ ಮಾಡುವ ಕಾಮಗಾರಿಗಾಗಿ ಭಾರಿ ಪ್ರಮಾಣದ ಬೆಟ್ಟಗಳನ್ನು ಸಮತಟ್ಟುಗೊಳಿಸಿ ಪ್ರಪಾತಕ್ಕೆ ಮಣ್ಣು ತುಂಬುವ ಕೆಲಸ ನಡೆಯುತ್ತಿದೆ. ಆದರೆ, ಸರಾಗ ಕಾಮಗಾರಿಗೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಮಸ್ಯೆಯಾಗಿ ಕಾಡುತ್ತಿರುವುದರಿಂದ ಬದಲಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಪ್ರಾಧಿಕಾರ ಮನವಿ ಸಲ್ಲಿಸಿದೆ. ಪರಿಣಾಮ ಕಳೆದ ವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸತ್ಯಭಾಮ ರಾಷ್ಟ್ರೀಯ ಹೆದ್ದಾರಿ ೭೫ರ ಗುಡ್ಡಕುಸಿದಿರುವ ಪ್ರದೇಶ ಹಾಗೂ ದೋಣಿಗಾಲ್ ಗ್ರಾಮಸ್ಥರೊಂದಿಗೆ ಮಾತನಾಡಿ, ಕಾಮಗಾರಿಗೆ ಅಡ್ಡಿಯಾಗಿರುವ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟವರೊಂದಿಗೆ ಮಾತನಾಡಿ, ಶೀಘ್ರವೇ ಬಗೆಹರಿಸಲಾಗುವುದು. ಮಳೆಗಾಲದ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದು, ಕಾಮಗಾರಿ ಸರಾಗವಾಗಿ ನಡೆಯಲು ಅನುವಾಗುವಂತೆ ಕಪ್ಪಳಿಯಿಂದ ಹುಲ್ಲಹಳ್ಳಿ ಮಾರ್ಗವಾಗಿ ದೋಣಿಗಾಲ್ ತಲುಪುವ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಆದೇಶ ನೀಡಲಾಗುವುದು ಎಂದಿದ್ದರು. ಆದರೆ, ಜಿಲ್ಲಾಧಿಕಾರಿ ಪಟ್ಟಣಕ್ಕೆ ಭೇಟಿ ನೀಡಿ ಒಂದು ವಾರ ಕಳೆದರೂ ಬದಲಿ ಮಾರ್ಗದ ಬದಲಾಗಿ ಹೆದ್ದಾರಿಯಲ್ಲೇ ವಾಹನಗಳು ಸಂಚರಿಸುತ್ತಿವೆ.

----------------------------------------------------------- *ಹೇಳಿಕೆ1

ದೋಣಿಗಾಲ್ ಗ್ರಾಮ ಸಮೀಪ ಕುಸಿದಿರುವ ಹೆದ್ದಾರಿ ದುರಸ್ತಿಸವಾಲಿನ ಕೆಲಸವಾಗಿದ್ದು, ಇನ್ನೂ ಈ ಭಾಗದಲ್ಲಿ ಕೆಲಸವನ್ನೇ ಆರಂಭಿಸದ ಕಾರಣ ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಎದುರಾಗುವುದು ನಿಶ್ಚಿತ.

ಕಾಂತರಾಜ್, ದೋಣಿಗಾಲ್ ಗ್ರಾಮಸ್ಥ

*ಹೇಳಿಕೆ2

ದೊಡ್ಡತಪ್ಪಲೆ ಗ್ರಾಮ ಸಮೀಪ ಭಾರಿ ಪ್ರಮಾಣದ ಭೂಕುಸಿತಕ್ಕೆ ತಡೆಗೋಡೆ ನಿರ್ಮಿಸಲು ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರವೀಣ್‌ ಕುಮಾರ್, ಯೋಜನಾ ನಿರ್ದೇಶಕ,ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ