ವಿದ್ಯುತ್‌ ಕೊರತೆ ನೀಗಲು ಪಂಜಾಬ್‌, ಯುಪಿ ಜತೆ ಬ್ಯಾಂಕಿಂಗ್‌

KannadaprabhaNewsNetwork |  
Published : Feb 19, 2025, 12:47 AM IST
18ಕೆಡಿವಿಜಿ1, 2, 3-ದಾವಣಗೆರೆ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದರು. | Kannada Prabha

ಸಾರಾಂಶ

ಕೃಷಿ ಪಂಪ್‌ಸೆಟ್‌ಗೆ 7 ಗಂಟೆ ತ್ರಿಫೇಸ್‌ ವಿದ್ಯುತ್‌, ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ತಮ್ಮ ಸರ್ಕಾರದ ಬದ್ದನೀತಿಯಾಗಿದೆ. ಇದಕ್ಕಾಗಿ ಸೋಲಾರ್ ವಿದ್ಯುತ್ ಉತ್ಪಾದನೆಗೂ ಒತ್ತು ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

- ಕೃಷಿಗೆ 7, ಗೃಹ-ಕೈಗಾರಿಕೆಗೆ 24 ತಾಸು ವಿದ್ಯುತ್‌ ಪೂರೈಕೆಗೆ ಸರ್ಕಾರ ಬದ್ಧ: ಇಂಧನ ಸಚಿವ ಜಾರ್ಜ್‌ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಪಂಪ್‌ಸೆಟ್‌ಗೆ 7 ಗಂಟೆ ತ್ರಿಫೇಸ್‌ ವಿದ್ಯುತ್‌, ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ತಮ್ಮ ಸರ್ಕಾರದ ಬದ್ದನೀತಿಯಾಗಿದೆ. ಇದಕ್ಕಾಗಿ ಸೋಲಾರ್ ವಿದ್ಯುತ್ ಉತ್ಪಾದನೆಗೂ ಒತ್ತು ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಶಾಸಕರು, ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲವಾದರೂ, ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಸ್ಥಳಗಳಲ್ಲಿ ಮಾತ್ರ ನಿರ್ವಹಣೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸರ್ಕಾರದ ಬದ್ಧತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ರಾಜ್ಯದಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್ ಜಾರಿಯಲ್ಲಿಲ್ಲ ಎಂದು ಹೇಳಿದರು.

ಪಂಜಾಬ್‌, ಯುಪಿ ಜತೆ ವಿದ್ಯುತ್‌ ಬ್ಯಾಂಕಿಂಗ್‌:

ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆ ಸಹಜವಾಗಿಯೇ ಹೆಚ್ಚಾಗಿದೆ. ಪಂಜಾಬ್‌ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಂಡು, ಜೂನ್‌ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್‌ ಪೂರೈಸಿ, ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಉದ್ದೇಶಿಸಿದ್ದೇವೆ. ಗುಣಮಟ್ಟದ ವೋಲ್ಟೇಜ್ ಗಾಗಿ ಅಗತ್ಯವಿರುವಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿದಿನ 18,500 ಮೆಗಾ ವ್ಯಾಟ್ ವಿದ್ಯುತ್‌ ಬೇಡಿಕೆ ಇದೆ. ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ಸರಾಸರಿ ಬೇಡಿಕೆಗಿಂತ ಶೇ.10ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದು ಸಹಜ. ಕುಸುಮ್‌-ಸಿ ಯೋಜನೆಯಡಿ ಒಂದೂವರೆ ವರ್ಷದಲ್ಲಿ ಸೋಲಾರ್‌ನಿಂದ 3 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಈಗಾಗಲೇ ಕುಸುಮ್‌ ಯೋಜನೆಯಡಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದು, ಸೋಲಾರ್ ಪ್ಯಾನಲ್ ಅಳವಡಿಕೆ, ವಿದ್ಯುತ್ ಉತ್ಪಾದನೆ ಹಂತ, ಭೂಮಿ ಸಮತಟ್ಟು ಕೆಲಸ ಪ್ರಗತಿಯಲ್ಲಿದೆ. ಏಪ್ರಿಲ್‌ನಿಂದ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ, ಗ್ರಿಡ್ ಗೆ ಕಳಿಸುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಎಸ್ಕಾಂಗಳು ನಷ್ಟದಲ್ಲಿಲ್ಲ:

ಇಂಧನ ಇಲಾಖೆಯ ಯಾವುದೇ ಎಸ್ಕಾಂಗಳೂ ನಷ್ಟದಲ್ಲಿಲ್ಲ. ಆದರೆ, ಸರ್ಕಾರದಿಂದ ಸಾಕಷ್ಟು ಹಣ ಬರಬೇಕಿದ್ದು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದೇ ಕಂಪನಿಗಳಿಗೆ ಬರಬೇಕಾದ ಹಣ ಬಾಕಿ ಇದೆ. ಗ್ರಾ.ಪಂ.ಗಳು ಸ್ವಂತ ವಿದ್ಯುತ್ ಉತ್ಪಾದಿಸುವ ಯೋಜನೆ ಇದ್ದು, ದಾವಣಗೆರೆ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್‌ ಉತ್ಪಾದನೆ ಪ್ರಾಯೋಗಿಕ ಕಾರ್ಯಕ್ರಮಮವಾಗಿ ರೂಪಿಸಲಾಗುವುದು ಎಂದು ಹೇಳಿದರು.

ಗ್ರಾಪಂಗಳು ಕುಡಿಯುವ ನೀರು, ಬೀದಿದೀಪಕ್ಕೆ ಅಗತ್ಯ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಸ್ವಾವಲಂಬಿ ಆಗಬೇಕು. ಇದಕ್ಕಾಗಿ 400 ಎಕರೆ ಜಾಗ ಗುರುತಿಸಿ, ಸೋಲಾರ್ ಪ್ಯಾನಲ್‌ ಅಳವಡಿಸಿ, ಗ್ರಿಡ್‌ಗೆ ವಿದ್ಯುತ್ ನೀಡಿ, ಅಷ್ಟೇ ವಿದ್ಯುತ್ ವಾಪಸ್ ನೀಡಲಾಗುವುದು. ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಗ್ರಾಪಂ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಎಲ್ಲ ಎಸ್ಕಾಂಗಳ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಕೆಇಆರ್‌ಸಿ ಮಾಡುತ್ತದೆ. ಜನರ ಅಭಿಪ್ರಾಯ ಪಡೆದು, ದರ ಏರಿಕೆ ನಿರ್ಣಯ ನಿರ್ಧರಿಸುತ್ತದೆ. ಯಾರ ಹಸ್ತಕ್ಷೇಪವೂ ಇದಕ್ಕೆ ಇಲ್ಲ. ಕಳೆದ ವರ್ಷ ಯಾವುದೇ ವಿದ್ಯುತ್ ದರ ಏರಿಕೆಯಾಗಿರಲಿಲ್ಲ ಎಂದು ಜಾರ್ಜ್‌ ವಿವರಿಸಿದರು.

ಶಾಸಕರಾದ ಕೆ.ಎಸ್. ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಕೆಪಿಟಿಸಿಎಲ್ ಎಂಡಿ ಪಂಕಜಕುಮಾರ ಪಾಂಡೆ, ಬೆಸ್ಕಾಂ ಎಂಡಿ ಡಾ. ಎನ್.ಶಿವಶಂಕರ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಪಾಟೀಲ, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಇದ್ದರು.

- - -

ಬಾಕ್ಸ್‌* ಶೀಘ್ರದಲ್ಲೇ 3000 ಪವರ್ ಮ್ಯಾನ್‌ಗಳ ನೇಮಕ - ಪಾರದರ್ಶಕ ನೇಮಕಾತಿ, ಯಾರಿಗೂ ದುಡ್ಡು ಕೊಡಬೇಡಿ ಎಂದ ಸಚಿವ ದಾವಣಗೆರೆ: ಇಂಧನ ಇಲಾಖೆಯಿಂದ ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಸುತ್ತಿದ್ದು, ಇನ್ನಷ್ಟು ಗುಣಮಟ್ಟ ಕಾಪಾಡಿಕೊಳ್ಳಲು ಅಗತ್ಯವಿರುವ 3000 ಪವರ್ ಮ್ಯಾನ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 3 ಸಾವಿರ ಪವರ್ ಮ್ಯಾನ್ ಹುದ್ದೆಗೆ ಈಗಾಗಲೇ 3 ಲಕ್ಷ ಅರ್ಜಿ ಸ್ವೀಕೃತವಾಗಿವೆ. ಅರ್ಜಿಗಳ ಪರಿಶೀಲನಾ ಹಂತ ಮುಗಿದಿದ್ದು, 1 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದರು.

ಅರ್ಜಿಗಳಲ್ಲಿ 1:5ರ ಅನ್ವಯ ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಿ, ಅಂತಿಮವಾಗಿ ಅತ್ಯಂತ ಪಾರದರ್ಶಕವಾಗಿ ಮೀಸಲಾತಿ ಹಾಗೂ ಅಂಕಗಳ ಆಧಾರದ ಮೇಲೆ ಏಪ್ರಿಲ್ ಒಳಗಾಗಿ ನೇಮಕಾತಿ ನಡೆಯಲಿದೆ. ಆದರೆ, ಯಾವುದೇ ಮಧ್ಯವರ್ತಿಗಳಿಗೆ ಪವರ್ ಮ್ಯಾನ್‌ ಹುದ್ದೆಯ ಆಸಕ್ತರು, ಅಭ್ಯರ್ಥಿಗಳು ಹಣ ಕೊಟ್ಟು ಕಳೆದುಕೊಳ್ಳಬೇಡಿ. ನಿಮಗೆ ಯಾರಾದರೂ ಆಮಿಷವೊಡ್ಡಿದಲ್ಲಿ ತಕ್ಷಣ ಇಲಾಖೆ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಎಲ್ಲ ವರ್ಗದವರಿಗೂ ಅನ್ವಯಿಸಲಿದೆ. 200 ಯುನಿಟ್‌ವರೆಗೆ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಇದನ್ನು ಫಲಾನುಭವಿಗಳು ವರ್ಷದಲ್ಲಿ ಉಪಯೋಗಿಸುವ ಯುನಿಟ್‍ಗಳನ್ನಾಧರಿಸಿ ಹೆಚ್ಚುವರಿಯಾಗಿ ಶೇ.10ರಷ್ಟು ಸೇರಿಸಿ ಬಳಕೆ ಯುನಿಟ್ ನಿಗದಿಯಾಗುತ್ತದೆ. ಆದರೆ, 200 ಯುನಿಟ್ ನಂತರ 1 ಯುನಿಟ್ ಹೆಚ್ಚಾದರೂ ವಿದ್ಯುತ್ ದರದಂತೆ ಬಿಲ್ ಪಾವತಿಸಬೇಕು ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ ಗೃಹಜ್ಯೋತಿಯಡಿ ನೋಂದಣಿಯಾದ 433897 ಆರ್.ಆರ್. ಸಂಖ್ಯೆಗಳಿದ್ದು, ವಿದ್ಯುತ್ ಸಂಪರ್ಕ ಪಡೆದ ಸ್ಥಾವರಗಳಲ್ಲಿ ಶೇ.88.93ರಷ್ಟು ಗೃಹಜ್ಯೋತಿಯಲ್ಲಿವೆ. ಈ ಸ್ಥಾವರಗಳಿಗೆ ಆಗಸ್ಟ್‌ 2023ರಿಂದ ಡಿಸೆಂಬರ್‌ 2024ರ ಅಂತ್ಯದವರೆಗೆ ₹309 ಕೋಟಿಯನ್ನು ಗ್ರಾಹಕರಿಗೆ ಸಬ್ಸಿಡಿ ನೀಡಿದ್ದು, ಅಷ್ಟೂ ಹಣ‍ವನ್ನು ನಮ್ಮ ಸರ್ಕಾರವೇ ಭರಿಸಿದೆ ಎಂದು ತಿಳಿಸಿದರು.

ಆಗ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ರೈತರ ಕೃಷಿ ಪಂಪ್ ಸೆಟ್‍ಗಳಿಗೆ ದಿನದಲ್ಲಿ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಜಿಲ್ಲೆಯ ಆನಗೋಡು, ಮಾಯಕೊಂಡ ಭಾಗದಲ್ಲಿ 3 ಅಥವಾ 4 ಗಂಟೆ ಕಾಲ ಮಾತ್ರ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡಲಾಗುತ್ತದೆ ಎಂದು ಪ್ರಸ್ತಾಪಿಸಿದರು. ಅದಕ್ಕೆ ಸಚಿವ ಜಾರ್ಜ್ ಪ್ರತಿಕ್ರಿಯಿಸಿ, ಎಲ್ಲ ರೈತರಿಗೂ ದಿನದಲ್ಲಿ 7 ಗಂಟೆ ವಿದ್ಯುತ್ ನೀಡುವುದು ಸರ್ಕಾರದ ನೀತಿ. ಅದರಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ಓವರ್ ಲೋಡಿಂಗ್ ಆದಾಗ ಅದನ್ನು ಬೇರೆಡೆ ವರ್ಗಾಯಿಸಿ 7 ಗಂಟೆ ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ನೀಡಲೇಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

ಕೃಷಿ ಪಂಪ್‍ಸೆಟ್‍ಗಳಿಗೆ 2004ರಿಂದ ಅಕ್ರಮ-ಸಕ್ರಮದಡಿ ಅನಧಿಕೃತ ಸಂಪರ್ಕವನ್ನು ಸಕ್ರಮ ಮಾಡುತ್ತಾ ಬರಲಾಗಿದೆ. ಇದರಡಿ ಮೂಲಭೂತ ಸೌಕರ್ಯದಡಿ ಮಾರ್ಗ, ಟಿ.ಸಿ. ಅಳವಡಿಕೆ ಮಾಡಲಾಗಿದೆ. ಬಾಕಿ 4946 ಪಂಪ್‍ಸೆಟ್‍ಗೆ ಮೂಲಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ರೈತರು ಸ್ವಂತವಾಗಿ ಮೂಲಸೌಕರ್ಯ ಮಾಡಿಕೊಂಡು ಕೃಷಿ ಪಂಪ್‍ಸೆಟ್‍ಗಳಿಗೆ ತಕ್ಷಣವೇ ಸಂಪರ್ಕ ಪಡೆಯಲು ಹಾಗೂ ಇಲಾಖೆಯಿಂದ ಮೂಲಸೌಕರ್ಯಕ್ಕಾಗಿ ಸರತಿಯಲ್ಲಿ ಕಾಯುವ 2 ಅವಕಾಶ ಮಾಡಿಕೊಟ್ಟಲ್ಲಿ ಸ್ವಂತವಾಗಿ ಮಾಡಿಕೊಳ್ಳುವ ರೈತರಿಗೆ ಅನುಕೂಲವಾಗುತ್ತದೆಂಬ ಚಿಂತನೆ ಮಾಡಲಾಗಿದೆ ಎಂದು ಅವರು ಹೇಳಿದರು.

- - - ಕೋಟ್‌ ಕುಸುಮ್ ಬಿ ಯೋಜನೆ ರೈತರ ಪಂಪ್‍ಸೆಟ್‍ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿದೆ. 7.5 ಎಚ್‍.ಪಿ.ವರೆಗೆ ಅವಕಾಶವಿದ್ದು, ರೈತರು ಶೇ.20ರಷ್ಟು ವಂತಿಗೆ ಕಟ್ಟಬೇಕು. ಕೇಂದ್ರ ಶೇ.30 ಹಾಗೂ ರಾಜ್ಯ ಶೇ.50ರಷ್ಟು ಸಹಾಯಧನ ಘಟಕ ವೆಚ್ಚಕ್ಕೆ ನೀಡಲಿದೆ. ಕುಸುಮ್-ಸಿ ಯೋಜನೆಯಡಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸುವ ಮೂಲಕ ಗ್ರಿಡ್‍ಗೆ ಪೂರೈಕೆ ಮಾಡುವುದಾಗಿದೆ. ರೈತರು ಸೋಲಾರ್ ಪಂಪ್‍ಸೆಟ್ ಅಳವಡಿಕೆಗೆ ಮುಂದೆ ಬಂದಲ್ಲಿ ಹೆಚ್ಚು ಅನುಕೂಲ

-ಕೆ.ಜೆ.ಜಾರ್ಜ್‌, ಇಂಧನ ಸಚಿವ

- - --18ಕೆಡಿವಿಜಿ1, 2, 3.ಜೆಪಿಜಿ:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!