ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಂಜುಮ್ ಅವರ ಪುಸ್ತಕ ಅಕ್ಕಮಹಾದೇವಿಯವರ ಬರಹಗಳನ್ನ ಮತ್ತೊಮ್ಮೆ ನೆನಪಿಸುತ್ತಿದೆ ಎಂದು ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಭಾರತಿ ದೇವಿ ಹೇಳಿದರು.ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸಕಿ ಬಿ.ಎಸ್.ಅಂಜುಮ್ ರವರ ಕಾಡುವ ಹುಡುಗನ ಹಾಡು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಬ್ಬ ಹೆಣ್ಣು ಮಗಳು ದಿಟ್ಟವಾಗಿ ತನ್ನ ನಿಲುವನ್ನು ಪುಸ್ತಕದ ಮೂಲಕ ಹೇಳಿರುವುದು ಇಲ್ಲಿ ಕಾಣ ಸಿಗುತ್ತದೆ. ಕಾಡುವ ಹುಡುಗನ ಹಾಡು ಪುಸ್ತಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಬರಹಗಳ ಮೂಲಕ ನಾಂದಿ ಹಾಡಲಿ. ಮುಂಬರುವ ದಿನಗಳಲ್ಲಿ ಯುವ ಲೇಖಕಿಯಿಂದ ಇನ್ನಷ್ಟು ಪುಸ್ತಕಗಳು ಹೊರಹೊಮ್ಮುಲಿ ಎಂದು ಆಶಿಸಿದರು.ಕೀಳಂಬಿ ಸಮೂಹ ಉದ್ಯಮಗಳ ನಿರ್ದೇಶಕ ರಾಜೇಶ್ ಕೀಳಂಬಿ ಮಾತನಾಡಿ, ಕಾಡುವ ಹುಡುಗನ ಹಾಡು ಪುಸ್ತಕವನ್ನು ಓದಿದಾಗ ಹಳೆಯ ಕಾಲೇಜು ದಿನಗಳು ಮರುಕಳಿಸುತ್ತವೆ ಎಂದರು.
ಹಿರಿಯ ಸಾಹಿತಿ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ಯುವ ಲೇಖಕರು ಕೇವಲ ಒಂದೇ ಪ್ರಕಾರದ ಪುಸ್ತಕಗಳನ್ನು ಬರೆಯದೇ ಎಲ್ಲಾ ರೀತಿಯ ಬರಹಗಳಿಗೂ ಒತ್ತು ನೀಡಬೇಕು ಎಂದರು.ಸುವ್ವಿ ಪಬ್ಲಿಕೇಷನ್ಸ್‌ನ ಪ್ರಕಾಶಕ ಬಿ.ಎನ್.ಸುನೀಲ್ ಕುಮಾರ್ ಮಾತನಾಡಿ, ಇಂದಿನ ಯುವ ಪೀಳಿಗೆ ಕೇವಲ ವಾಟ್ಸಾಪ್, ಪೇಸ್ಬುಕ್ ನಲ್ಲಿಯೇ ಕಾಲಕಳೆಯುತ್ತಿರುವುದು ವಿಪರ್ಯಾಸ. ವಿಧ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಪತ್ರಕರ್ತ ಡಾ.ಸುಧೀಂದ್ರ ಮಾತನಾಡಿ, ಕಾಡುವ ಹುಡುಗನ ಹಾಡು ಅನುಭವ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವ ಪುಸ್ತಕ, ಓದುಗರನ್ನು ಸೆಳೆದಿಟ್ಟುಕೊಳ್ಳುತ್ತದೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿ ಮಾತನಾಡಿ, ಯುವ ಲೇಖಕಿಯ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ ವೃಂದ, ಗುರು-ಹಿರಿಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಅನೇಕರು ಉಪಸ್ಥಿತರಿದ್ದರು.