‘ಕಾಂತಾರ 1’ ಸಿನಿಮಾ ಬಿಡುಗಡೆ ದಿನಾಂಕ ಶೀಘ್ರ ಪ್ರಕಟ: ರಿಷಬ್‌ ಶೆಟ್ಟಿ

KannadaprabhaNewsNetwork |  
Published : Oct 10, 2024, 02:19 AM IST
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಿಷಬ್‌ ಶೆಟ್ಟಿ  | Kannada Prabha

ಸಾರಾಂಶ

‘ಕಾಂತಾರ 1’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ, ಆದಷ್ಟು ಬೇಗ ನಿರ್ಮಾಪಕರು ಬಿಡುಗಡೆಯ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ, ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಕಾಂತಾರ ಸಿನಿಮಾಗೆ ಲಭಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ದೆಹಲಿಯಲ್ಲಿ ಸ್ವೀಕರಿಸಿದ ರಿಷಬ್‌ ಶೆಟ್ಟಿ ಬುಧವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸುದ್ದಿಗಾರರಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ಕಾಂತಾರ 1’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ, ಆದಷ್ಟು ಬೇಗ ನಿರ್ಮಾಪಕರು ಬಿಡುಗಡೆಯ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ, ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಕಾಂತಾರ ಸಿನಿಮಾಗೆ ಲಭಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ದೆಹಲಿಯಲ್ಲಿ ಸ್ವೀಕರಿಸಿದ ರಿಷಬ್‌ ಶೆಟ್ಟಿ ಬುಧವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು. ಈ ವೇಳೆ ಸುದ್ದಿಗಾರರಲ್ಲಿ ಮಾತನಾಡಿದ ಅ‍ವರು, ಕಾಂತಾರ 1 ಸಿನಿಮಾ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಈ ಹಿಂದೆ ಕಾಂತಾರಕ್ಕೆ ಎಷ್ಟು ಹೆಮ್ಮೆ ಪಟ್ಟಿದ್ದೀರೋ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರಿ ಎಂದರು.

ದೈವವನ್ನು ಅನುಕರಣೆ ಮಾಡಬೇಡಿ:

ಕಾಂತಾರ ಸಿನಿಮಾ ಬಳಿಕ ವಿವಿಧ ವೇದಿಕೆಗಳಲ್ಲಿ ಮನೋರಂಜನೆಗಾಗಿ ದೈವಾರಾಧನೆಗೆ ಅಪಮಾನ, ಅಪಹಾಸ್ಯ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂತಾರ ಬರುವ ಮುಂಚೆ ಸುಮಾರು ಸಿನಿಮಾಗಳಲ್ಲಿ ದೈವರಾಧನೆ ವಿಚಾರ ಬಂದಿದೆ. ಚೋಮನ ದುಡಿಯಿಂದ ಇಲ್ಲಿಯ ವರೆಗೆ ಹಿಡಿದು ಅನೇಕ ಟಿವಿ ಧಾರಾವಾಹಿಗಳಲ್ಲೂ ದೈವಾರಾಧನೆ ಪ್ರದರ್ಶನವಾಗಿದೆ. ನಾವು ಮೊದಲ ಬಾರಿಗೆ ಮಾಡಿದ್ದಲ್ಲ, ಹಲವಾರು ಭಾಗಗಲ್ಲಿ ಪ್ರದರ್ಶನವನ್ನೂ ಮಾಡಿದ್ದಾರೆ. ಎಷ್ಟೋ ತುಳು ಸಿನಿಮಾಗಳು ದೈವಾರಾಧನೆ ಬಳಸಿ ಪ್ರಶಸ್ತಿ ಪಡೆದಿದೆ. ಸಿನಿಮಾ ಬಂದಾಗ ತುಂಬಾ ಜನಪ್ರಿಯವಾದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. ಬೇರೆ ಬೇರೆ ವೇದಿಕೆಗಳಲ್ಲಿ, ಕಾರ್ಯಕ್ರಮದಲ್ಲಿ ದೈವದ ವೇಷ ಹಾಕುವಾಗ ನೋವಾಗುತ್ತದೆ ಎಂದರು.

ನಾನು ಆರಂಭದಿಂದಲೂ ಜನರಲ್ಲಿ ಮನವಿ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂತರವನ್ನುಸಿನಿಮಾದ ರೀತಿಯಲ್ಲಿ ಮಾಡಿಲ್ಲ, ಹೊರಗಿನವರಿಗೆ ದೈವವನ್ನು ಸ್ಟೇಜ್ ಮೇಲೆ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು.

ವದಂತಿಗೆ ಕಿವಿಗೊಡಬೇಡಿ:

ಕಾಂತಾರ 1 ನಲ್ಲಿ ಮೋಹನ್‌ಲಾಲ್‌, ಜೂನಿಯರ್‌ ಎನ್‌ಟಿಆರ್‌ ನಟನೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ರಿಷಬ್ ಶೆಟ್ಟಿ, ಸಿನೆಮಾದಲ್ಲಿ ಇವರ ನಟನೆ ಎಲ್ಲ ವದಂತಿ, ಅದಕ್ಕೆ ಕಿವಿ ಕೊಡಬೇಡಿ. ಸದ್ಯಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಯೋಚನೆ ಇಲ್ಲ, ಶೂಟಿಂಗ್ ಮುಗಿಸುವ ಯೋಜನೆಯಲ್ಲಿ ಇದ್ದೇವೆ. ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಕಾರ್ಯಕ್ರಮ ಮಾಡುತ್ತೇವೆ ಎಂದರು.

........................

ಕಾಂತಾರ ಕ್ರೆಡಿಟ್‌ ದೈವನರ್ತಕ ಸಮುದಾಯಕ್ಕೆ, ಪ್ರಶಸ್ತಿ ದೈವದ ಪಾದಕ್ಕೆ..

ಕಾಂತಾರ ಸಿನಿಮಾ ಯಶಸ್ಸಿನ ಎಲ್ಲ ಹೆಗ್ಗಳಿಕೆ, ಪ್ರಶಸ್ತಿಗಳು ದೈವ ನರ್ತಕ ಸಮುದಾಯಕ್ಕೆ ಸಲ್ಲಬೇಕು ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಈ ರಾಷ್ಟ್ರೀಯ ಪ್ರಶಸ್ತಿ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಸುಮಾರು 200-300 ಜನ ಒಂದು ಕೋರ್ ಟೀಮ್ ಆಗಿ ಕೆಲಸ ಮಾಡಿದ್ದೇವೆ. ಇದು ದೈವದ ಬಗ್ಗೆ, ದೈವ ನರ್ತಕರ ಬಗ್ಗೆ, ಅವರ ಸಮುದಾಯದ ಬಗ್ಗೆ ಇರುವ ಸಿನಿಮಾ. ರಾಷ್ಟ್ರೀಯ ಪ್ರಶಸ್ತಿಯ ಹಿರಿಮೆ ದೈವ ನರ್ತಕ ಸಮುದಾಯಕ್ಕೆ ಸೇರಬೇಕು. ದೈವದ ಆಶೀರ್ವಾದ ಇಲ್ಲದಿದ್ದರೆ ಸಿನಿಮಾ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ದೈವದ ಆಶೀರ್ವಾದದಿಂದ ಸಿನಿಮಾ ಇಲ್ಲಿ ತನಕ ಬಂದಿದೆ. ಆ ದೈವಕ್ಕೆ, ದೈವದ ಪಾದಕ್ಕೆ ಈ ಪ್ರಶಸ್ತಿ ಅರ್ಪಿಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ