ಕನ್ನಡಪ್ರಭ ವಾರ್ತೆ ಪುತ್ತೂರು
ಸಾವಿರ ವರ್ಷಗಳ ಹೋರಾಟದ ಬಳಿಕವೂ ತನ್ನತನವನ್ನು ಉಳಿಸಿಕೊಂಡ ಏಕೈಕ ದೇಶವೆಂದರೆ ಅದುಭಾರತ. ಈ ಜಗತ್ತಿನಲ್ಲಿ ಹೊನ್ನಿಗಾಗಿ, ಹೆಣ್ಣಿಗಾಗಿ, ಅಧಿಕಾರಕ್ಕಾಗಿ ಯುದ್ಧಗಳು ನಡೆದಿವೆ. ಆದರೆ ತನ್ನ
ಸಂಸ್ಕೃತಿ, ತನ್ನ ಸಭ್ಯತೆಯ ಉಳಿವಿಗಾಗಿ ಒಂದು ಸಾವಿರ ವರ್ಷಗಳ ನಿರಂತರ ಯುದ್ಧವೇನಾದರೂನಡೆದಿದ್ದರೆ, ಅದು ಈ ಪುಣ್ಯಭೂಮಿ ಭಾರತದಲ್ಲಿ ಮಾತ್ರ ಎಂದು ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದ್ದಾರೆ.
ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ೨೫ ನೇ ಕಾರ್ಗಿಲ್ವಿಜಯೋತ್ಸವದ ಅಂಗವಾಗಿ ಸೋಮವಾರ ನಡೆದ ‘ಕಾರ್ಗಿಲ್ ವಿಜಯ - ಯೋಧ ನಮನ’ ಕಾರ್ಯಕ್ರಮದಲ್ಲಿ
ಭಾಗವಹಿಸಿ ಮಾತನಾಡಿದರು.ದೇಶ ಇಂದು ಪ್ರಜಾಸತ್ತಾತ್ಮಕ ದೇಶವಾಗಿ ಉಳಿದಿದೆ ಎಂದಾದರೆ ಅದಕ್ಕೆ ಹಿಂದು ಬಹುಸಂಖ್ಯಾತವಾಗಿರುವಂತಹ ನಮ್ಮ ಸಾಂಸ್ಕೃತಿಕ ಬುನಾದಿಯೇ ಕಾರಣವಾಗಿದೆ. ದೇಶ ಎಂದರೆ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ. ದೇಶಕ್ಕೆ ಅಪಾಯ ಒದಗಿದಾಗಲೆಲ್ಲಾ ಜಾತಿ, ನೀತಿ, ಮತ, ಪಂಥವನ್ನು ಬಿಟ್ಟು ಈ ದೇಶ ಒಂದಾಗಿದೆ. ಒಬ್ಬೊಬ್ಬ ಯೋಧನ ರಾಷ್ಟ್ರ ಪ್ರೇಮ ಹಾಗೂ ಈ ನೆಲದ ಋಣಭಾವದಿಂದಲೇ ಪ್ರಸ್ತುತ ದೇಶ ಸುಭದ್ರವಾಗಿದೆ. ಈ ದೇಶವನ್ನು ಅಖಂಡ ಭಾರತವನ್ನಾಗಿ
ಮಾಡಬೇಕು ಎನ್ನುವ ಹಂಬಲಕ್ಕೆ ಕಾರ್ಗಿಲ್ ವಿಜಯ ಸಂಭ್ರಮಾಚರಣೆ ಬುನಾದಿಯಾಗಬೇಕಾಗಿದೆ ಎಂದು ಹೇಳಿದರು.ಪ್ರಧಾನ ಅಭ್ಯಾಗತರಾಗಿ ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ಪೋಷಕ
ಎಂ. ವೆಂಕಟೇಶ್-ಅನುರಾಧಾ ವೆಂಕಟೇಶ್ ದಂಪತಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ನಿವೃತ್ತ ಯೋಧರಿಗೆ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸಶಸ್ತ್ರ ಪಡೆಗಳ ವೀರಗಾಥೆಯನ್ನು ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸಾಕ್ಷ್ಯಚಿತ್ರದ ಮೂಲಕ ಪ್ರದರ್ಶಿಸಲಾಯಿತು. ಬಳಿಕ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಗೌರವ ನಮನ ಸಲ್ಲಿಸಲಾಯಿತು.ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ವಹಿಸಿದ್ದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಾಂಶುಪಾಲ ಮಹೇಶ್ ನಿಟಿಲಾಪುರ ವಂದಿಸಿದರು. ಉಪನ್ಯಾಸಕಿ ಭಾಗ್ಯಶ್ರೀ ನಿರೂಪಿಸಿದರು.