ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಯುಕೊ ಸಂಘಟನೆ ನೇತೃತ್ವದಲ್ಲಿ ಕೊಡವ ಮಹಿಳೆಯರೆಲ್ಲ ಕಿರುಗೂರಿನ ನಿಯೋಜಿತ ಯುಕೊ ಸಂಘಟನೆಯ ಕೇಂದ್ರ ಸ್ಥಳದಲ್ಲಿ ಸೇರಿ ಸಾಂಪ್ರದಾಯಿಕವಾಗಿ ನೆಲ್ಲಕ್ಕಿಯಲ್ಲಿ ನಿಂತು ಪ್ರಾರ್ಥಿಸಿ, ನಂತರ ಕಿರುಗೂರಿನ ಚೆಪ್ಪುಡಿರ ಸುಜು ಕರುಂಬಯ್ಯನವರ ಭತ್ತದ ಗದ್ದೆಗೆ ತೆರಳಿ, ನಡು ಬೇದ ಸಂಪ್ರದಾಯದಂತೆ ಹೆಂಗಳೆಯರೆಲ್ಲ ಸೇರಿ ಭೂಮಿಗೆ ‘ತೋರ ತೊಪ್ಪು’ ಎಂದು ಕರೆಯಲ್ಪಡುವ ವಿಶೇಷ ಎಲೆಯಲ್ಲಿ ಅಕ್ಕಿಯನ್ನು ಇಟ್ಟು, ಭೂಮಿಗೆ ಕೈ ಎಣ್ಣೆ ಸುರಿದು, ಪಕ್ಕದಲ್ಲಿ ಮಿಳ್ಳಿಯಲ್ಲಿ ನೀರು, ಮರದ ಬಾಚಣಿಕೆಯನ್ನಿಟ್ಟು‘ಭೂಮಿ ತಾಯಿ, ನೀಡ ಉಟ್ಟಿ ಮಂಡೆ ಕಾಂಜದ್ ತಂಪಾಡ್, ಕುಂಬ್ಯಾತ್ ಮಳೆಯಾಯಿತ್, ಕುಂದ್ ಲೂ ಕೂಳಾಡ್’ ಎಂದು ಸೂರ್ಯ ದೇವನಿಗೆ ಅಕ್ಕಿಯನ್ನು ಪ್ರೋಕ್ಷಣೆ ಮಾಡಿ ಭೂಮಿ ತಾಯಿಯ ಪಾದ ಮುಟ್ಟಿ ನಮಸ್ಕರಿಸಿ ಪ್ರಾರ್ಥಿಸಲಾಯಿತು.
ಆ ನಂತರ ಕಿರುಗೂರಿನ ಯುಕೊ ಸಂಘಟನೆಯ ನಿಯೋಜಿತ ಸ್ಥಳದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಈ ಬೇದ ಚಂಗ್ರಾಂದಿ ಆಚರಣೆಯಲ್ಲಿ ಹೆಣ್ಣು ಮಕ್ಕಳೇ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ಈ ಆಚರಣೆಯು ‘ಮಣ್ಣ್ ಮನಸ್ಥಾನಕ್ಕೆ’ ವಿಶೇಷ ಆದ್ಯತೆಯನ್ನು ನೀಡುವ ಕೊಡವ ಜನಾಂಗ ಮತ್ತು ಪ್ರಕೃತಿ ನಡುವಿನ ಭಾವನಾತ್ಮಕ ಸಂಬಂಧವನ್ನು ದೃಡಪಡಿಸುತ್ತದೆ. ಭೂಮಿ ತಾಯಿಗೆ ಸಾಕ್ಷಾತ್ ಹೆಣ್ಣಿನ ಸ್ಥಾನ ನೀಡಿ, ಬೇದ ಚಂಗ್ರಾಂದಿಯ ಮೂರು ದಿನ ಆಕೆಗೆ ಮುಟ್ಟಿನ ದಿನವೆಂಬ ನಂಬಿಕೆಯೊಂದಿಗೆ, ಆ ದಿನಕ್ಕೆ ಸಂಬಂದಿಸಿದಂತೆ ಹೆಣ್ಣಿಗೆ ಮಾಡುವ ಆರೈಕೆಯನ್ನು ಭೂಮಿ ತಾಯಿಗೆ ಮಾಡುವುದೇ ನಡುಬೇದ ಆಚರಣೆಯ ಪ್ರಾಮುಖ್ಯತೆಯಾಗಿದೆ. ಮಹಿಳೆಯರೇ ಸಾಂಪ್ರದಾಯಿಕವಾಗಿ ಈ ಆಚರಣೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದು ಈ ಆಚರಣೆಯ ವಿಶೇಷ. ಹಾಗೆಯೇ ಈ ಆಚರಣೆಯು ಕೊಡವ ಮಹಿಳೆಯರ ಆರೋಗ್ಯ ಹಾಗೂ ಆರೈಕೆ ದೃಷ್ಟಿಯಿಂದಲೂ, ಹೆಣ್ಣು ಹಾಗು ಭೂಮಿಯ ಫಲವತ್ತತೆಯ ದೃಷ್ಠಿಯಿಂದಲೂ ಮಹತ್ವ ಪಡೆದುಕೊಂಡಿರುವುದರಿಂದ ‘ನಡುಬೇದ ಚಂಗ್ರಾಂದಿ’ ಆಚರಿಸುವ ಫೆ. 12ನೇ ತಾರೀಕನ್ನು ಕಳೆದ ವರ್ಷ ಘೋಷಿಸಿದಂತೆ ಇಂದು ‘ಜಾಗತಿಕ ಕೊಡವ ಹೆಣ್ಣು ಮಕ್ಕಳ ದಿನ’ವಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು. ಡಾ. ಕಾಳಿಮಾಡ ಶಿವಪ್ಪ, ಕೊಡವ ಜನಾಂಗಕ್ಕೆ ಜಾಗತಿಕವಾಗಿ ಗೌರವ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ನಮ್ಮ ಮಣ್ಣು ಮನಸ್ಥಾನವೆಂಬ ಅಸ್ಥಿತ್ವವೇ ಮೂಲ ಕಾರಣ. ಕೊಡವರಲ್ಲಿನ ಬುದ್ಧಿವಂತಿಕೆ, ಚತುರತೆ, ಸತ್ಯ ನಿಷ್ಠೆ, ಸೌಂದರ್ಯ, ಎಲ್ಲದರಲ್ಲೂ ನಮ್ಮ ಮಣ್ಣು ಮನಸ್ಥಾನಗಳ ಪ್ರಭಾವವಿದೆ. ನಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಜೀವಿತವನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು ಎಂದು ಹೇಳಿದರು.ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, ಬೇದವೆಂಬ ಪದವನ್ನು ನಾವು ಕೇಳುತ್ತಾ ಬೆಳೆದಿದ್ದೇವೆ, ಆದರೆ ಮಹತ್ವ ತಿಳಿದಿರಲಿಲ್ಲ. ಒಂದು ಜನಾಂಗದ ಅಸ್ಥಿತ್ವವು ಆ ಜನಾಂಗದ ಪರಂಪರೆಗಳ ಪರಿಪಾಲನೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಬೇದ ಚಂಗ್ರಾಂದಿಯಂತಹ ಆಚರಣೆಗಳು ಕೊಡವಾಮೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನಿವಾರ್ಯವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.