ಕನ್ನಡಪ್ರಭ ವಾರ್ತೆ ಕೋಲಾರ
ಚುನಾವಣಾ ನಾಮಪತ್ರ ಸಲ್ಲಿಸಿದವರಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಅಜಯ್ ಕುಮಾರ್, ರಾಜ್ಯಪರಿಷತ್ ಸ್ಥಾನಕ್ಕೆ ಜಿಪಂ ಕುಡಿಯುವ ನೀರು ಸರಬರಾಜು ಇಲಾಖೆಯ ಎನ್.ಶ್ರೀನಿವಾಸರೆಡ್ಡಿ, ಆರೋಗ್ಯ ಇಲಾಖೆಯ ಪ್ರೇಮಾರಾಜು ಹಾಗೂ ಖಜಾಂಚಿ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ವಿ.ಮುರಳಿ ಮೋಹನ್ ನಾಮಪತ್ರ ಸಲ್ಲಿಸಿದರು.
ಬಣದಲ್ಲಿ ಸಾಮಾಜಿಕ ನ್ಯಾಯ:ಚುನಾವಣೆಯಲ್ಲಿ ಹಾಲಿ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ಬಣದಿಂದ ಪರಿಶಿಷ್ಟ ಜಾತಿ ಮಹಿಳೆ ಪ್ರೇಮಾರಾಜು, ವಕ್ಕಲಿಗ ಸಮುದಾಯದಿಂದ ವೆಂಕಟಾಚಲಪತಿಗೌಡ, ಹಿಂದುಳಿದ ವರ್ಗದಿಂದ ಸ್ವತಃ ಅಧ್ಯಕ್ಷರೇ ಕಣದಲ್ಲಿದ್ದು, ತಲಾ ಒಂದೊಂದು ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ.
ಕಳೆದ ಸೋಮವಾರವೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಜಿ.ಸುರೇಶ್‌ಬಾಬು ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಖಜಾಂಚಿ ಸ್ಥಾನಕ್ಕೆ ಶಿಕ್ಷಕ ಗೆಳೆಯರ ಬಳಗದ ವೆಂಕಟಾಚಲಪತಿಗೌಡ ಅಂದೇ ನಾಮಪತ್ರ ಸಲ್ಲಿಸಿದ್ದು, ಇದೀಗ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಮೂರು ಹುದ್ದೆಗಳಿಗೂ ನೇರ ಹಣಾಹಣಿ ಎದುರಾದಂತಾಗಿದೆ.
ಜಿಲ್ಲೆಯ ಎಲ್ಲಾ ಐದು ತಾಲೂಕುಗಳ ಅಧ್ಯಕ್ಷರ ಐದು ಮತ ಹಾಗೂ ಜಿಲ್ಲಾ ಕೇಂದ್ರದ ಎಲ್ಲಾ ವೃಂದ ಇಲಾಖೆಗಳ ೬೬ ನಿರ್ದೇಶಕರು ಸೇರಿದಂತೆ ಒಟ್ಟು ೭೧ ಮತದಾರರು ಇಲ್ಲಿ ಮತದಾನದ ಅರ್ಹತೆ ಪಡೆದುಕೊಂಡಿದ್ದಾರೆ.
ಈ ನಡುವೆ ಜಿಲ್ಲಾ ನೌಕರರ ಸಂಘದ ಚುನಾವಣೆಯಲ್ಲಿ ಮತದಾರರಾಗಿರುವ ನೌಕರರೇ ತಮ್ಮ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಈ ನಡುವೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಹೆಸರು ಹೇಳಿಕೊಳ್ಳಲು ಇಚ್ಛಿಸದ ಕೆಲವು ನೌಕರರು ನೋವು ತೋಡಿಕೊಂಡಿದ್ದು, ನೌಕರರ ಸಂಘದ ನಿರ್ದೇಶಕರಿಗೆ ಒತ್ತಡ ಹಾಕುತ್ತಿರುವುದಲ್ಲದೇ ರಾಜಕೀಯ ಪ್ರಭಾವ ಬೀರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಈ ಚುನಾವಣೆಯಲ್ಲಿ ರಹಸ್ಯ ಮತದಾನ ನಡೆಯುವುದರಿಂದ ಯಾರು ಯಾರಿಗೆ ಮತ ಹಾಕಿದರೂ ಎಂದು ಗೊತ್ತಾಗದ ಕಾರಣ ಕೆಲವು ಕಡೆಗಳಲ್ಲಿ ಆಣೆ, ಪ್ರಮಾಣಗಳ ಭರಾಟೆ ಜೋರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.